ಜಿಲ್ಲೆ

ಅಮ್ಮ ಮನೆಗೆ ಯಾವಾಗ ಬರ್ತಿಯಾ...?

ಗದಗ: ಅಮ್ಮ ಮನೆಗೆ ಬಾ...ಮಮ್ಮಿ ಮನೆಗೆ ಯಾವಾಗ ಬರ್ತೀಯಾ, ಮೂರು ದಿನಗಳಿಂದ ಕಾಯ್ತಾ ಇದೀನಿ, ನೀನು ಬರ್ತಾನೆ ಇಲ್ಲ ಎಂದು ಪುಟ್ಟ ಕಂದಮ್ಮಗಳು ಕಣ್ಣೀರಾಗ್ತಿದೆ. ಸಂಜೆಗೆ ಬರ್ತೀನಿ ಮಗಳೇ, ಅಮ್ಮ ಅಜ್ಜನ ಜತೆ ಆಟ ಅಡು, ಸರಿಯಾಗಿ ಊಟ ಮಾಡು, ಬೇಜಾರು ಮಾಡ್ಕೊಬೇಡ ಅಂತ ಆ ಮಹಾತಾಯಿಯರು ಮಗುವಿಗೆ ಸಮಾಧಾನಪಡಿಸಿ ಸಂಕಟ ಅನುಭವಿಸುತ್ತಲೇ ಮತ್ತೆ ಸೇವೆಯಲ್ಲಿ ನಿರತರಾಗುತ್ತಾರೆ.

ಕಳೆದ ಒಂದು ತಿಂಗಳಿಂದ ಕರೊನಾ ವೈರಸ್ ಹರಡುವಿಕೆ ತಡೆಗಟ್ಟುವ ಸಲುವಾಗಿ 24*7 ಮಾದರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ನರ್ಸ್, ಆಶಾ ಕಾರ್ಯಕರ್ತೆಯರು ಹಾಗೂ ಅವರ ಮಕ್ಕಳ ನಡುವೆ ನಿತ್ಯ ನಡೆಯುತ್ತಿರುವ ಸಂಭಾಷಣೆ ಇದು. ಕುಟುಂಬದ ವಿರೋಧದ ನಡುವೆಯೂ ಕರ್ತವ್ಯಕ್ಕೆ ಹಾಜರಾಗುತ್ತಿರುವ ಆಶಾ ಕಾರ್ಯಕರ್ತೆಯರು ಮತ್ತು ನರ್ಸ್​ಗಳ ದಿಟ್ಟ ಹೋರಾಟದ ಕಥೆ ಇದು.

ಜೀವದ ಹಂಗು ಮೆಟ್ಟಿ ನಿಂತು ವೈದ್ಯರ ಜತೆಗೂಡಿ ಕರೊನಾ ಸೋಂಕಿತರು, ಶಂಕಿತರ ಉಪಚಾರದಲ್ಲಿ ಇವರು ಮಗ್ನರಾಗಿದ್ದಾರೆ. ಆದರೆ, ಕುಟುಂಬದಿಂದ ದೂರವಿದ್ದು ಅವರು ಅನುಭವಿಸುತ್ತಿರುವ ನೋವು, ಸಂಕಟ ಹೇಳಿಕೊಳ್ಳಲಾರದಂತಿದೆ.

ಮನೆಯಲ್ಲಿ ಹಾಲು ಕುಡಿಯುವ ಪುಟ್ಟ ಕಂದಮ್ಮಗಳನ್ನು ಬಿಟ್ಟು ಮನೆ ಮನೆಗೂ ಅಲೆದಾಡುತ್ತಿದ್ದಾರೆ. ನಗರದ ಆರೋಗ್ಯ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ನರ್ಸ್​ಗಳು ವೈಯಕ್ತಿಕ ಸಂಕಷ್ಟದಲ್ಲೂ ಕೆಲಸ ಮಾಡುತ್ತಿದ್ದಾರೆ. ಆರು ವರ್ಷದ ಮಗ, ಪತಿ ಸೇರಿ ಕುಟುಂಬದಿಂದ ದೂರ ಇದ್ದವರಿದ್ದಾರೆ. ಒಂದೂವರೆ ವರ್ಷದ ಮಗುವನ್ನು ಬೇರೆಯವರ ಕೈಗೊಪ್ಪಿಸಿ ಕರ್ತವ್ಯಕ್ಕೆ ಹಾಜರಾಗಿರುವ ದಿಟ್ಟ ಮಹಿಳೆಯರಿದ್ದಾರೆ. ಹೀಗೆ ಪ್ರತಿಯೊಬ್ಬರ ಆರೋಗ್ಯ ರಕ್ಷಣೆಯಲ್ಲಿ ತೊಡಗಿರುವವರ ಹಿಂದಿರುವ ಕಣ್ಣೀರ ಕಥೆ ಮಾತ್ರ ಯಾರಿಗೂ ಕಾಣುವುದಿಲ್ಲ. ಒಬ್ಬೊಬ್ಬರದು ಒಂದೊಂದು ಕತೆ ಇದೆ. ಸೋಂಕು ಹರಡುವ ಭೀತಿ, ಮನೆಯವರ ವಿರೋಧದ ನಡುವೆಯೂ ಜನರ ಪ್ರಾಣ ರಕ್ಷಿಸಿ ಆಪತ್ಬಾಂಧವರಾಗುತ್ತಿದ್ದಾರೆ.

ಗದಗ ನಗರದ ಕರೊನಾ ಹಾಟ್​ಸ್ಪಾಟ್ ಎನಿಸಿರುವ ರಂಗನವಾಡಿ ಗಲ್ಲಿಯಲ್ಲಿ ಪ್ರತಿನಿತ್ಯ ಬೆಳಗ್ಗೆ 9 ಗಂಟೆಗೆ ಕೆಲಸ ಆರಂಭಿಸುತ್ತಾರೆ. ಸದ್ಯ ರಂಗನವಾಡಿ ಗಲ್ಲಿ ಸಂಪೂರ್ಣ ಸೀಲ್ ಡೌನ್ ಮಾಡಲಾಗಿದ್ದು, ಪ್ರತಿಯೊಂದು ರಸ್ತೆಯನ್ನು ಕಬ್ಬಿಣದ ಗ್ರಿಲ್ ಹಾಕಿ ಲಾಕ್ ಮಾಡಲಾಗಿದೆ. ಇದೇ ಪ್ರದೇಶದಲ್ಲಿ ಮನೆಮನೆಗೆ ತೆರಳಿ ಸರ್ವೆ ಮಾಡುತ್ತಾರೆ. ಆಶಾ ಕಾರ್ಯಕರ್ತೆಯರು, ನರ್ಸ್​ಗಳ ಮುಖ್ಯಸ್ಥರಾಗಿ ಡಾ.ಎಸ್.ಎಸ್. ನೀಲಗುಂದ ಫೀಲ್ಡಿಗಿಳಿದು ಕೆಲಸ ಮಾಡುತ್ತಾರೆ. ಜಿಲ್ಲೆಯ ಪ್ರತಿ ಹಳ್ಳಿಗಳಿಗೂ ತೆರಳಿ ಆರೋಗ್ಯ ಮಾಹಿತಿ ಕಲೆ ಹಾಕುತ್ತಿರುವ ಇವರು ಎಚ್ಚರ ತಪ್ಪಿದರೆ ಅಪಾಯ ಕಟ್ಟಿಟ್ಟ ಬುತ್ತಿ. ಆದರೂ, ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದೇ ಕೆಲಸ ಮುಂದುವರಿಸಿದ್ದಾರೆ.

ಇಂತಹ ಗಂಭೀರ ಪರಿಸ್ಥಿತಿಯಲ್ಲಿ ಕೆಲಸ ಮಾಡುತ್ತಿರುವ ನರ್ಸ್ ಮತ್ತು ಆಶಾ ಕಾರ್ಯಕರ್ತೆಯರು ಮನೆಯವರು ಮತ್ತು ಮಕ್ಕಳನ್ನು ಮೊಬೈಲ್​ನಲ್ಲಿ ವಿಡಿಯೋ ಕಾಲ್ ಮೂಲಕ ಸಂರ್ಪಸಿ ಮಾತನಾಡುತ್ತಾರೆ. ನಾವು ಮಾಡುವ ಕೆಲಸ ಗಂಭೀರವಾದದ್ದು ಎಂಬುದು ಅರಿವಿದೆ. ಸಾಧ್ಯವಾದಷ್ಟು ಸುರಕ್ಷಿತವಾಗಿ ಕೆಲಸ ಮಾಡುತ್ತೇವೆ ಮತ್ತು ನಮ್ಮ ಫ್ಯಾಮಲಿ ಕೂಡಾ ಸೇಫಾಗಿರಬೇಕೆಂದು ಹೇಳುವಾಗ ನರ್ಸ್ ಸುಮಾ, ಆಶಾ ಕಾರ್ಯಕರ್ತೆ ವನಜಾಕ್ಷಿ ಅವರ ಕಣ್ಣಂಚಲ್ಲಿ ನೀರು ಜಿನಗತೊಡಗಿತ್ತು.

ಕರೊನಾ ವೈರಸ್ ಹರಡುವಿಕೆ ತಡೆಗಟ್ಟಲು ಮಾಡುತ್ತಿರುವ ಕಾರ್ಯಕ್ಕೆ ಕಿಂಚತ್ ಬೇಜಾರಿಲ್ಲ. ಅತ್ಯಂತ ಖುಷಿಯಿಂದ ಮಾಡುತ್ತೇವೆ. ಸಮಾಜದ ಆರೋಗ್ಯಕ್ಕಾಗಿ ನಾವು ಕೆಲಸ ಮಾಡುತ್ತಿದ್ದೇವೆ. ಆದರೆ, ಮನೆ ಕಡೆಗೆ ನೆನಪಾದರೆ ಹೆದರಿಕೆಯೂ ಆಗುತ್ತದೆ. ಜೀವದ ಹಂಗು ತೊರೆದು ಕೆಲಸ ಮಾಡುತ್ತಿರುವ ನಮಗೆ ಸಮಾಜದಿಂದ ಹೆಚ್ಚು ಗೌರವ ಸಿಗುತ್ತಿದೆ. ವೈದ್ಯರ ಮೇಲೆ ಜನರಿಗೆ ಯಾವತ್ತಿಗೂ ಗೌರವವಿದೆ. ಆದರೆ, ಕರೊನಾ ವೈರಸ್ ಬಂದ ನಂತರವಂತೂ ವೈದ್ಯರ ಕಾರ್ಯವನ್ನು ಜನರು ಮತ್ತಷ್ಟು ಪ್ರೀತಿಸುತ್ತಿದ್ದಾರೆ.|ಡಾ. ಎಸ್.ಎಸ್. ನೀಲಗುಂದ, ವೈದ್ಯಾಧಿಕಾರಿ, ಗದಗ