ಮೈಸೂರು: ಅಮೆರಿಕಾದ ಫ್ಲೋರಿಡಾ ರಾಜ್ಯದ ಲೇಕ್‌ಲ್ಯಾಂಡ್ ನಗರದಲ್ಲಿ ಆಗಸ್ಟ್ 29ರಿಂದ ಮೂರು ದಿನ ಕಾಲ 8ನೇ ನಾವಿಕ ವಿಶ್ವ ಕನ್ನಡ ಸಮಾವೇಶ 2025 ಹಮ್ಮಿಕೊಳ್ಳಲಾಗಿದೆ.
ಬೆಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ನಾವಿಕ ಅಧ್ಯಕ್ಷ ಶಿವಕುಮಾರ್, ಸಮಾವೇಶ ಸಂಚಾಲಕರಾದ ಹರ್ಷಿತ್ ಗೌಡ, ಹಿರಿಯ ನಟ ಶ್ರೀನಾಥ್, ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್, ಗಾಯಕ ಅಲೋಕ್ ಬಾಬು (ಆಲ್‌ಒಕೆ) ಅವರು ಸಮಾವೇಶ ಬಗ್ಗೆ ಮಾಹಿತಿ ಹಂಚಿಕೊಂಡರು
.
ಹಿರಿಯ ನಟ ಶ್ರೀನಾಥ್ ಮಾತನಾಡಿ, ವಿಶ್ವದಲ್ಲಿ ಎಲ್ಲೆಲ್ಲೋ ಚದುರಿ ಹೋಗಿರುವ ಕನ್ನಡಿಗರು ಅನೇಕ ಜನ ನಾವಿಕ ವಿಶ್ವ ಕನ್ನಡ ಸಮಾವೇಶಕ್ಕೆ ಬರುತ್ತಾರೆ. ಮೂರು ದಿನ ಅಲ್ಲಿ ಕನ್ನಡ, ಕನ್ನಡ ಕಲರವ ಇರಲಿದೆ ಎಂದು ಹೇಳಿದರು.
ಈ ಸಮಾವೇಶದಲ್ಲಿ ಬಿಸಿನೆಸ್ ಫೋರಮ್, ವುಮೆನ್ಸ್ ಫೋರಮ್ ಕವಿಗೋಷ್ಠಿ, ಯೂಥ್ ಫೋರಮ್, ಸಾಹಿತ್ಯ ಗೋಷ್ಠಿ ಹೀಗೆ ಅನೇಕ ಕಾರ್ಯಕ್ರಮಗಳು ನಡೆಯಲಿವೆ. ಅನಿವಾಸಿಯರು ಮಾತ್ರವಲ್ಲದೇ ಕರ್ನಾಟಕದ ಕಲಾವಿದರಿಂದ ವೈವಿಧ್ಯಮಯ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.
ವಿಶ್ವ ಕನ್ನಡಿಗರ ಸಂಸ್ಥೆಯು ಫ್ಲೋರಿಡಾ ರಾಜ್ಯದಲ್ಲಿರುವ ಪ್ರಮುಖ ಕನ್ನಡ ಸಂಘಗಳಾದ ಶ್ರೀಗಂಧ ಕನ್ನಡ ಕೂಟ, ಟಾಂಪ, ಒಲಾರ್ಂಡೋ ಕನ್ನಡ ಕೂಟ, ನಂದಿ ಕನ್ನಡ ಕೂಟ, ಮಯಾಮಿ ಮತ್ತು ಸವಿಕನ್ನಡ ಕೂಟ ಜ್ಯಾಕ್ಸನ್ವೆಲ್ ಸಹಯೋಗದೊಂದಿಗೆ ಈ ಸಮಾವೇಶವನ್ನು ಆಯೋಜಿಸುತ್ತಿದೆ. ಈ ಜಾಗತಿಕ ಸಮಾವೇಶವು ನಮ್ಮ ಭಾಷೆ, ಸಂಸ್ಕೃತಿ ಮತ್ತು ಏಕತೆಯನ್ನು ಆಚರಿಸಲು ಖಂಡಗಳಾದ್ಯಂತದ ಸಾವಿರಾರು ಕನ್ನಡಿಗರನ್ನು ಮತ್ತೊಮ್ಮೆ ಒಟ್ಟುಗೂಡಿಸುತ್ತದೆ ಎಂದರು.
ನಾವಿಕ ಸಂಸ್ಥೆಯ ಅಧ್ಯಕ್ಷ ಶಿವಕುಮಾರ್ ಮತ್ತು ಸಮ್ಮೇಳನ ಸಂಚಾಲಕ ಹರ್ಷಿತ್ ಗೌಡ, ಈ ಸಾಂಸ್ಕೃತಿಕ ವೈಭವವನ್ನು ಸಾರುವ ಸಮಾವೇಶವನ್ನು ಉತ್ಸಾಹ ಮತ್ತು ದೂರದೃಷ್ಟಿಯಿಂದ ಮುನ್ನಡೆಸುತ್ತಿದ್ದು, ಜನಶಕ್ತಿಯ ಉತ್ಸವವನ್ನಾಗಿ ಮಾಡಲು ಎಲ್ಲ ಕನ್ನಡಿಗರಿಗೆ ಕರೆ ನೀಡಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಅನೇಕ ಸಚಿವರನ್ನು ಆಹ್ವಾನಿಸಲಾಗಿದ್ದು, ಕರ್ನಾಟಕ ಮತ್ತು ಅಮೆರಿಕದಾದ್ಯಂತ ಇರುವ ಪ್ರಮುಖ ಮಠಗಳ ಸ್ವಾಮೀಜಿಗಳನ್ನು ಸಹ ಆಶೀರ್ವದಿಸಲು ಆಹ್ವಾನಿಸಲಾಗಿದೆ. ನಟ, ನಿರ್ದೇಶಕ ರಮೇಶ್ ಅರವಿಂದ್, ನಟ ರಕ್ಷಿತ್ ಶೆಟ್ಟಿ ಭಾಗವಹಿಸುವುದು ಖಚಿತವಾಗಿದೆ.
ದಸರಾ ಶೈಲಿಯ ಜಂಬೂ ಸವಾರಿಯಿಂದ ಪ್ರೇರಿತವಾದ ವರ್ಣರಂಜಿತ ಮೆರವಣಿಗೆ ನಡೆಯಲಿದೆ. ಪ್ರಪಂಚದಾದ್ಯಂತದ ಕನ್ನಡ ಕೂಟಗಳು ಕರ್ನಾಟಕ ಜಿಲ್ಲೆಗಳನ್ನು ಪ್ರತಿನಿಧಿಸಲಿವೆ. ಈ ಮೆರವಣಿಗೆಯ ಉದ್ದಕ್ಕೂ ಸಾಂಪ್ರದಾಯಿಕ ಉಡುಗೆ ತೊಡುಗೆಗಳು, ಜಾನಪದ ಪ್ರದರ್ಶನಗಳು, ಸ್ತಬ್ಧ ಚಿತ್ರಗಳ ಮೂಲಕ ಸಾಂಪ್ರದಾಯಿಕ ಸ್ಮಾರಕಗಳ ಮರು ನಿರ್ಮಾಣ ಹಾಗೂ ಕನ್ನಡ ಅಸ್ಮಿತೆಯನ್ನು ಪ್ರತಿಧ್ವನಿಸುವ ಧ್ವಜಗಳು ಮತ್ತು ಸಂಗೀತ ಪ್ರಕಾರಗಳು ಸಾಂಸ್ಕೃತಿಕ ವೈಭವ ಸಾರಲಿವೆ.
ಸಂಗೀತ ರಸ ಸಂಜೆ:
ನಾವಿಕ ಕ್ರಿಕೆಟ್ ಟೂರ್ನಮೆಂಟ್, ಆಧುನಿಕ ವಿಜ್ಞಾನ ಮತ್ತು ಕಾಲಾತೀತ ಆಧ್ಯಾತ್ಮಿಕ ಕಾರ್ಯಕ್ರಮ, ನಾಟಕ, ಕಥೆ ಹೇಳುವುದು, ಕನ್ನಡ ಸಾಹಿತ್ಯದ ಕಿರು ನಾಟಕ ಕಾರ್ಯಕ್ರಮ ಸೇರಿದಂತೆ ಸಂಗೀತ ರಸ ಸಂಜೆ ಕಾರ್ಯಕ್ರಮ ಕೂಡ ನಡೆಯಲಿದೆ. ಸಂಗೀತ ನಿರ್ದೇಶಕ ಮನೋಮೂರ್ತಿ ಹಾಗೂ ಆಲ್‌ಒಕೆ ಮ್ಯೂಸಿಕಲ್ ನೈಟ್ ಕಾರ್ಯಕ್ರಮವನ್ನು ಸಹ ಹಮ್ಮಿಕೊಳ್ಳಲಾಗಿದೆ.