ಜಿಲ್ಲೆ

ಅಮೆರಿಕದಲ್ಲಿ ವಾಸು ಮೋಜುಮಸ್ತಿ

ಗುಬ್ಬಿ ಶಾಸಕರ ವಿರುದ್ಧ ಬಿಜೆಪಿ ಮುಖಂಡ ಎಸ್​.ಡಿ.ದಿಲೀಪ್​ ಕುಮಾರ್​ ಕಿಡಿ

ಗುಬ್ಬಿ: ಎಕ್ಸ್​ಪ್ರೆಸ್​ ಲಿಂಕ್​ ಕೆನಾಲ್​ ಹೋರಾಟದಲ್ಲಿ ಭಾಗವಹಿಸಿ ತಾಲೂಕಿನ ರೈತರ ಹಿತ ಕಾಯಬೇಕಾಗಿದ್ದ ಕ್ಷೇತ್ರದ ಶಾಸಕ ಎಸ್​.ಆರ್​.ಶ್ರೀನಿವಾಸ್​ ಅಮೆರಿಕಾಕ್ಕೆ ಹೋಗಿ ಮೋಜು ಮಸ್ತಿ ಮಾಡುತ್ತಿದ್ದಾರೆ ಎಂದು ಬಿಜೆಪಿ ಮುಖಂಡ ಎಸ್​.ಡಿ.ದಿಲೀಪ್​ ಕುಮಾರ್​ ಕಿಡಿಕಾರಿದರು.

ಪಟ್ಟಣದ ಪರಿವಿಕ್ಷಣಾ ಮಂದಿರದ ಆವರಣದಲ್ಲಿ ಹೇಮಾವತಿ ಲಿಂಕ್​ ಕೆನಾಲ್​ ವಿರೋಧಿ ಹೋರಾಟ ಸಮಿತಿಯಿಂದ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಲಿಂಕ್​ ಕೆನಾಲ್​ ವಿರೋಧಿಸಿ ಮಾತನಾಡಿದ ಅವರು, ಜಿಲ್ಲೆಗೆ ಮರಣ ಶಾಸನವಾಗಿರುವ ಹೇಮಾವತಿ ಲಿಂಕ್​ ಕೆನಾಲ್​ ಅವೈಜ್ಞಾನಿಕ ಕಾಮಗಾರಿಯ ವಿರುದ್ಧ ಶಾಸಕ ಶ್ರೀನಿವಾಸ್​ ಮಾತನಾಡುತ್ತಿಲ್ಲ. ರೈತರ ಹಿತವನ್ನು ಕಾಯುವ ಕೆಲಸ ಮಾಡುತ್ತಿಲ್ಲ. ಉಪಮುಖ್ಯಮಂತ್ರಿಗಳ ಸಭೆಯಲ್ಲಿ ಭಾಗವಹಿಸದೆ ಅಮೆರಿಕ ಪ್ರವಾಸದಲ್ಲಿ ಮೋಜುಮಸ್ತಿ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಇನ್ನೂ ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್​ ಅವರು ಬಂದು 70 ಕಿ.ಲೋ. ಮೀಟರ್​ನಲ್ಲಿ ಸ್ಥಳ ಪರಿಶೀಲನೆ ಮಾಡಿದರೂ ಮಾಡದೆ ಹೋದರು ಕಾಮಗಾರಿ ಆಗಲು ಬಿಡುವುದಿಲ್ಲ. ಕೆನಾಲ್​ ವಿರುದ್ಧ ರೈತರ ಜಾಗೃತಿ ರಥದ ಮೂಲಕ ಪ್ರತಿ ಹಳ್ಳಿಗೆ ಹೋಗಿ ಜಾಗೃತಿ ಮೂಡಿಸಿ ದೊಡ್ಡ ಮಟ್ಟದ ಹೋರಾಟ ರೂಪಿಸಲಾಗುವುದು. ಯಾವುದೇ ಕಾರಣಕ್ಕೂ ಹೇಮಾವತಿ ಲಿಂಕ್​ ಕೆನಾಲ್​ ಯೋಜನೆ ಆಗಲು ಬಿಡುವುದಿಲ್ಲ ಎಂದು ಗುಡುಗಿದರು.

ಜೆಡಿಎಸ್​ ಮುಖಂಡ ಬಿ.ಎಸ್​.ನಾಗರಾಜು ಮಾತನಾಡಿ, ಲಿಂಕ್​ ಕೆನಾಲ್​ ಯೋಜನೆಯ ಕುರಿತು ನಡೆದ ಉಪಮುಖ್ಯಮಂತ್ರಿಗಳ ಸಭೆಯಲ್ಲಿ ರೈತ ನಾಯಕರನ್ನು ಕರೆದಿಲ್ಲ. ನಮಗೆ ಅವೈಜ್ಞಾನಿಕ ಲಿಂಕ್​ ಕೆನಾಲ್​ ಬೇಕಿಲ್ಲ. ಗುಬ್ಬಿ ತಾಲೂಕಿಗೆ ಅನ್ಯಾಯವಾಗುತ್ತಿದ್ದರೂ ಶಾಸಕರು ಧ್ವನಿ ಎತ್ತುತ್ತಿಲ್ಲ. ಸುಮ್ಮನೆ ನನ್ನದು ವಿರೋಧ ಇದೆ ಎನ್ನುತ್ತಿದ್ದಾರೆ, ನೀರಗಂಟಿ ಎಂದು ಕರಿಸಿ ಕೋಳ್ಳುತ್ತೀರಾ. ಶಾಸಕರೇ ಇನ್ನೂ ಕಾಲ ಮಿಂಚಿಲ್ಲ ರೈತ ಮುಂದೆ ಬಂದು ಮಾತನಾಡಿ ಕ್ಷೇತ್ರದ ಹಿತ ಕಾಯುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗಿ ಎಂದು ಮನವಿ ಮಾಡಿದರು. ಇನ್ನೂ ಹೋರಾಟದಿಂದಲೇ ನಾವು ಸರ್ಕಾರವನ್ನು ಎಚ್ಚರಿಸಬೇಕು ಮುಂದಿನ ದಿನಗಳಲ್ಲಿ ವ್ಯವಸ್ಥಿತವಾಗಿ ಹೋರಾಟ ರೂಪಿಸಬೇಕು ಎಂದು ತಿಳಿಸಿದರು.

ಕಳ್ಳಿ ಪಾಳ್ಯ ಲೋಕೇಶ್​ ಮಾತನಾಡಿ, ಆಡಳಿತ ಪಕ್ಷದ ನಾಯಕರು, ಶಾಸಕರು, ಸಚಿವರು ಲಿಂಕ್​ ಕೆನಾಲ್​ ಯೋಜನೆಯ ಬಗ್ಗೆ ಚಕಾರ ಎತ್ತುತ್ತಿಲ್ಲ. ಜಿಲ್ಲೆಯ ರೈತರ ಶಾಪ ನಿಮಗೆ ತಟ್ಟಲಿದೆ. ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ ಅವರೇ ಜಿಲ್ಲೆಯ ರೈತರ ಋಣ ತೀರಿಸುವ ಕೆಲಸ ಮಾಡಿ. ಜಲಸಂಪನ್ಮೂಲ ಸಚಿವರು ನೀರಾವರಿಯ ಯೋಜನೆಯ ಕಾಮಗಾರಿ ನಿಲ್ಲಿಸುವ ಸ್ಥಿತಿಯಲ್ಲಿಲ್ಲ. ರೈತ ಹೋರಾಟವನ್ನು ಸಂಘಟಿಸಿ ದೊಡ್ಡ ಮಟ್ಟದಲ್ಲಿ ಸರ್ಕಾರಕ್ಕೆ ಎಚ್ಚರಿಕೆ ಕೊಡುವ ಕೆಲಸ ಮಾಡಬೇಕು ಎಂದರು.

ರೈತ ಸಂಘದ ಜಿಲ್ಲಾಧ್ಯಕ್ಷ ಎ.ಗೋವಿಂದರಾಜು ಮಾತನಾಡಿ, ಪ್ರತಿಹಳ್ಳಿ, ಹೋಬಳಿ, ತಾಲೂಕಿನಲ್ಲಿ ಸಭೆಗಳನ್ನು ಮಾಡುವ ಮೂಲಕ ರೈತ ಹೋರಾಟವನ್ನು ಸಂಘಟಿಸಿ ಹೇಮಾವತಿ ಲಿಂಕ್​ ಕೆನಾಲ್​ ವಿರುದ್ಧ ಹೋರಾಡುತ್ತೇವೆ ಎಂದರು. ರೈತ ಸಂಘದ ತಾಲೂಕು ಅಧ್ಯಕ್ಷ ವೆಂಕಟೇಗೌಡ, ಕಳ್ಳಿಪಾಳ್ಯ ಲೋಕೇಶ್​, ಅನಸೂಯ, ಯೋಗಾನಂದ ಕುಮಾರ್​, ಎಚ್​.ಟಿ.ಭೈರಪ್ಪ, ಸುರೇಶ್​ ಗೌಡ, ಶಿವಕುಮಾರ್​, ಬ್ಯಾಟರಂಗೇಗೌಡ, ಶಿವಲಿಂಗೇಗೌಡ, ಅಜ್ಜಪ್ಪ, ವಿಜಯ್​ ಕುಮಾರ್​, ಶಂಕರ್​ ಇದ್ದರು.