ಜಿಲ್ಲೆ

ಅಮೆರಿಕದಲ್ಲಿ ಉನ್ನತ ಶಿಕ್ಷಣಕ್ಕೆ ಫೆಲೋಶಿಪ್ ನೆರವು

ಮೈಸೂರು; ಅಮೆರಿಕದಲ್ಲಿ ಉನ್ನತ ಶಿಕ್ಷಣ ಪಡೆಯಲು ಫೆಲೋಶಿಪ್ ನೆರವಾಗಲಿದ್ದು, ಈ ಸೌಲಭ್ಯ ಪಡೆದುಕೊಳ್ಳಲು ಭಾರತೀಯರು ಮುಂದಾಗಬೇಕು ಎಂದು ಯುಎಸ್-ಭಾರತ ಎಜುಕೇಷನ್ ಫೌಂಡೇಷನ್‌ನ ಫುಲ್‌ಬ್ರೈಟ್ ಕಾರ್ಯಕ್ರಮದ ಸಂಚಾಲಕಿ ಶಿನು ಶೋಭಾ ವಿನ್ಸೆಂಟ್ ತಿಳಿಸಿದರು.

ಮೈಸೂರು ವಿಶ್ವವಿದ್ಯಾಲಯದ ಅಂತಾರಾಷ್ಟ್ರೀಯ ಕೇಂದ್ರ, ಆಂತರಿಕ ಗುಣಮಟ್ಟ ಕೋಶ ಸಹಯೋಗದಲ್ಲಿ ಮಾನಸಗಂಗೋತ್ರಿಯ ವಿಜ್ಞಾನ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಫುಲ್‌ಬ್ರೈಟ್ ನೆಹರು, ಕಲಾಂ ಮತ್ತು ಇತರ ಫೆಲೋಶಿಪ್ ಕುರಿತ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.

ಅಮೆರಿಕದಲ್ಲಿ ಭಾರತೀಯರು ಉನ್ನತ ಶಿಕ್ಷಣ, ಪಿಎಚ್‌ಡಿ ಸಂಶೋಧನೆ ಇತರ ಶೈಕ್ಷಣಿಕ ಚಟುವಟಿಕೆ ಕೈಗೊಳ್ಳಲು ಅಮೆರಿಕ ಮತ್ತು ಭಾರತ ಸರ್ಕಾರದ ಸಹಭಾಗಿತ್ವದಲ್ಲಿ ವಿದ್ಯಾರ್ಥಿವೇತನ ನೀಡಲಿದ್ದು, ಇದು ಉಭಯ ದೇಶಗಳ ನಾಗರಿಕರಿಗೆ ಮಾತ್ರ ಅನ್ವಯವಾಗಲಿದೆ. ಫೌಂಡೇಷನ್ ಪ್ರಾದೇಶಿಕ ಕಚೇರಿ ಬೆಂಗಳೂರಿನಲ್ಲೂ ಕಾರ್ಯನಿರ್ವಹಣೆ ಮಾಡುತ್ತಿದೆ. ದಕ್ಷಿಣ ಭಾರತೀಯರು ಅಮೆರಿಕದಲ್ಲಿ ಉನ್ನತ ಶಿಕ್ಷಣ ಪಡೆದುಕೊಳ್ಳಲು ಉತ್ತೇಜನ ನೀಡಲಾಗುತ್ತಿದೆ ಎಂದರು.

2ನೇ ವಿಶ್ವ ಯುದ್ಧದ ಬಳಿಕ ಫೌಂಡೇಷನ್ ಕಾರ್ಯಾರಂಭಗೊಂಡು ವಿದ್ಯಾರ್ಥಿವೇತನ ನೀಡಲು ಶುರು ಮಾಡಿತು. ಯುದ್ಧ ಸಂದರ್ಭದಲ್ಲಿ ಉಂಟಾಗಿದ್ದ ದೇಶಗಳ ನಡುವೆ ಅಪನಂಬಿಕೆ ನಿವಾರಣೆ, ಸಮನ್ವಯತೆ, ಸಾಂಸ್ಕೃತಿಕ-ಶೈಕ್ಷಣಿಕ ವಿನಿಮಯ ಉದ್ದೇಶದಿಂದ ಫೆಲೋಶಿಪ್ ನೀಡಲಾಗುತ್ತಿದೆ. ಪ್ರತಿವರ್ಷ ಫೆಬ್ರವರಿಯಿಂದ ಮೇವರೆಗೆ ವಿವಿಧ ಫೆಲೋಶಿಪ್‌ಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗುತ್ತದೆ.

ಈ ಸೌಲಭ್ಯ ಪಡೆಯಲು ವಿದ್ಯಾರ್ಹತೆಯೊಂದೇ ಮಾನದಂಡವಲ್ಲ. ಶೇ.50ರಷ್ಟು ಅಂಕ ಪಡೆದವರು ಸಹ ಅರ್ಹರು. ವಿದ್ಯೆಯೊಂದಿಗೆ ಪಠ್ಯೇತರ ಚಟುವಟಿಕೆ, ಸಂಶೋಧನೆ, ಸಂಶೋಧನಾ ಪ್ರಬಂಧಗಳನ್ನು ಪರಿಗಣನೆ ಮಾಡಲಾಗುತ್ತದೆ. ಸ್ನಾತಕ ಪದವಿ ಅಥವಾ ಸ್ನಾತಕೋತ್ತರ ಪದವಿ ಪೂರ್ಣಗೊಂಡಿರಬೇಕು. ವಿದ್ಯಾರ್ಥಿವೇತನದಡಿ ವರ್ಷಕ್ಕೆ 80 ಸಾವಿರ ಡಾಲರ್ ನೀಡಲಾಗುತ್ತಿದೆ. ಮಾಹಿ ತಿಗಾಗಿ https://www.usief.org.in ಸಂಪರ್ಕಿಸಬಹುದು ಎಂದು ತಿಳಿಸಿದರು.

ವಿಶ್ರಾಂತ ಕುಲಪತಿ ವೆಂಕಟರಾಮಯ್ಯ, ಮೈವಿವಿ ಆಂತರಿಕ ಗುಣಮಟ್ಟ ಕೋಶದ ನಿರ್ದೇಶಕ ಪ್ರೊ.ಕೆ.ಎನ್.ಅಮೃತೇಶ್, ಅಂತಾರಾಷ್ಟ್ರೀಯ ಕೇಂದ್ರದ ನಿರ್ದೇಶಕ ಪ್ರೊ.ಜಿ.ಆರ್.ಜನಾರ್ದನ್ ಪಾಲ್ಗೊಂಡಿದ್ದರು.