ಜಿಲ್ಲೆ

ಅಮೃತ್ ಗ್ರಾಮ ಯೋಜನೆಗೆ 75 ಗ್ರಾಮಗಳು ಆಯ್ಕೆ

ನಾಗಮಂಗಲ: ಕಂದಾಯ ಇಲಾಖೆಗೆ ಸಂಬಂಧಿಸಿದ ಸಮಸ್ಯೆ ನಿವಾರಣೆಗೆ ಜಿಲ್ಲೆಯಲ್ಲಿ ‘ಅಮೃತ್ ಗ್ರಾಮ ಯೋಜನೆ’ ಜಾರಿಗೆ ತಂದಿದ್ದು, ಮೊದಲ ಹಂತದಲ್ಲಿ 75 ಗ್ರಾಮಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಹೇಳಿದರು.

ತಾಲೂಕಿನ ದೇವಲಾಪುರ ಹೋಬಳಿ ಚೌದ್ರಿಕೊಪ್ಪಲು ಗ್ರಾಮದಲ್ಲಿ ಭಾನುವಾರ ಮಹತ್ವದ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಅವರು, ಯೋಜನೆಗೆ ಆಯ್ಕೆಯಾಗಿರುವ 75 ಗ್ರಾಮಗಳಲ್ಲಿ ಕಂದಾಯ ಇನ್ನಿತರ ಇಲಾಖೆಗಳ ಸಹಯೋಗದೊಂದಿಗೆ ಶೇ.100ರಷ್ಟು ಸಮಸ್ಯೆ ಬಗೆಹರಿಸಿ ‘ಸಮಸ್ಯೆ ಮುಕ್ತ ಗ್ರಾಮ’ಗಳನ್ನಾಗಿಸುವ ಗುರಿ ಹೊಂದಲಾಗಿದೆ ಎಂದರು.

ಯೋಜನೆಯಡಿ ಆಯ್ಕೆಯಾದ ಗ್ರಾಮಗಳನ್ನು ವರ್ಷದೊಳಗೆ ಸಂಪೂರ್ಣವಾಗಿ ಅಭಿವೃದ್ಧಿಪಡಿಸಲು ಗುರಿ ಹೊಂದಲಾಗಿದೆ. ಮಹಾತ್ಮ ಗಾಂಧೀಜಿ, ಲಾಲ್ ಬಹಾದೂರ್ ಶಾಸ್ತ್ರಿ ಅವರ ಜನ್ಮ ದಿನದಿಂದ ಪ್ರಾರಂಭಗೊಂಡು 2023ರ ನವೆಂಬರ್ ಒಳಗೆ ಶೇ.100ರಷ್ಟು ಕಂದಾಯ ಇಲಾಖೆಯ ಸಮಸ್ಯೆಗಳನ್ನು ಬಗೆಹರಿಸುವುದು, ತೋಟಗಾರಿಕೆ, ಕೃಷಿ, ಪಂಚಾಯತ್ ರಾಜ್ ಸೇರಿದಂತೆ ಇತರ ಇಲಾಖೆಗಳ ಸಹಕಾರದೊಂದಿಗೆ ಗ್ರಾಮಗಳನ್ನು ಸಮಸ್ಯೆ ಮುಕ್ತವಾಗಿಸುವುದು ಹಾಗೂ ಸರ್ಕಾರದ ಸವಲತ್ತುಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವುದು ಯೋಜನೆಯ ಉದ್ದೇಶವಾಗಿದೆ ಎಂದು ವಿವರಿಸಿದರು.

ಆ ಪೈಕಿ ಯೋಜನೆಯ ವ್ಯಾಪ್ತಿಗೆ ನಾಗಮಂಗಲ ತಾಲೂಕಿನ ಒಟ್ಟು 14 ಗ್ರಾಮಗಳು ಒಳಪಡಲಿವೆ. ಈ ತಾಲೂಕು ನನ್ನ ತವರು ಇದ್ದಂತೆ. 2009ರಲ್ಲಿ ನಾಗಮಂಗಲ ತಹಸೀಲ್ದಾರ್ ಆಗಿ ಹಾಗೂ 2014ರಲ್ಲಿ ಇದೇ ವಿಭಾಗದ ಪಾಂಡವಪುರ ಉಪವಿಭಾಗಾಧಿಕಾರಿಯಾಗಿಯೂ ಸೇವೆ ಸಲ್ಲಿಸಿದ್ದೇನೆ. 14 ಗ್ರಾಮಗಳಿಗೂ ಖುದ್ದು ಭೇಟಿ ನೀಡಿ ಸಮಸ್ಯೆ ನಿವಾರಿಸಿ ಮಾದರಿ ಗ್ರಾಮಗಳನ್ನಾಗಿ ಪರಿವರ್ತಿಸುವುದು ನನ್ನ ಗುರಿಯಾಗಿದೆ. ಈ ಯೋಜನೆಗೆ ಜಿಲ್ಲಾಧಿಕಾರಿ ಅಶ್ವಥಿ ಸಂಪೂರ್ಣ ಬೆಂಬಲ ಸೂಚಿಸಿದ್ದು, ಸಲಹೆ, ಸೂಚನೆ ನೀಡಿದ್ದಾರೆ. ಸಾರ್ವಜನಿಕರು ಹಾಗೂ ಜನಪ್ರತಿನಿಧಿಗಳು ಸಹ ಹೆಚ್ಚಿನ ಸಹಕಾರ ನೀಡಬೇಕು ಎಂದು ಕೋರಿದರು.

ಬಳಿಕ ತಾಲೂಕಿನ ಜಿ.ಬೊಮ್ಮನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿದರು. ತಹಸೀಲ್ದಾರ್ ನಂದೀಶ್, ಉಪತಹಸೀಲ್ದಾರ್ ರವಿಶಂಕರ್, ಗ್ರಾಮ ಲೆಕ್ಕಾಧಿಕಾರಿ ರುದ್ರೇಶ್, ಕರುಣಾ, ಬಸವರಾಜ್ ಹಾಗೂ ಬೊಮ್ಮನಹಳ್ಳಿ ವಿಜಯ್‌ಕುಮಾರ್ ಮತ್ತಿತರಿದ್ದರು.

ತಾಲೂಕಿನಿಂದ 14 ಹಳ್ಳಿಗಳು: ಕಸಬಾ ಹೋಬಳಿಯ ಚಿಕ್ಕೋನಹಳ್ಳಿ, ಕಾಚೇನಹಳ್ಳಿ, ವೀರಸಂದ್ರ, ಬಿಂಡಿಗನವಿಲೆ ಹೋಬಳಿಯ ಎಚ್.ಕೋಡಿಹಳ್ಳಿ, ಪಿಟ್ಟೇಕೊಪ್ಪಲು, ವಡ್ಡರಹಳ್ಳಿ, ಹೊಣಕೆರೆ ಹೋಬಳಿಯ ಮಠಭೂವನಹಳ್ಳಿ, ಲಕ್ಷ್ಮೀಪುರ, ಚೊಟ್ಟಕ್ಯಾತನಹಳ್ಳಿ, ದೇವಲಾಪುರ ಹೋಬಳಿಯ ಚೌದ್ರಿಕೊಪ್ಪಲು, ಜಿ.ಬೊಮ್ಮನಹಳ್ಳಿ, ಗಂಡುನಿಂಗಿಕೊಪ್ಪಲು ಹಾಗೂ ಬೆಳ್ಳೂರು ಹೋಬಳಿಯ ಸೂರನಹಳ್ಳಿ, ಬಾಣನಹಳ್ಳಿ ಗ್ರಾಮಗಳು ಅಮೃತ್ ಗ್ರಾಮ ಯೋಜನೆಯಡಿ ಆಯ್ಕೆಯಾಗಿವೆ.

ಕಾರ್ಯ ಆರಂಭಿಸಿದ ಅಧಿಕಾರಿಗಳು: ಈಗಾಗಲೇ ಯೋಜನೆಗೆ ಆಯ್ಕೆಯಾಗಿರುವ ತಾಲೂಕಿನ 14 ಗ್ರಾಮಗಳಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳು ಸರ್ವೇ ನಡೆಸುವ ಮೂಲಕ ಕೆಲಸ ಆರಂಭಿಸಿದ್ದಾರೆ. ರಾಜಸ್ವ ನಿರೀಕ್ಷಕರು, ಗ್ರಾಮ ಲೆಕ್ಕಾಧಿಕಾರಿಗಳು ಗ್ರಾಮಗಳ ಪ್ರತಿ ಮನೆ ಬಾಗಿಲಿಗೆ ತೆರಳಿ ಮಾಹಿತಿ ಕಲೆ ಹಾಕುವ ಜತೆಗೆ, ವಿಧವಾ ವೇತನ, ವೃದ್ಧಾಪ್ಯ ವೇತನ, ಆರ್‌ಟಿಸಿ ತಿದ್ದುಪಡಿ, ಆಕಾರ್ ಬಂದ್ ಸೇರಿದಂತೆ ಮುಂತಾದ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ಅರ್ಜಿಗಳನ್ನು ಪಡೆಯುತ್ತಿದ್ದಾರೆ.