ಜಿಲ್ಲೆ

ಅಮೃತೇಶ್ವರಸ್ವಾಮಿ ದೇವಸ್ಥಾನದ ಮಹಾ ರಥೋತ್ಸವ

ಅರಕಲಗೂಡು: ಪಟ್ಟಣದ ಕೋಟೆ ಶ್ರೀ ಅಮೃತೇಶ್ವರಸ್ವಾಮಿ ದೇವಸ್ಥಾನದ ಮಹಾ ರಥೋತ್ಸವ ಭಾನುವಾರ ಭಕ್ತರ ಸಮ್ಮುಖದಲ್ಲಿ ವೈಭವದಿಂದ ನೆರವೇರಿತು.


ರಥೋತ್ಸವದ ಹಿನ್ನಲೆಯಲ್ಲಿ ದೇವಸ್ಥಾನದಲ್ಲಿ ಕೆಲ ದಿನಗಳಿಂದ ವಿವಿಧ ಪೂಜಾ ವಿಧಾನಗಳ ನಡೆದವು. ಬೆಳಗ್ಗೆ ದೇವಾಲಯದಲ್ಲಿ ಮೂಲ ವಿಗ್ರಹಕ್ಕೆ ಅಭಿಷೇಕ, ವಿಶೇಷ ಪೂಜಾ ಕಾರ್ಯಗಳನ್ನು ನೆರವೇರಿಸಲಾಯಿತು. ಉತ್ಸವ ಮೂರ್ತಿಗಳನ್ನು ಅಲಂಕರಿಸಿ ಕೃಷ್ಣ ಗಂಧೋತ್ಸವ ನಡೆಸಲಾಯಿತು. ಉತ್ಸವದಲ್ಲಿ ಬಂದ ದೇವರ ಮೂರ್ತಿಗಳನ್ನು ಅಲಂಕರಿಸಿದ ರಥದಲ್ಲಿ ಪ್ರತಿಷ್ಠಾಪಿಸಿ ಪೂಜಾ ಕಾರ್ಯ ನಡೆಸಲಾಯಿತು.


ತಹಸೀಲ್ದಾರ್ ಕೆ. ಮೋಹನ್ ಕುಮಾರ್ ರಥಕ್ಕೆ ಪೂಜೆ ಸಲ್ಲಿಸಿ ಈಡುಗಾಯಿ ಒಡೆಯುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು. ನೆರೆದಿದ್ದ ಭಕ್ತರು ಜಯಕಾರ ಮಾಡಿ, ಶಿವನಾಮ ಸ್ಮರಣೆ ಮಾಡುತ್ತಾ ರಥಬೀದಿಯಲ್ಲಿ ತೇರನ್ನು ಎಳೆದು ಸಂಭ್ರಮಿಸಿದರು. ನಾಸಿಕ್ ಡೋಲ್, ಮಂಗಳವಾದ್ಯ ಮುಂತಾದ ಕಲಾ ತಂಡಗಳು ರಥೋತ್ಸವಕ್ಕೆ ಮೆರಗು ನೀಡಿದವು. ನಾಸಿಕ್ ಡೋಲ್ ವಾದನಕ್ಕೆ ಹಿರಿಯರು, ಯುವಕರು, ಚಿಣ್ಣರು, ಮಹಿಳೆಯರು ಕುಣಿದು ಸಂಭ್ರಮಿಸಿದರು.


ತೇರು ಸ್ವಸ್ಥಾನ ಸೇರಿದ ಬಳಿಕ ಪೂಜೆ ಸಲ್ಲಿಸಿ ವಸಂತ ಸೇವೆ ನಡೆಸಿ ಪ್ರಸಾದ ವಿತರಿಸಲಾಯಿತು. ರಾತ್ರಿ ಶಾಂತೋತ್ಸವ ನಡೆಸಲಾಯಿತು. ಪಪಂ ಉಪಾಧ್ಯಕ್ಷೆ ಎಚ್.ಎಸ್.ರಶ್ಮಿ, ಸದಸ್ಯರಾದ ರಮೇಶ್ ವಾಟಾಳ್, ಸುಮಿತ್ರ, ಮಾಜಿ ಸದಸ್ಯ ಎ.ಎಸ್. ಹಿರಿಯಣ್ಣಯ್ಯ, ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಎ.ಎಸ್.ರಾಮಸ್ವಾಮಿ ಕಾರೋನೇಷನ್ ಸಹಕಾರ ಸಂಘದ ಅಧ್ಯಕ್ಷ ಎ.ಎನ್. ಗಣೇಶಮೂರ್ತಿ, ಬ್ರಾಹ್ಮಣ ಸಮುದಾಯ ಭವನದ ಅಧ್ಯಕ್ಷ ಕೆ. ನಂಜುಂಡಸ್ವಾಮಿ, ಶಿರಸ್ತೆದಾರ್ ಅಂಕೇಗೌಡ ಪ್ರಮುಖರಾದ ರಾಮಕೃಷ್ಣಯ್ಯ, ವೆಂಕಟೇಶಮೂರ್ತಿ ಇತರರಿದ್ದರು.