ಹುಮನಾಬಾದ್‌ನಲ್ಲಿ ಸೋಮವಾರ ಕರೆದಿದ್ದ ಸಭೆಯಲ್ಲಿ ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್ ಮಾತನಾಡಿದರು. 
ಜಿಲ್ಲೆ

ಅಮೃತ ಯೋಜನೆ ಕೆಲಸ ಶೀಘ್ರ ಮುಗಿಸಿ

ಹುಮನಾಬಾದ್: ಕ್ಷೇತ್ರದಲ್ಲಿ ಅಮೃತ ಯೋಜನೆ ಕಾಮಗಾರಿಯನ್ನು ತ್ವರಿತಗತಿಯಲ್ಲಿ ನಡೆಸುವಂತೆ ಅಧಿಕಾರಿ ಮತ್ತು ಗುತ್ತಿಗೆದಾರರಿಗೆ ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್ ಕಟ್ಟುನಿಟ್ಟಿನ ಸೂಚನೆ ನೀಡಿದರು.

ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಅಮೃತ ೨.೦ ಯೋಜನೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ಯೋಜನೆಯಡಿ ಟೆಂಡರ್ ಪ್ರಕ್ರಿಯೆ ಮುಗಿದು ೧೪ ತಿಂಗಳಾಗಿದ್ದು, ಶೇ.೫ ಕಾಮಗಾರಿ ಮಾತ್ರ ನಡೆದಿದ್ದು ಸರಿಯಲ್ಲ. ಯಾವುದೇ ತರಹದ ಒತ್ತಡಕ್ಕೆ ಮಣಿದು ಅಧಿಕಾರಿಗಳು ಕೆಲಸ ಮಾಡುವುದನ್ನು ಸಹಿಸುವುದಿಲ್ಲ ಎಂದು ಎಚ್ಚರಿಸಿದರು.

ಹುಮನಾಬಾದ್, ಚಿಟಗುಪ್ಪ , ಹಳ್ಳಿಖೇಡ(ಬಿ)ಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಿಂದ ಜನರು ಪರದಾಡುವಂತಾಗಿದೆ. ನಿಗದಿತ ಅವಧಿಯೊಳಗೆ ಕೆಲಸ ಪೂರ್ಣಗೊಳಿಸಿ ಸಮರ್ಪಕ ನೀರು ಸಿಗುವಂತೆ ಮಾಡಬೇಕಿದ್ದರೂ ಏಕೆ ವಿಳಂಬವಾಗುತ್ತಿದೆ ಎಂದು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಏನೇ ಅಡತಡೆ ಇದ್ದರೆ ಸಂಬಂಧಿತ ಇಲಾಖೆ ಅಧಿಕಾರಿಗಳ ಜತೆ ಸಮನ್ವಯ ಸಾಧಿಸಿ ಕಾಮಗಾರಿ ತ್ವರಿತಗತಿಯಲ್ಲಿ ಗುಣಮಟ್ಟದಿಂದ ಮುಗಿಸಬೇಕು. ವಿನಾಕಾರಣ ವಿಳಂಬ ಮಾಡುತ್ತಿದ್ದರೆ ಗುತ್ತಿಗೆದಾರರಿಗೆ ನೋಟಿಸ್ ನೀಡುವಂತೆ ಸೂಚಿಸಿದರು.

ಒಂದು ಬಡಾವಣೆಯಲ್ಲಿ ಕಾಮಗಾರಿ ಪ್ರಾರಂಭಿಸಿ ಪ್ರತಿ ಮನೆಗೆ ನಲ್ಲಿ ಸಂಪರ್ಕ ನೀಡಿ ಸರಿಯಾಗಿ ನೀರು ಸರಬರಾಜು ಆದ ಬಳಿಕವೇ ಬೇರೆಡೆ ಕೆಲಸ ಕೈಗೆತ್ತಿಕೊಳ್ಳಬೇಕು. ಪುರಸಭೆ ಅಧಿಕಾರಿಗಳು ಅಗತ್ಯ ಸಹಕಾರ ಒದಗಿಸಬೇಕು ಎಂದರು.

ಪುರಸಭೆ ಸದಸ್ಯರಾದ ವಿಜಯಕುಮಾರ ದುರ್ಗಾದ, ಸುನೀಲ ಪಾಟೀಲ್, ರಮೇಶ ಕಲ್ಲೂರ, ಧನಲಕ್ಷ್ಮೀ, ಮುಖ್ಯಾಧಿಕಾರಿಗಳಾದ ವನಿತಾ, ಹುಸಾಮೋದ್ದಿನ್ ಬಾಬಾ, ನಿಂಗಪ್ಪ, ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಕಾರ್ಯನಿರ್ವಾಹಕ ಅಧಿಕಾರಿಗಳಾದ ನರಸಿಂಹರೆಡ್ಡಿ, ವಿಜಯಕುಮಾರ, ಜ್ಯೋತಿ ಪಾಟೀಲ್, ಸಂದೀಪ ಶ್ರೀನಿವಾಸ ಇತರರಿದ್ದರು.

ಅಭಿವೃದ್ಧಿ ವಿಷಯದಲ್ಲಿ ರಾಜಕೀಯ ಸಲ್ಲ: ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್, ಕ್ಷೇತ್ರದ ಮೂರು ಪಟ್ಟಣಗಳ ಜನರಿಗೆ ಕುಡಿಯುವ ನೀರು ಒದಗಿಸುವ ಮಹತ್ವದ ಅಮೃತ ಯೋಜನೆ ಪ್ರಗತಿ ಪರಿಶೀಲನೆ ಸಭೆಗೆ ಮೂರು ಪುರಸಭೆ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರಿಗೆ ಮಾಹಿತಿ ನೀಡಿದರೂ ಬಂದಿಲ್ಲ. ಇವರಿಗೆ ಅಭಿವೃದ್ಧಿ ಬೇಕಿಲ್ಲವೇ ಎಂದು ಕಿಡಿಕಾರಿದರು. ಅಭಿವೃದ್ಧಿ ವಿಷಯದಲ್ಲಿ ರಾಜಕೀಯ ಸರಿಯಲ್ಲ. ಪುರಸಭೆಯಲ್ಲಿ ಕುಡಿಯುವ ನೀರು ಪೂರೈಕೆಗೆ ಖರ್ಚು ಮಾಡುತ್ತಿರುವ ಹಣದಲ್ಲಿ ಅವ್ಯವಹಾರ ನಡೆಯುತ್ತಿದೆ ಎಂಬ ಮಾಹಿತಿ ಇದ್ದು, ಸಂಬಂಧಿತ ಸಚಿವರಿಗೆ ಪತ್ರ ಬರೆದು ತನಿಖೆ ನಡೆಸಲು ಒತ್ತಾಯಿಸುವುದಾಗಿ ಹೇಳಿದರು.