ಚಳ್ಳಕೆರೆ: ಪ್ರಧಾನಿ ಮೋದಿ ಹೇಳುವಂತೆ ಅಚ್ಛೇ ದಿನ್ ನಮ್ಮದಾಗಿಸಿಕೊಳ್ಳಲು ಕೆಳ ವರ್ಗದಿಂದಲೂ ಆರ್ಥಿಕ ಸಬಲೀಕರಣ ಆಗಬೇಕಿದೆ ಎಂದು ಎಂಎಸ್‌ಡಬ್ಲ್ಯೂ ಸಿರಿ ಮೈಕ್ರೋಕೇರ್ ಸಿಇಒ ಮಧುಕಿರಣ್ ಹೇಳಿದರು.
ನಗರದ ಹೊರವಲಯದ ಗ್ರಾಮ ಸಂಸ್ಥೆಯಲ್ಲಿ ಮಂಗಳವಾರ ಸಿರಿ ಮೈಕ್ರೋಕೇರ್ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಸಣ್ಣ ವ್ಯಾಪಾರಸ್ಥರಿಗೆ ಸಾಲದ ಚೆಕ್ ವಿತರಿಸಿ ಮಾತನಾಡಿದರು.
ಭಾರತ ಆರ್ಥಿಕವಾಗಿ ಸದೃಢವಾದಾಗ ಮಾತ್ರ ನಿರ್ಧಿಷ್ಟ ಅಭಿವೃದ್ಧಿ ಕಾಣಲು ಸಾಧ್ಯ. ಹೆಚ್ಚುತ್ತಿರುವ ಜನಸಂಖ್ಯೆಯಂತೆ ಆರ್ಥಿಕ ಸಂಪಾದನೆಯ ಕ್ಷೇತ್ರ ಅಭಿವೃದ್ಧಿ ಆಗಬೇಕಿದೆ. ಬ್ಯಾಂಕುಗಳ ಸೌಲಭ್ಯಗಳಿಂದ ವಂಚಿತರಾದವರು ಮತ್ತು ಅರ್ಹತೆ ದಾಖಲೆ ಇಲ್ಲದ ಸಣ್ಣ ವ್ಯಾಪಾರಸ್ಥರು ಬಲಗೊಳ್ಳಬೇಕಿದೆ. ಇದರಲ್ಲಿ ಬಹುಪಾಲು ಮಹಿಳೆಯರ ಸಹಭಾಗಿತ್ವ ಇದೆ. ಸಂಸ್ಥೆ ವತಿಯಿಂದ ಸಾಲ ಸೌಲಭ್ಯ ಪಡೆದು ಸಬಲೀಕರಣ ಸಾಧಿಸಬೇಕು ಎಂದು ಕಿವಿಮಾತು ಹೇಳಿದರು.
ಗ್ರಾಮ ಸಂಸ್ಥೆ ನಿರ್ದೇಶಕ ಡಿ.ಎಂ. ಶ್ರೀಧರ್ ಮಾತನಾಡಿ, ಆರ್ಥಿಕ ಸಾಕ್ಷರತೆ ಜಾಗೃತಿಯಿಂದ ಮಾತ್ರ ಸಂಪಾದನೆಯ ಗಳಿಕೆ ಅಭಿವೃದ್ಧಿಯಾಗಲು ಸಾಧ್ಯ. ಜಿಲ್ಲೆಯ ನಾಲ್ಕು ತಾಲೂಕುಗಳಲ್ಲಿ ಮಹಿಳಾ ಸಂಘಟಿತ ಸಣ್ಣ ವ್ಯಾಪಾರಸ್ಥರಿಗೆ ಸಾಲ-ಸೌಲಭ್ಯ ನೀಡಲಾಗುತ್ತಿದೆ. ಸುಮಾರು 37 ಸಾವಿರ ಫಲಾನುಭವಿಗಳಿಗೆ ಅನುಕೂಲ ಕಲ್ಪಿಸಲಾಗಿದೆ. ಆರ್ಥಿಕ ಸಂಪಾದನೆ ಗುರಿ ಪ್ರತಿಯೊಬ್ಬರಿಗೂ ಇರುತ್ತದೆ. ಆದರೆ, ಮೂಲ ಬಂಡವಾಳ ಕೊರತೆಯಿಂದ ವ್ಯಾಪಾರ-ವಹಿವಾಟು ಕೈಗೊಳ್ಳಲಾಗುವುದಿಲ್ಲ. ಸಂಸ್ಥೆಯ ಯೋಜನೆಗಳನ್ನು ಕಟ್ಟ ಕಡೆಯ ವ್ಯಾಪಾರಸ್ಥರಿಗೆ ನೀಡಲಾಗುತ್ತಿದೆ ಎಂದು ಹೇಳಿದರು.
ಸಂಸ್ಥೆಯ ನಿರ್ದೇಶಕರಾದ ಮೋಹನ್, ಗೋವಿಂದ, ದೀಪಕ್, ಬಸವರಾಜ್ ಮತ್ತಿತರರು ಇದ್ದರು.