ಜಿಲ್ಲೆ

ಅಮೂಲ್ಯ ಲಿಯೋನ್ ಹೇಳಿಕೆ ಖಂಡಿಸಿ ಪ್ರತಿಭಟನೆ,

ನರೇಗಲ್ಲ: ಪಾಕಿಸ್ತಾನ ಪರ ಘೊಷಣೆ ಕೂಗಿದ ಅಮೂಲ್ಯ ಲಿಯೋನ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ವಿಶ್ವ ಹಿಂದು ಪರಿಷತ್, ಬಜರಂಗದಳ, ಬಿಜೆಪಿ ಕಾರ್ಯಕರ್ತರು ಪಟ್ಟಣದ ಹಳೇ ಬಸ್ ನಿಲ್ದಾಣದಿಂದ ಹೊಸ ಬಸ್ ನಿಲ್ದಾಣದವರೆಗೆ ಶನಿವಾರ ಪ್ರತಿಭಟನೆ ಮೆರವಣಿಗೆ ನಡೆಸಿದರು.

ಹೊಸ ಬಸ್ ನಿಲ್ದಾಣದ ಬಳಿ ಸಮಾವೇಶಗೊಂಡು ಘಟನೆಯನ್ನು ಒಕ್ಕೊರಲಿನಿಂದ ಖಂಡಿಸಲಾಯಿತು.

ವಿಶ್ವ ಹಿಂದು ಪರಿಷತ್ ಮುಖಂಡ ರಘುನಾಥ ಕೊಂಡಿ ಮಾತನಾಡಿ, ಸಿಎಎ ವಿರೋಧಿಸಿ ಬೆಂಗಳೂರಿನಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಸಾರ್ವಜನಿಕ ಸಭೆಯಲ್ಲಿ ದೇಶ ವಿರೋಧಿ ಹೇಳಿಕೆ ನೀಡಿದ ಅಮೂಲ್ಯ ಲಿಯೋನ್​ಗೆ ದೇಶದ್ರೋಹದ ಚಟುವಟಿಕೆ ನಡೆಸಲು ಪ್ರೇರೇಪಿಸಿರುವ ಅನುಮಾನವಿದೆ. ಈ ಕುರಿತು ಪೊಲೀಸರು ಸೂಕ್ತ ತನಿಖೆ ನಡೆಸಬೇಕು. ಕಾರ್ಯಕ್ರಮದ ಆಯೋಜಕರ ಮೇಲೂ ಕ್ರಮ ಕೈಗೊಳ್ಳಬೇಕು ಎಂದರು. ಮಂಜುನಾಥ ಹೆಗಡೆ, ಜಗದೀಶ ಸಂಕನಗೌಡ್ರ, ಸಂಜೀವ ಕುಮಾರ ಕುಲಕರ್ಣಿ, ಬಿಜೆಪಿ ರೋಣ ಮಂಡಲ ಅಧ್ಯಕ್ಷ ಮುತ್ತು ಕಡಗದ ಮಾತನಾಡಿದರು. ಶ್ರೀಶೈಲಪ್ಪ ಬಂಡಿಹಾಳ, ಮೌನೇಶ ಹೊಸಮನಿ, ಯಲ್ಲಪ್ಪ ಮಣ್ಣವಡ್ಡರ, ಶಶಿಧರ ಸಂಕನಗೌಡ್ರ, ರಾಮು ನಿರಂಜನ, ಸಂತೋಷ ಕಡೆತೋಟದ, ಶಿವು ಸಂಗನಾಳ, ರವಿ ಗೊರ್ಲಿ, ಸುರೇಶ ರಾಯಬಾಗಿ, ರಾಜು ಹಲಗೇರಿ, ಇತರರಿದ್ದರು.

ದೇಶದ್ರೋಹ ಘೊಷಣೆ ತಪ್ಪು: ಸಿಎಎ ವಿರೋಧಿಸಿ ಪ್ರತಿಭಟನೆ ಮಾಡುವುದು ಅವರ ಹಕ್ಕು. ಆದರೆ, ಪ್ರತಿಭಟನೆ ವೇಳೆ ದೇಶದ್ರೋಹದ ಘೊಷಣೆ ಕೂಗುವುದು ತಪ್ಪು. ಇದನ್ನು ಒಪ್ಪಲು ಸಾಧ್ಯವೇ ಇಲ್ಲ ಎಂದು ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು. ಗದಗದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಪಾಕಿಸ್ತಾನ ಪರ ಘೊಷಣೆ ಕೂಗಿದ ಅಮೂಲ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ದೇಶದ್ರೋಹದ ಘೊಷಣೆ ಕೂಗುವುದರ ಹಿಂದೆ ಕಾಣದ ಕೈಗಳ ಕೈವಾಡವಿದೆ. ಹಿಂದು ಯುವತಿಯರನ್ನು ಮುಂದಿಟ್ಟುಕೊಂಡು ಕೆಲವು ಸಂಘಟನೆಗಳು ಘೊಷಣೆ ಕೂಗಿಸುತ್ತಿವೆ ಎನ್ನುವ ಅನುಮಾನ ಮೂಡುತ್ತಿದೆ. ದೇಶದ್ರೋಹದ ಘೊಷಣೆ ಕೂಗಿದವರನ್ನು ಪಾಕ್ತಿಸಾನಕ್ಕೆ ಕಳುಹಿಸಬೇಕು. ಅಲ್ಲಿ ಅವರಿಗೆ ಯಾವ ರೀತಿ ಟ್ರೀಟ್​ವೆುಂಟ್ ಸಿಗುತ್ತೆ ಎನ್ನುವುದು ಗೊತ್ತಾಗಬೇಕು. ಕಡುವೈರಿ ದೇಶದ ಪರ ಕೂಗುವುದು ಖಂಡನೀಯ ಎಂದರು.

ಕರವೇದಿಂದ ತಹಸೀಲ್ದಾರ್​ಗೆ ಮನವಿ: ಪಾಕಿಸ್ತಾನ್ ಪರ ಘೊಷಣೆ ಕೂಗಿದ ಅಮೂಲ್ಯ ಲಿಯೋನ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಕರವೇ (ಪ್ರವೀಣ ಶೆಟ್ಟಿ) ಕಾರ್ಯಕರ್ತರು ಲಕ್ಷ್ಮೇಶ್ವರ ತಹಸೀಲ್ದಾರ್ ಭ್ರಮರಾಂಬ ಗುಬ್ಬಿಶೆಟ್ಟಿ ಅವರಿಗೆ ಶನಿವಾರ ಮನವಿ ಸಲ್ಲಿಸಿದರು. ಇಲಿಯಾಸ್ ಮಿರಾನವರ, ಗೌರವಾಧ್ಯಕ್ಷ ಮಂಜುನಾಥ ಗಾಂಜಿ, ನಗರ ಘಟಕಾಧ್ಯಕ್ಷ ಮಹೇಶ ಕಲಘಟಗಿ, ಕಾರ್ಯದರ್ಶಿ ಬಸವರಾಜ ಅಂಕಲಕೋಟಿ ಇದ್ದರು.