ಜಿಲ್ಲೆ

ಅಮಿತ್ ಷಾ ಹೇಳಿಕೆ ಅಂಬೇಡ್ಕರ್ ವಿರೋಧಿ

ಗೋಕಾಕ: ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ಬೇಷರತ್ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿ ಸ್ಥಳೀಯ ಮಾದಿಗ ಹಾಗೂ ದಲಿತಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮೂಲಕ ರಾಷ್ಟಪತಿಗೆ ಗುರುವಾರ ಮನವಿ ಸಲ್ಲಿಸಲಾಯಿತು.

ಅಂಬೇಡ್ಕರ್ ಅವರ ಹೆಸರು ಸ್ಮರಿಸುವ ಬದಲಿಗೆ ಭಗವಂತನ ಹೆಸರು ಹೇಳಿದ್ದರೆ ಏಳು ಜನ್ಮದವರೆಗೂ ಸ್ವರ್ಗ ಸಿಗುತ್ತಿತ್ತು ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ಸಂಸತ್ತಿನಲ್ಲಿ ನೀಡಿರುವ ಹೇಳಿಕೆಯಲ್ಲಿ ಅಂಬೇಡ್ಕರ್ ವಿರೋಧಿ ಮನೋಭಾವ ಎದ್ದು ಕಾಣುತ್ತದೆ. ಇಂತಹ ಹೇಳಿಕೆಯ ಮೂಲಕ ಅವರು ದೇಶದ ಶೋಷಿತ ಸಮುದಾಯಗಳ ಸಂಕಷ್ಟ ಮತ್ತು ಅವಮಾನವನ್ನು ಅಣಕಿಸಿದ್ದಾರೆ. ಅವರ ಈ ಹೇಳಿಕೆ ತೀವ್ರವಾಗಿ ಖಂಡಿಸುತ್ತೇವೆ ಎಂದು ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದರು.

ಭಾರತದ ಇತಿಹಾಸದಲ್ಲಿ ಅಸ್ಪಶ್ಯರು, ಮಹಿಳೆಯರು ಮತ್ತು ಶೋಷಿತ ವರ್ಗಗಳಿಗೆ ಮಾನವೀಯ ಬದುಕು ನೀಡಿದ ಶಕ್ತಿ ಬಾಬಾಸಾಹೇಬ ಅಂಬೇಡ್ಕರ್ ಅವರು ಕೊಟ್ಟ ಸಂವಿಧಾನದಿಂದ ಬಂದಿದೆ. ಅಸ್ಪಶ್ಯತೆ, ಅಸಮಾನತೆ, ಮತ್ತು ಶೋಷಣೆಯ ವಿರುದ್ಧ ಅಂಬೇಡ್ಕರ್ ತ್ಯಾಗ, ಅಧ್ಯಯನ ಮತ್ತು ಬದ್ಧತೆಯ ಮೂಲಕ ಸಮಾಜವನ್ನು ಮೇಲೆತ್ತಿದ ಸತ್ಯ ಮರೆಯುವ ಹಾಗಿಲ್ಲ. ಅಮಿತ್ ಷಾ ಅವರಂತಹ ವ್ಯಕ್ತಿಗಳು ಇಂತಹ ಹೀನ ಹೇಳಿಕೆ ಕೊಟ್ಟಿರುವುದರಿಂದ ದೇಶದ ಜನತೆ ಎದುರು ಕ್ಷಮೆಯಾಚಿಸಬೇಕು ಮತ್ತು ಸಚಿವ ಸ್ಥಾನಕ್ಕೆ ತಕ್ಷಣ ರಾಜೀನಾಮೆ ನೀಡಬೇಕು ಎಂದು ದಲಿತಪರ ಸಂಘಟನೆಗಳು ಆಗ್ರಹಿಸಿವೆ.

ಮುಖಂಡರಾದ ಲಕ್ಷ್ಮಣ ತಳಗಡೆ, ಸತ್ಯಜಿತ ಕರವಾಡೆ, ರಮೇಶ ಮಾದರ, ರವಿ ಕಡಕೋಳ, ಮಲ್ಲಪ್ಪ ಅಮ್ಮಣಗಿ, ಶಂಕರ ಸಂತವ್ವಗೋಳ, ಭೀಮಶಿ ಹರಿಜನ, ಸಂಜು ಮಾದರ, ಜಯಶ್ರೀ ಮಾದರ, ಮಣಿಕಂಠ ರಾಮಗಾನಟ್ಟಿ, ಸಂತೋಷ ಕಾಂಬಳೆ, ಆನಂದ ನಿಪನಾಳ ಇತರರಿದ್ದರು.