ಸಿಂಧನೂರು: ಸಂಸತ್ತಿನ ಅಧಿವೇಶನದಲ್ಲಿ ಸಂವಿಧಾನದ 75 ನೇ ವರ್ಷಾಚರಣೆ ಚರ್ಚೆ ಸಂರ್ದಭದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಬಗ್ಗೆ ಕೇಂದ್ರದ ಗೃಹ ಸಚಿವ ಅಮಿತ್ ಷಾ ಅವಹೇಳನ ಮಾಡಿರುವುದು ಮತ್ತು ಬೆಳಗಾವಿ ಅಧಿವೇಶನದಲ್ಲಿ ಎಂಎಲ್ಸಿ ಸಿ.ಟಿ.ರವಿ, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬಗ್ಗೆ ಆಕ್ಷೇಪಾರ್ಹವಾಗಿ ಮಾತನಾಡಿರುವುದನ್ನು ಖಂಡಿಸಿ ತಹಸಿಲ್ ಕಚೇರಿ ಉಪತಹಸೀಲ್ದಾರ್ ಚಂದ್ರಶೇಖರಗೆ ಸಿಪಿಐ(ಎಂ) ದಿಂದ ಸೋಮವಾರ ಮನವಿ ಸಲ್ಲಿಸಲಾಯಿತು.
ಸಂವಿಧಾನದ ದೇಶದ ಎಲ್ಲ ಜನರಿಗೆ ಸಮಾನ ಅವಕಾಶ, ಅಧಿಕಾರ ಹಾಗೂ ಘನತೆ ನೀಡಿದೆ. ಆದರೆ, ಈ ವಿಷಯಗಳನ್ನು ಅಮಿತ್ ಷಾ ಮತ್ತು ಬಿಜೆಪಿ ಸಹಿಸಿಕೊಳ್ಳುತ್ತಿಲ್ಲ. ಇದರಿಂದಾಗಿ ಸಂಸತ್ತಿನಲ್ಲಿ ನಿಂತು ಅಂಬೇಡ್ಕರ್ ಅವರನ್ನು ಅವಮಾನಿಸುವ ಮೂಲಕ ಸಂವಿಧಾನ ಮತ್ತು ದೇಶದ ಜನರನ್ನು ಅಮಿತ್ ಷಾ ಅವಮಾನಿಸಿದ್ದಾರೆ. ಅಮಿತ್ ಷಾಗೆ ಸಚಿವರಾಗಿ ಮುಂದುವರಿಯುವ ಯಾವುದೇ ಅಧಿಕಾರ ಇಲ್ಲ. ತಕ್ಷಣವೇ ರಾಜೀನಾಮೆ ಕೂಡಬೇಕು ಎಂದು ಆಗ್ರಹಿಸಲಾಯಿತು.
ಜನಪ್ರತಿನಿಧಿಗಳು ದೇಶದ ಸಂವಿಧಾನಕ್ಕೆ ಬದ್ಧವಾಗಿ ನಡೆದುಕೊಳ್ಳುವುದಾಗಿ ಸದನದಲ್ಲಿ ಪ್ರಮಾಣವಚನ ಸ್ವೀಕರಿಸುತ್ತಾರೆ. ಸದನದಲ್ಲಿ ಮಾತಾನಾಡುವಾಗ ಅವಹೇಳನ ಮಾಡಬಾರದು ಹಾಗೂ ಬೈಗುಳ ಬಳಸಬಾರದೆಂಬ ನಿಯಮಗಳಿವೆ. ಎಂಎಲ್ಸಿ ಸಿ.ಟಿ.ರವಿ ಎಲ್ಲ ನಿಯಮಗಳನ್ನು ಉಲ್ಲಂಘಿಸಿದ್ದಾರೆ. ಸಿ.ಟಿ.ರವಿ ಅವರ ಅನುಚಿತ ನಡವಳಿಕೆಯನ್ನು ಗುರುತರವಾದ ಅಪರಾಧ ಎಂದು ಪರಿಗಣಿಸಿ ವಿಧಾನ ಪರಿಷತ್ತಿನ ಸದಸ್ಯತ್ವ ರದ್ದು ಮಾಡಬೇಕೆಂದು ಒತ್ತಾಯಿಸಲಾಯಿತು.