ಜಿಲ್ಲೆ

ಅಮಿತ್ ಷಾ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ

ಎಚ್.ಡಿ.ಕೋಟೆ: ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಅವರ ಬಗ್ಗೆ ಅಸಹನೆ ಮತ್ತು ದ್ವೇಷದ ಮಾತುಗಳನ್ನಾಡಿರುವ ಕೇಂದ್ರದ ಗೃಹಮಂತ್ರಿ ಅಮಿತ್ ಷಾ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಿ, ಬಂಧಿಸುವಂತೆ ಆಗ್ರಹಿಸಿ ಪಟ್ಟಣದ ಆದಿ ಕರ್ನಾಟಕ ಜನಾಂಗದಿಂದ ಬೃಹತ್ ಪ್ರತಿಭಟನೆ ನಡೆಯಿತು.

ಪಟ್ಟಣದ ಸಿದ್ದಪ್ಪಾಜಿ ರಸ್ತೆಯಲ್ಲಿರುವ ಅಂಬೇಡ್ಕರ್ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಹೊರಟ ಪ್ರತಿಭಟನಾಕಾರರು ಆಡಳಿತಸೌಧದ ಮುಂಭಾಗ ಜಮಾಯಿಸಿದರು. ನಂತರ ಮಾತನಾಡಿದ ಪ್ರತಿಭಟನಾಕಾರರು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಸಮಾನತೆ, ಸಹಬಾಳ್ವೆ, ಭ್ರಾತೃತ್ವ, ಜಾತೀಯತೆ ಧರ್ಮ ನಿರಾಪೇಕ್ಷ ಸಂವಿಧಾನವನ್ನು ಈ ದೇಶಕ್ಕೆ ನೀಡಿದ್ದಾರೆ. ಇಂತಹ ಸಂವಿಧಾನವನ್ನು ಗೌರವಿಸುವುದು ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗಟ್ಟಿಗೊಳಿಸುವುದು ಆಡಳಿತ ನಡೆಸುವ ಸರ್ಕಾರಗಳ ಕರ್ತವ್ಯವಾಗಿದೆ.

ಆದರೆ ದೇಶದ ಜವಾಬ್ದಾರಿ ಸಂವಿಧಾನ ಹುದ್ದೆ ಹೊಂದಿರುವ ಕೇಂದ್ರ ಸರ್ಕಾರದ ಗೃಹಮಂತ್ರಿ ಅಮಿತ್ ಷಾ ಅವರು ಅಂಬೇಡ್ಕರ್ ಅವರ ಬಗ್ಗೆ ರಾಜ್ಯಸಭೆಯಲ್ಲಿ ದ್ವೇಷದ ಮಾತುಗಳನ್ನಾಡಿರುವುದು ಅವರ ವಿಕೃತ ಮನಸ್ಸಿಗೆ ಸಾಕ್ಷಿಯಾಗಿದೆ. ಇಂತಹವರ ಬೆಂಬಲಕ್ಕೆ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ನಿಂತಿರುವುದನ್ನು ಆದಿ ಕರ್ನಾಟಕ ಜನಾಂಗ ತೀವ್ರವಾಗಿ ಖಂಡಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಂತರ ತಹಸೀಲ್ದಾರ್ ಶ್ರೀನಿವಾಸ್ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಜೈ ಭೀಮ್ ಆಟೋ ಚಾಲಕರು ತಮ್ಮ ವಾಹನಗಳ ಮುಖಾಂತರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ವರ್ತಕರ ಸಂಘದವರು ತಮ್ಮ ಅಂಗಡಿಗಳೆಲ್ಲ ಬಂದ್ ಮಾಡಿ ಬೆಂಬಲ ಸೂಚಿಸಿದರು. ಅಹಿತರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ಪ್ರತಿಭಟನೆಯಲ್ಲಿ ಮುಖಂಡರಾದ ಗೋಪಾಲ, ಸೋಮಣ್ಣ, ಮಂಜುನಾಥ, ನರಸಿಂಹಮೂರ್ತಿ, ನಂಜುಂಡಮೂರ್ತಿ, ಪುಟ್ಟ ಮಾದು, ಕುಮಾರ, ನಂಜಪ್ಪ, ನಾಗರಾಜು, ಮಹೇಶ, ಮಹದೇವು, ರುದ್ರ, ಆಲಯ ತೇಜು, ಕೃಷ್ಣ, ಚೆನ್ನ, ವೆಂಕಟೇಶ್, ಲಾರಿ ಪ್ರಕಾಶ, ಹಾನಗಟ್ಟಿ ದೇವರಾಜು, ಆಕಾಶ್ ಬಸವರಾಜು, ಹರ್ಷ, ಜೀವನ್, ಗೌತಮ್, ಸಿದ್ದಾರ್ಥ್, ಸಂತು, ಜಯಂತ್ ಸೇರಿದಂತೆ ಹಲವರು ಭಾಗವಹಿಸಿದ್ದರು.