ಚಾಮರಾಜನಗರ: ಕೇಂದ್ರ ಗೃಹ ಸಚಿವ ಅಮಿಶ್ ಶಾ ಕೂಡಲೇ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ಹೆಗ್ಗವಾಡಿ ಗ್ರಾಮಸ್ಥರು ಭಾನುವಾರ ಪ್ರತಿಭಟನೆ ನಡೆಸಿದರು.
ತಾಲೂಕಿನ ಹೆಗ್ಗವಾಡಿ ಕ್ರಾಸ್ ಬಳಿ ಜಮಾಯಿಸಿದ ಪ್ರತಿಭಟನಾಕಾರರು, ಚಾ.ನಗರ ಮತ್ತು ನಂಜನಗೂಡು ಹೆದ್ದಾರಿಯನ್ನು ಕೆಲಕಾಲ ಬಂದ್ ಮಾಡುವ ಮೂಲಕ ಪ್ರತಿಭಟನೆ ನಡೆಸಿದರು. ಕೇಂದ್ರ ಸಚಿವ ಅಮಿತ್ ಶಾ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೆರೆಹಳ್ಳಿ ನವೀನ್ ಮಾತನಾಡಿ, ಬಿಜೆಪಿ ಹಾಗೂ ಆರ್‌ಎಸ್‌ಎಸ್‌ಗೆ ಅಂಬೇಡ್ಕರ್ ಹಾಗೂ ಅವರ ಬರೆದಿರುವ ಸಂವಿಧಾನದ ಬಗ್ಗೆ ಅಸಹನೆ ಇದೆ. ಹಿಂದಿನಿಂದಲೂ ಬಿಜೆಪಿ ನಾಯಕರು ಸಂವಿಧಾನ ಬದಲಿಸುತ್ತೇವೆ. ಮತ್ತೆ ಮನಸ್ಮೃತಿಯನ್ನು ಜಾರಿಗೆ ಮಾಡುತ್ತೇವೆ ಎಂಬ ಹೇಳಿಕೆಯನ್ನು ನೀಡುತ್ತಿದ್ದಾರೆ. ಇದರ ಭಾಗವಾಗಿ ಗೃಹ ಸಚಿವ ಅಮಿತ್ ಶಾ ಸದನದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಕುರಿತು ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಈ ಕೂಡಲೇ ಅವರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ನಂಜನಗೂಡು ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಮಾಜಿ ಮೇಯರ್ ಪುರುಷೋತ್ತಮ್, ತಾ.ಪಂ. ಮಾಜಿ ಸದಸ್ಯ ರಾಧ ರೇವಣ್ಣ, ಉದಯಕುಮಾರ್, ಗ್ರಾ.ಪಂ. ಸದಸ್ಯ ಕೆಂಪರಾಜು, ಮುಕ್ಕಡಹಳ್ಳಿ ರಾಜಕುಮಾರ್, ಅಹಿಂದ ಜಿಲ್ಲಾಧ್ಯಕ್ಷ ಹಳೇಪುರ ಮಹೇಶ್, ಕೆರೆಹಳ್ಳಿ ರೇವಣ್ಣ, ಹೊಸಹಳ್ಳಿ ಮಧುಸೂದನ್, ಕೆಬ್ಬೇಪುರ ಮಧು ಹಾಗೂ ಇತರರು ಹಾಜರಿದ್ದರು.