ಜಿಲ್ಲೆ

ಅಮಾವಸ್ಯೆ ಅಂಗವಾಗಿ ಬೆಟ್ಟಳ್ಳಿ ಮಾರಮ್ಮನಿಗೆ ವಿಶೇಷ ಪೂಜೆ

ಹನೂರು: ಪಟ್ಟಣದ ಶ್ರೀ ಬೆಟ್ಟಳ್ಳಿ ಮಾರಮ್ಮನ ದೇಗುಲದಲ್ಲಿ ಶುಕ್ರವಾರ ಬಾದಾಮಿ ಅಮಾವಾಸ್ಯೆ ಅಂಗವಾಗಿ ದೇವಿಯ ಮೂರ್ತಿಗೆ ಬೆಣ್ಣೆ ಅಲಂಕಾರ, ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿತ್ತು.


ಅಮಾವಾಸ್ಯೆ ಹಿನ್ನೆಲೆಯಲ್ಲಿ ದೇಗುಲವನ್ನು ತಳಿರು ತೋರಣದಿಂದ ಸಿಂಗಾರ ಮಾಡಲಾಗಿತ್ತು. ದೇವಿಗೆ ಬೆಳಗಿನ ಜಾವ 4.30ರಲ್ಲಿ ಪನ್ನೀರು, ಎಳನೀರು, ಕುಂಕುಮ, ಜೇನುತುಪ್ಪ, ಹಾಲು, ಮೊಸರು ಹಾಗೂ ಗಂಧದ ಅಭಿಷೇಕ ನೆರವೇರಿಸಲಾಯಿತು.

ಬಳಿಕ ವಿಗ್ರಹ ಮೂರ್ತಿಗೆ ಬೆಣ್ಣೆ ಅಲಂಕಾರ ಮಾಡಿ ವಿವಿಧ ಪುಷ್ಪಗಳಿಂದ ಸಿಂಗರಿಸಿ ವಿಶೇಷ ಪೂಜೆ ನೆರವೇರಿಸಲಾಯಿತು. ಈ ವೇಳೆ ದೇವಿಗೆ ಪಂಚಾಮೃತ ಅಭಿಷೇಕ ಅರ್ಪಿಸಿ ಧೂಪಧಾರತಿ, ಕೊಬ್ಬರಿ, ಬೆಲ್ಲ, ನಿಂಬೆಹಣ್ಣಿನ ಆರತಿ ಹಾಗೂ ಮಹಾ ಮಂಗಳಾರತಿ ಬೆಳಗಿಸಲಾಯಿತು. ಬಳಿಕ ಭಕ್ತರಿಗೆ ದೇವಿಯ ದರ್ಶನಕ್ಕೆ ಅವಕಾಶ ನೀಡಲಾಯಿತು.


ಪಟ್ಟಣ ಸೇರಿದಂತೆ ಆರ್.ಎಸ್. ದೊಡ್ಡಿ ಭೈರನತ್ತ, ಉದ್ದನೂರು, ಬೆಳತ್ತೂರು, ಮಾಲಾಪುರ, ಅಜ್ಜೀಪುರ, ಚಿಂಚಳ್ಳಿ, ಮಣಗಳ್ಳಿ, ಮಂಗಲ ಹಾಗೂ ಈ ಭಾಗದ ಇನ್ನಿತರೆ ಕಡೆಗಳಿಂದ ಆಗಮಿಸಿದ ಭಕ್ತರು ದೇವರ ದರ್ಶನವನ್ನು ಪಡೆದರು. ಹರಕೆ ಹೊತ್ತ ಭಕ್ತರು ದೇಗುಲದ ಮುಂಭಾಗದಲ್ಲಿ ಉಪ್ಪು ಸುರಿದು ದೇವಿ ಕೃಪೆಗೆ ಪಾತ್ರರಾದರು. ಅರ್ಚಕ ಅರಣ್‌ರಾವ್ ಸಿಂಧೆ, ಜಯಂತ್‌ರಾವ್ ಸಿಂಧೆ, ಪೂಜಾ ಕೈಂಕರ್ಯ ನೆರವೇರಿಸಿದರು.