ಜಮಖಂಡಿ: ಅಪಘಾತದಲ್ಲಿ ಗಾಯಗೊಂಡ ಸವಾರನಿಗೆ ಸಹಾಯ ಮಾಡಿದ ವ್ಯಕ್ತಿ ಮೇಲೆ ಪೊಲೀಸರು ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ ರೈತ ಮುಖಂಡರು ನಗರದ ಗ್ರಾಮೀಣ ಪೊಲೀಸ್ ಠಾಣೆ ಮುಂದೆ ಬುಧವಾರ ರಾತ್ರಿ ಪ್ರತಿಭಟನೆ ನಡೆಸಿದರು.
ತಾಲೂಕಿನ ಸಿದ್ದಾಪುರ ಗ್ರಾಮದ ಬಳಿ ಎಮ್ಮೆ ಮೇಯಿಸುತ್ತಿದ್ದ ವ್ಯಕ್ತಿಗೆ ಬೈಕ್ ಡಿಕ್ಕಿಯಾಗಿ ಸವಾರ ಗಂಭೀರವಾಗಿ ಗಾಯಗೊಂಡಿದ್ದ. ಗಾಯಾಳು ವ್ಯಕ್ತಿಗೆ ಕಾಡಪ್ಪ ಕುರಿ ಎಂಬುವರು ಸಹಾಯ ಮಾಡಿದ್ದರು. ಗ್ರಾಮೀಣ ಠಾಣೆ ಪೊಲೀಸರು ಕಾಡಪ್ಪನನ್ನು ಠಾಣೆಗೆ ಕರೆತಂದು ಹಲ್ಲೆ ಮಾಡಿದ್ದಾರೆ ಎಂದು ಮುಖಂಡರು ದೂರಿದರು.
ಪೊಲೀಸರ ಮೇಲೆ ಸಾರ್ವಜನಿಕರು ನಂಬಿಕೆ ಇಟ್ಟು ಠಾಣೆಗೆ ಬರುತ್ತಾರೆ. ಪೊಲೀಸರು ಅಮಾಯಕರ ಮೇಲೆ ಹಲ್ಲೆ ಮಾಡಿ ದೌರ್ಜನ್ಯ ಎಸಗುವುದನ್ನು ನಿಲ್ಲಿಸಬೇಕು. ಮುಂದೆ ಇಂಥ ಘಟನೆ ನಡೆಯದಂತೆ ಇಲಾಖೆ ನೋಡಿಕೊಳ್ಳಬೇಕು ಎಂದು ರೈತ ಮುಖಂಡ ಬಸವಂತ ಕಾಂಬಳೆ ಆಗ್ರಹಿಸಿದರು.
ರೈತ ಮುಖಂಡರಾದ ಹನುಮಂತಗೌಡ ಪಾಟೀಲ, ಸುಭಾಷ ಶಿರಬೂರ, ಅಶೋಕ ಪಡಸಲಗಿ, ರಾಮಣ್ಣ ದೇಸಾಯಿ, ಸುರೇಶ ಚಿಂಚಲಿ, ಹನುಮಂತ ನಬಾಬ ಇದ್ದರು.