ಜಿಲ್ಲೆ

ಅಮಾನತುಗೊಂಡ ಶಿಕ್ಷಕನ ವಿರುದ್ಧ ಬಿಇಒ ದೂರು

ಕಚೇರಿಗೆ ನುಗ್ಗಿ ಅನುಚಿತ ವರ್ತನೆ ಆಧರಿಸಿ ಠಾಣೆ ಮೆಟ್ಟಿಲೇರಿದ ಸಿ.ವಿ.ನಟರಾಜ್​

ಕೊರಟಗೆರೆ: ಕರ್ತವ್ಯಲೋಪದ ಆರೋಪದಡಿ ಅಮಾನತಾಗಿದ್ದ ತಾಲೂಕಿನ ಕಸಬಾ ಹೋಬಳಿಯ ಕೆರೆಯಾಗಳಹಳ್ಳಿಯ ಪ್ರಭಾರ ಮುಖ್ಯಶಿಕ್ಷಕ ಎಸ್​.ದೇವರಾಜಯ್ಯ ಮತ್ತು ಆತನೊಂದಿಗೆ ಬಂದಿದ್ದ 9 ಶಿಕ್ಷಕರ ವಿರುದ್ಧ ಬಿಇಒ ಸಿ.ವಿ.ನಟರಾಜ್​ ಅವರು ಕರ್ತವ್ಯಕ್ಕೆ ಅಡ್ಡಿ, ಬೆದರಿಕೆ ಆರೋಪದ ಮೇಲೆ ಪೊಲೀಸ್​ ಠಾಣೆಗೆ ದೂರು ದಾಖಲಿಸಿದ್ದಾರೆ.

ಕರ್ತವ್ಯ ಲೋಪದಡಿ ಅಮಾನತುಗೊಂಡಿರುವ ಕಸಬಾ ಹೋಬಳಿಯ ಕೆರೆಯಾಗಳ ಹಳ್ಳಿ ಪ್ರಭಾರ ಮುಖ್ಯಶಿಕ್ಷಕ ಎಸ್​.ದೇವರಾಜಯ್ಯ ಅವರನ್ನು ಬೆಂಬಲಿಸಿ ಸ್ಥಳಿಯ ಇಬ್ಬರು ಶಿಕ್ಷಕರು ಮತ್ತು ತಾಲೂಕಿನವರಲ್ಲದ ಹೊರಗಿನ 6 ಜನ ಸೇರಿ ಒಟ್ಟು 9 ಮಂದಿ ವಿರುದ್ಧ ಜೀವ ಬೆದರಿಕೆ, ಕರ್ತವ್ಯಕ್ಕೆ ಅಡ್ಡಿ, ನಿಂದನೆ ಆರೋಪದ ಮೇರೆಗೆ ಕೊರಟಗೆರೆ ಠಾಣೆಗೆ ದೂರು ನೀಡಿದ್ದೇನೆ ಎಂದು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ನಟರಾಜ್​ ತಿಳಿಸಿದ್ದಾರೆ.

ಪ್ರಭಾರ ಮುಖ್ಯಶಿಕ್ಷಕ ಎಸ್​. ದೇವರಾಜಯ್ಯ ಅವರನ್ನು ಕರ್ತವ್ಯ ಲೋಪದಡಿ ಅಮಾನತು ಮಾಡಲಾಗಿತ್ತು. ಅಮಾನತು ಆದೇಶದಲ್ಲಿ ಲೋಪದೋಷ ಇದ್ದರೆ ಡಿಡಿಪಿಐ ಅಥವಾ ಶಿಕ್ಷಣ ಇಲಾಖೆಯು ಮೇಲಧಿಕಾರಿಯವರಿಗೆ ಮನವಿ ಸಲ್ಲಿಸಲು ಅವಕಾಶವಿದ್ದು, ಈ ಸಂಬಂಧ ಎಸ್​. ದೇವರಾಜಯ್ಯ ಅವರು 8ರಿಂದ 9 ಜನರ ತಂಡದೊಂದಿಗೆ ನಮ್ಮ ಕಚೇರಿಗೆ ನುಗ್ಗಿ, ಅದೇ ಸ್ಥಳದಲ್ಲಿ ಮತ್ತೆ ನಿಯೋಜನೆ ಮಾಡದಿದ್ದರೇ ಮೇ 6ರಂದು ನಿನ್ನನ್ನು ವರ್ಗಾವಣೆ ಮಾಡಿಸದೇ ಬಿಡುವುದಿಲ್ಲ ಎಂದು

ಬೆದರಿಕೆ ಹಾಕಿದ್ದಾರೆ. ಈಗ ಅಮಾನತು ಆಗಿರುವ ದೇವರಾಜಯ್ಯನ ಮೇಲೆ ಪೋಕ್ಸೋ ಪ್ರಕರಣ ಇದೆ. ಇದಲ್ಲದೆ, ಅವರು 2 ಬಾರಿ ಅಮಾನತುಗೊಂಡಿದ್ದಾರೆ ಎಂದು ವಿವರಿಸಿದರು. ಕಸಬಾ ವಿಎಸ್​ಎಸ್​ಎನ್​ ಅಧ್ಯಕ್ಷ ಕೆ.ಎಸ್​.ವಿನಯ್​ಕುಮಾರ್​ ಇದ್ದರು.