ಔರಾದ್‌ನಲ್ಲಿ  ಶ್ರೀ ಅಮರೇಶ್ವರ ದೇವರ ಪಲ್ಲಕ್ಕಿ ಮೆರವಣಿಗೆ ವೈಭವ. 
ಜಿಲ್ಲೆ

ಅಮರೇಶ್ವರರ ಅದ್ದೂರಿ ಪಲ್ಲಕ್ಕಿ ಉತ್ಸವ

ಔರಾದ್: ಪಟ್ಟಣದ ಆರಾಧ್ಯದೈವ ಶ್ರೀ ಅಮರೇಶ್ವರ ಜಾತ್ರೋತ್ಸವ ನಿಮಿತ್ತ ಗುರುವಾರ ಶ್ರದ್ಧೆ ಭಕ್ತಿಯೊಂದಿಗೆ ಪಲ್ಲಕ್ಕಿ ಉತ್ಸವ ಹಾಗೂ ಅಗ್ನಿ ಪ್ರದಕ್ಷಿಣೆ ಜರುಗಿತು. ಸ್ಥಳೀಯರಲ್ಲದೆ ವಿವಿಧ ರಾಜ್ಯದ ಸಹಸ್ರಾರು ಭಕ್ತರು ಪಾಲ್ಗೊಂಡು ಕೃತಾರ್ಥರಾದರು.

ಬುಧವಾರ ತಡರಾತ್ರಿ ದೇವಸ್ಥಾನದಿಂದ ಹೊರಟ ಅಮರೇಶ್ವರ ದೇವರ ಪಲ್ಲಕ್ಕಿ ಮೆರವಣಿಗೆ ಪಟ್ಟಣದ ದೇಶಮುಖ ಗಲ್ಲಿ, ಖೂಬಾ ಗಲ್ಲಿ, ಶೆಟಕಾರ ಗಲ್ಲಿ ಮೂಲಕ ಸಕಲ ವಾದ್ಯ-ವೈಭವದೊಂದಿಗೆ ಪೊಲೀಸ್ ಠಾಣೆ ಹಾಗೂ ಪಶು ಆಸ್ಪತ್ರೆ ಪಕ್ಕದ ಅಗ್ನಿ ಕುಂಡದವರೆಗೆ ನಡೆಯಿತು. ಪಲ್ಲಕ್ಕಿಯನ್ನು ಭಕ್ತರು ತಲೆ ಮೇಲೆ ಹೊತ್ತು ಹೆಜ್ಜೆ ಹಾಕಿದರು. ಓಂ ಭಲಾ-ಶಂಕರ್ ಭಲಾ, ಅಮರೇಶ್ವರ ಮಹಾರಾಜ್ ಕೀ ಜೈ ಎಂಬಿತ್ಯಾದಿ ಜೈಘೋಷಗಳು ಮೊಳಗಿದವು. ಪಲ್ಲಕ್ಕಿ ಮೆರವಣಿಗೆಯುದ್ದಕ್ಕೂ ಕೋಲಾಟ, ಭಜನೆ ಸೇರಿ ವಿವಿಧ ಕಲಾ ತಂಡಗಳ ಪ್ರದರ್ಶನ ಗಮನಸೆಳೆದರೆ, ತಲೆ ಮೇಲೆ ಕಳಸ ಹೊತ್ತ ಮಹಿಳೆಯರು ಮೆರುಗು ಹೆಚ್ಚಿಸಿದರು.

ಬೆಳಗ್ಗೆ ೧೦ಕ್ಕೆ ಅಗ್ನಿಕುಂಡಕ್ಕೆ ಆಗಮಿಸಿದ ಪಲ್ಲಕ್ಕಿ ಮೆರವಣಿಗೆ ಪ್ರದಕ್ಷಿಣೆ ಹಾಕಿದ ನಂತರ ಸರದಿಯಲ್ಲಿ ನಿಂತು ಸಹಸ್ರಾರು ಭಕ್ತರು ಅಗ್ನಿ ತುಳಿದು ಪಾವನರಾದರು. ವಿವಿಧೆಡೆಯಿಂದ ಬಂದಿರುವ ಅಸಂಖ್ಯ ವಿವಿಧ ದಾಸೋಹಿಗಳಿಂದ ಮಹಾಪ್ರಸಾದ ವಿತರಿಸಲಾಯಿತು.

ಪಲ್ಲಕ್ಕಿ ಬರಲು ತಡವಾಗಿದ್ದರಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ಸೇರಿದ್ದರು. ಒಳನುಗ್ಗಲು ಪ್ರಯತ್ನಿಸಿದಾಗ ಪೊಲೀಸರು ಪರಿಸ್ಥಿತಿ ನಿಯಂತ್ರಿಸಿದರು. ಮುನ್ನೆಚ್ಚರಿಕೆ ಕ್ರಮವಾಗಿ ಬ್ಯಾರಿಕೇಡ್ ಅಳವಡಿಸಲಾಗಿತ್ತು. ಬಿಗಿ ಬಂದೋಬಸ್ತ್ ಮಾಡಿದ್ದರಿಂದ ಅಗ್ನಿಪೂಜೆ ಹಾಗೂ ಪ್ರದಕ್ಷಿಣೆ ಶಾಂತಿಯುತವಾಗಿ ನೆರವೇರಿತು.

ಹಳೆಯ ಪಟ್ಟಣ ಪಂಚಾಯಿತಿ ಎದುರು ಆರೋಗ್ಯ ಇಲಾಖೆಯಿಂದ ನ್ಯುಮೋನಿಯಾ ತಡೆ ಹಾಗೂ ಆಯುಷ್ಮಾನ್ ಭಾರತ ಯೋಜನೆಗಳ ಬಗ್ಗೆ ಅರಿವು ಮೂಡಿಸಲಾಯಿತು. ತಹಸೀಲ್ದಾರ್ ಮಲ್ಲಶೆಟ್ಟಿ ಚಿದ್ರೆ, ಡಾ.ಶಂಕರ ದೇಶಮುಖ, ಓಂಪ್ರಕಾಶ ದಡ್ಡೆ, ತಾಪಂ ಎಡಿ ಶಿವಕುಮಾರ ಘಾಟೆ, ಅನಿತಾ ಇತರರಿದ್ದರು.

ಬಿಗಿ ಪೊಲೀಸ್ ಬಂದೋಬಸ್ತ್: ಡಿವೈಎಸ್‌ಪಿ ಶಿವಾನಂದ ಪವಾಡಶೆಟ್ಟಿ ಮಾರ್ಗದರ್ಶನದಲ್ಲಿ ಪಟ್ಟಣದಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿತ್ತು. ಎಲ್ಲ ಕಡೆ ಪೊಲೀಸರು ಹದ್ದಿನ ಕಣ್ಣಿಟ್ಟು ಭಕ್ತರಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ನೋಡಿಕೊಂಡರು. ಸಿಪಿಐ ರಘುವೀರಸಿಂಗ್ ಠಾಕೂರ್, ಪಿಎಸ್‌ಐಗಳಾದ ವಾಸೀಮ್ ಪಟೇಲ್, ಸಿದ್ದಲಿಂಗ ಸಿಂಗಶೆಟ್ಟಿ, ಶೇಖ್ ಶಾ ಪಟೇಲ್, ರೇಣುಕಾ ತಂಡದಲ್ಲಿದ್ದರು.