ಹುಬ್ಬಳ್ಳಿ: ಅಮರಗೋಳದಲ್ಲಿ ಶ್ರೀ ಸದ್ಗುರು ಸಿದ್ದಪ್ಪಜ್ಜನವರ ಜಯಂತ್ಯುತ್ಸವ ಅಂಗವಾಗಿ ಮಂಗಳವಾರ ಸಿದ್ದಪ್ಪಜ್ಜನವರ ರಥೋತ್ಸವ ಸಾವಿರಾರು ಭಕ್ತರ ಮಧ್ಯೆ ಸಂಭ್ರಮದಿಂದ ಜರುಗಿತು.
ಬೆಳಗ್ಗೆಯಿಂದ ಸಿದ್ದಪ್ಪಜ್ಜನ ಮಠದಲ್ಲಿ ವಿವಿಧ ಧಾರ್ವಿುಕ ಕಾರ್ಯಕ್ರಮಗಳು ನಡೆದವು. ಸುಮಂಗಲೆಯರು ತೊಟ್ಟಿಲೋತ್ಸವ ನೆರವೇರಿಸಿದರು. ಮಧ್ಯಾಹ್ನ ಸಿದ್ದಪ್ಪಜ್ಜನವರ ಉತ್ಸವ ಮೂರ್ತಿ, ಭಾವಚಿತ್ರದ ಭವ್ಯ ಮೆರವಣಿಗೆ ಹಾಗೂ ಪಲ್ಲಕ್ಕಿ ಉತ್ಸವ ನಡೆಯಿತು. ಸಂಜೆ ಗೋಧೂಳಿ ಸಮಯದಲ್ಲಿ ರಥಕ್ಕೆ ಪೂಜೆ ನೆರವೇರಿಸಿದ ನಂತರ ಹರ ಹರ ಮಹಾದೇವ, ಸಿದ್ದಪ್ಪಜ್ಜ ಮಹಾರಾಜ್ ಕೀ ಜೈ ಎಂಬ ಜಯಘೊಷಗಳ ಮಧ್ಯೆ ಭಕ್ತರು ರಥ ಎಳೆದರು. ಭಕ್ತರು ತೇರಿಗೆ ಉತ್ತತ್ತಿ, ಬಾಳೆಹಣ್ಣು ಎಸೆದು ಕೃತಾರ್ಥರಾದರು. ಅಮರಗೋಳ, ನವನಗರ, ಗಾಮನಗಟ್ಟಿ, ಸುತಗಟ್ಟಿ, ರಾಯಾಪುರ, ಭೈರಿದೇವರಕೊಪ್ಪ, ಉಣಕಲ್ಲ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಐದು ದಿನಗಳ ಜಯಂತ್ಯುತ್ಸವದಲ್ಲಿ ಪಾಲ್ಗೊಂಡಿದ್ದರು.