ಕುಶಾಲನಗರ: ಸತತ ಅಭ್ಯಾಸದ ಮೂಲಕ ಪರಿಪೂರ್ಣತೆ ಗಳಿಸಲು ಸಾಧ್ಯವಾಗುತ್ತದೆ ಎಂದು ಕೊಡಗು ಜಿಲ್ಲಾಧಿಕಾರಿ ವೆಂಕಟ್ ರಾಜು ಹೇಳಿದರು.
ಕೂಡಿಗೆಯ ಸೈನಿಕ ಶಾಲೆ ಕುವೆಂಪು ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ವಿದ್ಯಾರ್ಥಿ ಸಂಘದ ಪದಗ್ರಹಣ ಸಮಾರಂಭದಲ್ಲಿ ಅವರು ಮಾತನಾಡಿದರು. ಸಾಂಘಿಕ ಹೋರಾಟದ ಮೌಲ್ಯಗಳ ಅರಿವು ಮೂಡಿಸುವಲ್ಲಿ ಕ್ರೀಡೆಯು ಮಹತ್ವದ್ದಾಗಿದೆ. ಹಾಗಾಗಿ ಮಕ್ಕಳು ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಬೇಕು.
ಮಿತ್ರರ ಸ್ನೇಹವನ್ನು ಸಂಪಾದಿಸಬೇಕು. ಜೀವನದುದ್ದಕ್ಕೂ ಮೌಲ್ಯಗಳನ್ನು ಮುಂದುವರಿಸಿಕೊಂಡು ಹೋಗಬೇಕೆಂದು ಅವರು ಕಿವಿ ಮಾತು ಹೇಳಿದರು.
ಸೈನಿಕ ಶಾಲೆಯಲ್ಲಿ ಓದಿದ ಮಕ್ಕಳು ಭಾರತೀಯ ಸೇನೆಗೆ ಅಧಿಕಾರಿಗಳಾಗಿ ಸೇರ್ಪಡೆಗೊಳ್ಳಲು ಇಂದಿನಿಂದಲೇ ನಾಯಕತ್ವ ಗುಣಗಳನ್ನು ಮೈಗೂಡಿಸಿಕೊಳ್ಳುವುದು ಉತ್ತಮ. ವಿದ್ಯಾರ್ಥಿ ಸಂಘದ ಮುಖಂಡರು ದೇಶದ ನಾಯಕರಾಗಿ ಬೆಳೆಯಬೇಕು ಎಂದು ವೆಂಕಟ್ ರಾಜಾ ಆಶಿಸಿದರು.
ಶಾಲೆಯ ನಾಯಕನಾಗಿ ಆಯ್ಕೆಯಾದ ಕೆಡೆಟ್ ಮಾನಸ್ ಕುಮಾರ್ ಹಾಗೂ ಶಾಲೆಯ ವಿವಿಧ ವಿಭಾಗಗಳ ನಾಯಕರುಗಳು ಪ್ರತಿಜ್ಞಾ ವಿಧಿ ಸ್ವೀಕರಿಸಿದರು.
ಆಡಳಿತ ಅಧಿಕಾರಿ ವಿಂಗ್ ಕಮಾಂಡರ್ ಪಿ.ಪ್ರಕಾಶ್ ರಾವ್, ಪ್ರಾಂಶುಪಾಲ ಕರ್ನಲ್ ಕಣ್ಣನ್, ಉಪ ಪ್ರಾಂಶುಪಾಲ ಮನ್‌ಪ್ರೀತ್ ಸಿಂಗ್ ಇತರರು ಹಾಜರಿದ್ದರು.
ಎನ್‌ಸಿಸಿ ಕೆಡೆಟ್ ಜೈರಸ್ ಬಾಚಿ ನೇತೃತ್ವದ ತಂಡದ ಸಾಂಪ್ರದಾಯಿಕ ಕಂಸಾಳೆ ನೃತ್ಯ ಸಭಿಕರ ಗಮನ ಸೆಳೆಯಿತು.