ಚಿತ್ರದುರ್ಗ: ಇಲ್ಲಿನ ಲೋಕಸಭಾ ಕ್ಷೇತ್ರಕ್ಕೆ ಜಿಲ್ಲೆಯ ಆರು, ತುಮಕೂರು ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ಮಾಡಿದ ಮತಯಂತ್ರ, ವಿವಿಪ್ಯಾಟ್‌ಗಳನ್ನು ಜಿಲ್ಲಾ ಚುನಾವಣಾಧಿಕಾರಿ ಟಿ.ವೆಂಕಟೇಶ್ ಅವರ ಸಮ್ಮುಖದಲ್ಲಿ ಶನಿವಾರ ಮತ ಎಣಿಕೆ ಕೇಂದ್ರದೊಳಗೆ ಸೀಲ್ ಮಾಡಿದ ಅನೇಕ ಬಾಕ್ಸ್‌ಗಳನ್ನು ಭದ್ರತಾ ಕೊಠಡಿಗಳ ಒಳಗಿಟ್ಟು ಬೀಗ ಮುದ್ರೆ ಹಾಕಲಾಯಿತು.
ನಗರದ ಸರ್ಕಾರಿ ವಿಜ್ಞಾನ ಕಾಲೇಜಿನ ನೂತನ ಕಟ್ಟಡದಲ್ಲಿ ಜೂ. 4ರಂದು ಮತ ಎಣಿಕೆ ಕಾರ್ಯ ನಡೆಯಲಿದ್ದು, ನಂತರ ಚುನಾವಣಾ ಫಲಿತಾಂಶ ಹೊರಬೀಳಲಿದೆ. ಇದಕ್ಕಾಗಿ ನಿರ್ಮಿಸಿರುವ ಭದ್ರತಾ ಕೊಠಡಿಗಳಲ್ಲಿ ಈಗಾಗಲೇ ಸೂಕ್ತ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಕೇಂದ್ರದ ಹೊರಗೂ, ಒಳಗೂ ಸರ್ಪಗಾವಲು ನಿರ್ಮಾಣವಾಗಿದೆ.
ಚಿತ್ರದುರ್ಗ, ಹಿರಿಯೂರು, ಹೊಳಲ್ಕೆರೆ, ಮೊಳಕಾಲ್ಮುರು, ಚಳ್ಳಕೆರೆ, ಹೊಸದುರ್ಗ, ಪಾವಗಡ, ಶಿರಾ ಸೇರಿ ಎಂಟು ಕಡೆಗಳಲ್ಲಿ ಶುಕ್ರವಾರ ಮತದಾನ ನಡೆದಿದ್ದು, ಕ್ಷೇತ್ರದ ಅಭ್ಯರ್ಥಿಗಳ ಭವಿಷ್ಯ ಕಾಲೇಜಿನಲ್ಲಿ ನಿರ್ಮಿಸಿರುವ ಸ್ಟ್ರಾಂಗ್‌ರೂಂ ಕೊಠಡಿಯೊಳಗೆ ಭದ್ರವಾಗಿದೆ.
ಎಂಟು ಕ್ಷೇತ್ರಕ್ಕೂ ಭದ್ರತಾ ಕೊಠಡಿ ನಿರ್ಮಿಸಿದ್ದರೂ ಮೊದಲ ಮಹಡಿಯಲ್ಲಿ ಶಿರಾ, ಪಾವಗಡ, ಮೊಳಕಾಲ್ಮುರು, ಹಿರಿಯೂರು ಕ್ರಮವಾಗಿ ತಲಾ ಎರಡು ವಿಧಾನಸಭಾ ಕ್ಷೇತ್ರ ಸಂಬಂಧ ಪ್ರತ್ಯೇಕ, ಎರಡನೇ ಮಹಡಿಯಲ್ಲಿ ಚಿತ್ರದುರ್ಗ, ಹೊಳಲ್ಕೆರೆ ವಿಧಾನಸಭಾ ಕ್ಷೇತ್ರ ಸಂಬಂಧ ಹೆಚ್ಚುವರಿ ಭದ್ರತಾ ಕೊಠಡಿ ನಿರ್ಮಿಸಲಾಗಿದೆ. ಅಭ್ಯರ್ಥಿ ಮತ್ತು ಏಜೆಂಟರ್‌ಗಳಿಗಾಗಿ ಹೊರಭಾಗದಲ್ಲಿ ಭದ್ರತಾ ಕೊಠಡಿಯ ವೀಕ್ಷಣಾ ಸೌಲಭ್ಯ ಕೇಂದ್ರ ತೆರೆಯಲಾಗಿದೆ.
ಡಿ-ಮಸ್ಟರಿಂಗ್ ಕೇಂದ್ರಗಳು: ಸುಡು ಬಿಸಿಲಿನ ಕಾರಣಕ್ಕೆ ಸಂಜೆ 6ರೊಳಗೆ ಮತಗಟ್ಟೆ ಪ್ರವೇಶಿಸಿದವರ ಸಂಖ್ಯೆ ಹೆಚ್ಚಾಗಿದ್ದರಿಂದ ಮತಗಟ್ಟೆಗಳಲ್ಲಿ ರಾತ್ರಿ 8, 9ರವರೆಗೂ ಮತದಾನ ನಡೆದಿದೆ. ಹೀಗಾಗಿ ತಡರಾತ್ರಿ 12ರವರೆಗೂ ಕೆಲವೆಡೆ ಚುನಾವಣಾ ಸಿಬ್ಬಂದಿ ಕಾರ್ಯನಿರ್ವಹಿಸಿದರು.
ಕ್ಷೇತ್ರ ವ್ಯಾಪ್ತಿಯ 2,168 ಹಾಗೂ ಜಿಲ್ಲೆಯ ಒಟ್ಟು 1,661 ಮತಗಟ್ಟೆಗಳಲ್ಲಿದ್ದ ಇವಿಎಂಗಳು ಹಾಗೂ ವಿವಿ ಪ್ಯಾಟ್‌ಗಳನ್ನು ಆಯಾ ತಾಲೂಕು ಕೇಂದ್ರಗಳ ಮಸ್ಟರಿಂಗ್ ಕೇಂದ್ರಗಳಲ್ಲಿ ಸಂಗ್ರಹಿಸಿ ಚುನಾವಣಾ ಪರಿಕರಗಳೊಟ್ಟಿಗೆ ಡಿ-ಮಸ್ಟರಿಂಗ್ ಮಾಡಲು ಬಸ್‌ಗಳ ಮೂಲಕ ಕೇಂದ್ರಗಳತ್ತ ಬಂದಿಳಿದಾಗ ತಡರಾತ್ರಿಯಾಗಿತ್ತು. ಅಲ್ಲಿಂದ ಚಿತ್ರದುರ್ಗಕ್ಕೆ ಬಿಗಿ ಭದ್ರತೆ ನಡುವೆ ಮತ ಎಣಿಕೆ ನಡೆಯುವ ಕೇಂದ್ರಕ್ಕೆ ತರಲಾಯಿತು. ಎಲ್ಲ ಮತಗಟ್ಟೆಗಳಿಂದ ಯಂತ್ರಗಳು, ಎಣಿಕೆ ಕೇಂದ್ರಗಳನ್ನು ತಲುಪಿದ ಬಳಿಕ ಶನಿವಾರ ಬೆಳಗ್ಗೆ 8ರ ಹೊತ್ತಿಗೆ ಸಜ್ಜುಗೊಳಿಸಿರುವ ಪ್ರತ್ಯೇಕ ಸ್ಟ್ರಾಂಗ್ ರೂಂಗಳಲ್ಲಿಟ್ಟು, ಬೀಗ ಮುದ್ರೆ ಹಾಕಲಾಯಿತು.
ಮೊಳಕಾಲ್ಮೂರು ಸರ್ಕಾರಿ ಪಿಯು ಕಾಲೇಜು, ಚಳ್ಳಕೆರೆಯ ಎಚ್‌ಪಿಪಿಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಚಿತ್ರದುರ್ಗದ ಮುರುಘಾರಾಜೇಂದ್ರ ಕ್ರೀಡಾಂಗಣದ ಸರ್ಕಾರಿ ಕಲಾ ಕಾಲೇಜು, ಹಿರಿಯೂರು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಎದುರು, ಗುರುಭವನ ಪಕ್ಕದ ಸರ್ಕಾರಿ ಬಾಲಕಿಯರ ಪಿಯು ಕಾಲೇಜು, ಹೊಸದುರ್ಗ ತಾಯಮ್ಮ ಎಡೆತೊರೆ ಸದ್ದಿವಾಲ್ ಲಿಂಗಯ್ಯ ಪದವಿ ಪೂರ್ವ ಕಾಲೇಜು, ಹೊಳಲ್ಕೆರೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯಾ ವಿಧಾನಸಭಾ ಕ್ಷೇತ್ರಗಳ ಡಿ-ಮಸ್ಟರಿಂಗ್ ಕಾರ್ಯ ಪೂರ್ಣಗೊಂಡಿತು.
ಮತದಾನ ದಿನದಂದು ವಿವಿ ಪ್ಯಾಟ್‌ಗಳನ್ನು ಇಡಲು ಮತ್ತು ಅಂಚೆ ಮತ ಎಣಿಕೆಗೆ ತಲಾ ಒಂದೊಂದು ಪ್ರತ್ಯೇಕ ಟೇಬಲ್‌ಗಳು ಇರಲಿವೆ. ಬೆಳಗ್ಗೆ 7.30ಕ್ಕೆ ಭದ್ರತಾ ಕೊಠಡಿಗಳಿಂದ ತರುವ ಇವಿಎಂಗಳನ್ನು ರಾಜಕೀಯ ಪಕ್ಷಗಳ ಏಜೆಂಟರ ಸಮ್ಮುಖದಲ್ಲಿ ಪ್ರತಿ ಟೇಬಲ್‌ನ ಎಣಿಕೆ ಅಧೀಕ್ಷಕರ ಸಹಿತ ಮೂವರು ಅಧಿಕಾರಿಗಳು ಪರಿಶೀಲಿಸಿದ ನಂತರ ಎಣಿಕೆ ಆರಂಭವಾಗಲಿದೆ.
ನೆಲಮಹಡಿಯಲ್ಲಿ ಚಳ್ಳಕೆರೆ, ಹೊಸದುರ್ಗ, ಪಾವಗಡ, ಮೊದಲ ಮಹಡಿಯಲ್ಲಿ ಮೊಳಕಾಲ್ಮುರು, ಶಿರಾ, ಹಿರಿಯೂರು, ಎರಡನೇ ಮಹಡಿಯಲ್ಲಿ ಚಿತ್ರದುರ್ಗ, ಹೊಳಲ್ಕೆರೆ ವಿಧಾನಸಭಾ ಕ್ಷೇತ್ರದ ಮತ ಎಣಿಕೆ ನಡೆಯಲಿದೆ.
ಡಬಲ್ ಲಾಕ್: ಭದ್ರತಾ ಕೊಠಡಿಗಳಿಗೆ ಡಬಲ್ ಲಾಕ್ ಮಾಡಲಾಗಿದೆ. ಮಾಸ್ಟರ್ ಕೀಗಳನ್ನು ಹೊಂದಿರುವ ಆರ್‌ಒ ಹಾಗೂ ಮತ್ತೊಂದನ್ನು ಹೊಂದಿರುವ ಆಯಾ ಕ್ಷೇತ್ರಗಳ ಎಆರ್‌ಒಗಳು 4ರಂದು ಎಣಿಕೆ ಆರಂಭವಾಗುವ ಮುನ್ನ ಸ್ಟ್ರಾಂಗ್ ರೂಂಗಳ ಬೀಗ ಮುದ್ರೆಯನ್ನು ತೆರವುಗೊಳಿಸಲಿದ್ದಾರೆ.
80ಕ್ಕೂ ಹೆಚ್ಚು ಸಿಸಿ ಟಿವಿ ಕ್ಯಾಮೆರಾ ಕಣ್ಗಾವಲು: ಎಣಿಕೆ ಕೇಂದ್ರಗಳ ಸುತ್ತ 3 ಸುತ್ತಿನ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. 80ಕ್ಕೂ ಹೆಚ್ಚು ಸಿಸಿ ಟಿವಿ ಕ್ಯಾಮೆರಾಗಳ ಕಣ್ಗಾವಲಿದೆ. ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ, ಸಿಎಪಿಎಫ್, ಡಿಎಆರ್ ತುಕಡಿಗಳನ್ನು ಬಳಸಿಕೊಳ್ಳಲಾಗಿದೆ. ಬೆಸ್ಕಾಂ, ಅಗ್ನಿಶಾಮಕ ಸಿಬ್ಬಂದಿ ಕೂಡ ಮೊಕ್ಕಾಂ ಹೂಡಿದ್ದಾರೆ.
ಶೇ 73.3 ಮತದಾನ ದಾಖಲು: 2019ರ ಚುನಾವಣೆಗಿಂತಲೂ ಈ ಬಾರಿ ಮತದಾನ ಪ್ರಮಾಣ ಕ್ಷೇತ್ರದಲ್ಲಿ ತುಸು ಹೆಚ್ಚಾಗಿದೆ. ಚಿತ್ರದುರ್ಗ-70.69, ಚಳ್ಳಕೆರೆ-72.72, ಹಿರಿಯೂರು-71.53, ಹೊಳಲ್ಕೆರೆ-75.45, ಹೊಸದುರ್ಗ-74, ಮೊಳಕಾಲ್ಮುರು-75.75, ಪಾವಗಡ-70.52, ಶಿರಾ-75.70 ಸೇರಿ ಒಟ್ಟು 73.3 ಮತದಾನ ನಡೆದಿದೆ.
ಮತದಾನದಲ್ಲಿ ಮೊಳಕಾಲ್ಮುರು ಪ್ರಥಮ: ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಶೇ 75.75 ಮತದಾನ ದಾಖಲಾಗಿರುವ ಮೊಳಕಾಲ್ಮುರು ಕ್ಷೇತ್ರ ವ್ಯಾಪ್ತಿಯಲ್ಲಿ ಪ್ರಥಮ ಸ್ಥಾನದಲ್ಲಿದೆ. ಶೇ 75.60 ದಾಖಲಿಸಿರುವ ಶಿರಾ ದ್ವಿತೀಯ, ಶೇ 75.45 ದಾಖಲಾದ ಹೊಳಲ್ಕೆರೆ ತೃತೀಯ ಸ್ಥಾನದಲ್ಲಿದೆ.
ಕಳೆದ ಬಾರಿಗಿಂತಲೂ ಮತದಾನ ಪ್ರಮಾಣ ಶೇ 3ರಷ್ಟು ಹೆಚ್ಚಾಗಿರುವುದು ಸಂತಸದ ಸಂಗತಿ. ಜಿಲ್ಲಾ ಚುನಾವಣಾ ಆಯೋಗ, ಜಿಲ್ಲಾ ಸ್ವೀಪ್ ಸಮಿತಿ ಕಾರ್ಯವೈಖರಿ ಕೂಡ ಇದಕ್ಕೆ ಕಾರಣ. ಯಾವ ಲೋಪವಿಲ್ಲದೆ, ಮತದಾನ ಶಾಂತಿಯುತವಾಗಿ ನಡೆದಿದೆ. ಅಧಿಕಾರಿಗಳು, ಸಿಬ್ಬಂದಿ ಅಚ್ಚುಕಟ್ಟಾಗಿ ಜವಾಬ್ದಾರಿ ನಿರ್ವಹಿಸಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ಟಿ.ವೆಂಕಟೇಶ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.