ಜಿಲ್ಲೆ

ಅಭ್ಯರ್ಥಿಗಳ ಗೆಲುವಿಗೆ ಎಲ್ಲರೂ ಸಹಕರಿಸಿ

ಎಂ.ಕೆ.ಹುಬ್ಬಳ್ಳಿ: ಕಳೆದ ೩೦ ವರ್ಷಗಳಿಂದ ಬೈಲಹೊಂಗಲ ಮತ್ತು ಕಿತ್ತೂರು ಅಖಂಡ ತಾಲೂಕಿನ ಬಿಡಿಸಿಸಿ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿರುವ ಮಾಜಿ ಶಾಸಕ ಮಹಾಂತೇಶ ದೊಡಗೌಡರ ಅವರನ್ನು ಮತ್ತೊಮ್ಮೆ ಆಶೀರ್ವದಿಸಬೇಕೆಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಮನವಿ ಮಾಡಿದರು.

ಬೈಲಹೊಂಗಲ ತಾಲೂಕಿನ ಗದ್ದಿಕರವಿನಕೊಪ್ಪ ಸಮೀಪದ ಬಿ.ಎಸ್.ಯಡಿಯೂರಪ್ಪ ಕಲ್ಯಾಣ ಮಂಟಪದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಬೈಲಹೊಂಗಲ ಮತ್ತು ಚನ್ನಮ್ಮನ ಕಿತ್ತೂರು ತಾಲೂಕುಗಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಆಡಳಿತ ಮಂಡಳಿ ಸದಸ್ಯರ ಸೌಹಾರ್ದ ಸಭೆ ಉದ್ಘಾಟಿಸಿ ಮಾತನಾಡಿದರು. ತಾಲೂಕು ವಿಭಜನೆಯಿಂದ ಮತ್ತೊಂದು ನಿರ್ದೇಶಕ ಸ್ಥಾನವಿರುವುದರಿಂದ ನಮ್ಮ ಪೆನಲ್ ಅಭ್ಯರ್ಥಿಯನ್ನಾಗಿ ಮಾಜಿ ಸಚಿವ ದಿ.ಡಿ.ಬಿ.ಇನಾಮದಾರ ಪುತ್ರ ವಿಕ್ರಮ ಇನಾಮದಾರ ಅಭ್ಯರ್ಥಿಯಾಗಿದ್ದಾರೆ. ಅವರನ್ನು ಬೆಂಬಲಿಸಬೇಕು ಎಂದರು.

ಈಗಾಗಲೇ ೧೩ ತಾಲೂಕುಗಳಿಗೆ ಅಭ್ಯರ್ಥಿ ಅಂತಿಮಗೊಳಿಸಿದ್ದು, ಯರಗಟ್ಟಿ, ಹುಕ್ಕೇರಿಗೆ ಮಾತ್ರ ಬಾಕಿಯಿದೆ. ಅವಿರೋಧ ಆಯ್ಕೆಗೆ ಒಮ್ಮತ ವ್ಯಕ್ತವಾದ ತಾಲೂಕಿನಲ್ಲಿ ಅನಿವಾರ್ಯವಾದರೆ ಚುನಾವಣೆ ನಡೆಸಿ, ನಮ್ಮ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸುತ್ತೇವೆ ಎಂದು ತಿಳಿಸಿದರು.

ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನದ ಅಭ್ಯರ್ಥಿ ಮಹಾಂತೇಶ ದೊಡಗೌಡರ ಮಾತನಾಡಿ, ಇದೀಗ ಮತ್ತೊಮ್ಮೆ ನಿಮ್ಮ ಸೇವೆಗೆ ಅಣಿಯಾಗಿದ್ದು, ನನ್ನನ್ನು ಬೆಂಬಲಿಸುವುದರ ಜತೆಗೆ ಕಿತ್ತೂರು ತಾಲೂಕು ಅಭ್ಯರ್ಥಿ ವಿಕ್ರಮ ಇನಾಮದಾರ ಅವರನ್ನೂ ಆಶೀರ್ವದಿಸಬೇಕು ಎಂದು ಮನವಿ ಮಾಡಿದರು.

ಚಿದಾನಂದ ಸವದಿ, ಅಭ್ಯರ್ಥಿ ವಿಕ್ರಮ ಇನಾಮದಾರ, ಮಾಜಿ ಶಾಸಕ ಜಗದೀಶ ಮೆಟಗುಡ್ಡ ಮಾತನಾಡಿದರು. ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಪ್ಪಾಸಾಹೇಬ ಕುಲಗುಡೆ, ರಾಜೇಂದ್ರ ಅಂಕಲಗಿ, ಅರವಿಂದ ಪಾಟೀಲ, ವಿರೂಪಾಕ್ಷ ಮಾಮನಿ, ಡಾ.ಬಸವರಾಜ ಪರವಣ್ಣವರ, ಶಂಕರ ಮಾಡಲಗಿ, ಚನ್ನಬಸಪ್ಪ ಮೊಕಾಶಿ, ವಿಜಯ ಮೆಟಗುಡ್ಡ, ಪ್ರಕಾಶ ಮೂಗಬಸವ, ಸುನೀಲ ಮುರಕುಂಬಿ ಇತರರಿದ್ದರು.

ಬೈಲಹೊಂಗಲದಿಂದ ಮಹಾಂತೇಶ ದೊಡಗೌಡರ, ಕಿತ್ತೂರಿನಿಂದ ವಿಕ್ರಮ ಇನಾಮದಾರ ನಿರ್ದೇಶಕ ಸ್ಥಾನದ ಅಭ್ಯರ್ಥಿಯಾಗಿದ್ದಾರೆ. ಅವರ ಗೆಲುವಿಗೆ ಎಲ್ಲ ಸಹಕಾರಿ ಸಂಘಗಳು ಕೈಜೋಡಿಸಬೇಕು. | ಅಣ್ಣಾಸಾಹೇಬ ಜೊಲ್ಲೆ ಬಿಡಿಸಿಸಿ ಬ್ಯಾಂಕ್ ನಿರ್ದೇಶಕ