ಹಾಸನ: ಲೋಕಸಭಾ ಚುನಾವಣಾ ಅಭ್ಯರ್ಥಿಗಳಿಗೆ 95 ಲಕ್ಷ ರೂ.ವರೆಗೆ ವೆಚ್ಚ ಮಾಡಲು ಅವಕಾಶವಿದೆ. ಇದಕ್ಕಾಗಿ ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿ ಪ್ರತ್ಯೇಕ ಬ್ಯಾಂಕ್ ಖಾತೆ ತೆರೆದು, ಪ್ರತಿಯೊಂದು ಪಾವತಿಗಳನ್ನು ಈ ಬ್ಯಾಂಕ್ ಖಾತೆಯ ಮೂಲಕವೇ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಸಿ. ಸತ್ಯಭಾಮಾ ಮಾಹಿತಿ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಲೋಕಸಭಾ ಚುನಾವಣೆ ಸಂಬಧ ಜಿಲ್ಲೆಯ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಸೋಮವಾರ ಸಭೆ ನಡೆಸಿ, ಚುನಾವಣೆಯ ವಿವಿಧ ಮಾಹಿತಿಗಳನ್ನು ಅಭ್ಯರ್ಥಿಗಳಿಗೆ, ರಾಜಕೀಯ ಪಕ್ಷಗಳಿಗೆ ನೀಡಲು ಈ ಸಭೆ ಕರೆಯಲಾಗಿದೆ ಎಂದು ಹೇಳಿದರು.
ವಿವಿಧ ಚುನಾವಣಾ ಕಾರ್ಯಗಳಿಗೆ, ಸಭೆ ಸಮಾರಂಭಗಳಿಗೆ ಅನುಮತಿ ನೀಡಲು ಸುವಿಧಾ ಆ್ಯಪ್ ಮೂಲಕ ಆನ್‌ಲೈನ್ ಸೇವೆ ದೊರೆಯಲಿದೆ. ರಾಜ್ಯಮಟ್ಟದಿಂದ ವಿಧಾನಸಭಾ ಹಂತದವರೆಗಿನ ಅನುಮತಿಯನ್ನು ಈ ಪೋರ್ಟಲ್ ಮೂಲಕ ನೀಡಲಾಗುವುದು. ಯಾವುದೇ ಕಾರ್ಯಕ್ಕೆ 48 ಗಂಟೆಗಳ ಮುಂಚೆ ಇದರಲ್ಲಿ ಅರ್ಜಿ ಸಲ್ಲಿಸಬೇಕು ಎಂದು ಅವರು ಹೇಳಿದರು.
ಸಭೆ ಸಮಾರಂಭಗಳಲ್ಲಿ ಯಾವುದೇ ಕಾರಣಕ್ಕೂ ಮತದಾರರಿಗೆ ಊಟ-ತಿಂಡಿ ನೀಡಲು ಅವಕಾಶವಿಲ್ಲ. ಸಮಾರಂಭದ ಖರ್ಚು ವೆಚ್ಚಗಳನ್ನು ನಿಖರವಾಗಿ ಸಲ್ಲಿಸಬೇಕು. ನೀತಿ ಸಂಹಿತೆ ತಂಡಗಳು ಪ್ರತಿಯೊಂದು ಸಭೆ, ಕಾರ್ಯಕ್ರಮಗಳ ಮೇಲೆ ನಿಗಾ ವಹಿಸಲಿದೆ ಎಂದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಶಾಂತಲಾ, ಜೆಡಿಎಸ್ ತಾಲೂಕು ಅಧ್ಯಕ್ಷ ಎಸ್.ದ್ಯಾವೇಗೌಡ, ಬಿಜೆಪಿಯ ಮುಖಂಡ ಅಮೀತ್ ಶೆಟ್ಟಿ ಸೇರಿದಂತೆ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.