ಜಿಲ್ಲೆ

ಅಭಿವೃದ್ಧಿವಂಚಿತ ಪ್ರವಾಸಿ ತಾಣಗಳು

ಚನ್ನಬಸಯ್ಯ ಗುರುವಿನ

ಕೊಡೇಕಲ್ : ಅಧಿಕಾರಿ ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷÈದಿಂದ ಹುಣಸಗಿ ತಾಲೂಕಿನ ಪ್ರೇಕ್ಷಣೀಯ ಸ್ಥಳಗಳು ನಿರೀಕ್ಷತ ಬೆಳವಣಿಗೆ ಕಾಣದೆ ಸೊರಗುವಂತಾಗಿದೆ.

ರಾಜ್ಯದಲ್ಲಿ ಮೂರನೇ ದೊಡ್ಡ ಅಣೆಕಟ್ಟೆ ಖ್ಯಾತಿಯ ನಾರಾಯಣಪುರದ ಬಸವಸಾಗರ ಜಲಾಶಯ ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿ ಕಂಡಿಲ್ಲ. ಜಲಾಶಯ ಎದುರು ಕೃಷ್ಣಾ ಭಾಗ್ಯ ಜಲನಿಗಮಕ್ಕೆ ಸೇರಿದ ಅಂದಾಜು ೧೦೦ ಎಕರೆಯಷ್ಟು ಜಮೀನು ಖಾಲಿ ಉಳಿದಿದ್ದು, ಈ ಪ್ರದೇಶ ಬಳಸಿಕೊಂಡು ಆಲಮಟ್ಟಿ ಮಾದರಿ ಅಭಿವೃದ್ಧಿಪಡಿಸಿದರೆ ಜಿಲ್ಲೆಯಲ್ಲಿ ದೊಡ್ಡ ಪ್ರವಾಸಿ ತಾಣವಾಗಲಿದೆ. ಆದರೆ ಇದುವರೆಗೆ ಅಧಿಕಾರಿ ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಹಾಳು ಬಿದ್ದಂತಾಗಿದೆ. ೧೯೮೨ರಲ್ಲಿ ಲೋಕಾರ್ಪಣೆಗೊಂಡ ಬಸವಸಾಗರ ಅಭಿವೃದ್ಧಿ ವಿಷಯದಲ್ಲಿ ಮಾತ್ರ ಹಿಂದುಳಿದAತಾಗಿದೆ.

ಛಾಯಾ ಭಗವತಿ ದೇವಸ್ಥಾನ: ನಿಸರ್ಗ ನಿರ್ಮಿತ ಕಲ್ಲು ಬಂಡೆಗಳ ಮಧ್ಯದಲ್ಲಿರುವ ದಕ್ಷಿಣಕಾಶಿ ಶ್ರೀ ಛಾಯಾ ಭಗವತಿ ದೇವಸ್ಥಾನದ ಅಭಿವೃದ್ಧಿ ಕೂಡ ಶೂನ್ಯ. ಪ್ರತಿವರ್ಷ ಅಕ್ಷಯ ತೃತೀಯ ದಿನ ನಡೆಯುವ ಯಾತ್ರಾ ಮಹೋತ್ಸವಕ್ಕೆ ರಾಜ್ಯದ ವಿವಿಧ ಮೂಲೆಗಳಿಂದ ಸಾವಿರಾರು ಯಾತ್ರಾರ್ಥಿಗಳು ಬರುತ್ತಾರೆ. ಆದರೆ ಯಾವುದೇ ಮೂಲಸೌಲಭ್ಯಗಳಿಲ್ಲದೆ ದೇಗುಲದ ಅಭಿವೃದ್ಧಿ ಮರಿಚೀಕೆಯಾಗಿಯೇ ಉಳಿದಿದೆ.

ಡೋಣ ಅಕ್ವಾಡೆಕ್ಟ್: ಹೊರಹಟ್ಟಿ ಗ್ರಾಮದ ಬಳಿ ಡೋಣಿ ನದಿ ಮೇಲೆ ಕೃಷ್ಣಾ ಎಡದಂಡೆ ಕಾಲುವೆಗೆ ನಿರ್ಮಿಸಿರುವ ಅಕ್ವಾಡೆಕ್ಟ್ ಏಷ್ಯಾ ಖಂಡದಲ್ಲೇ ಅತ್ಯಂತ ಉದ್ದವಾದ ಅಕ್ವಾಡೆಕ್ಟ್ ಎಂಬ ಖ್ಯಾತಿ ಪಡೆದಿದೆ. ಪ್ರವಾಸೋದ್ಯಮ ಇಲಾಖೆ ಮನಸ್ಸು ಮಾಡಿದರೆ ಈ ಸ್ಥಳ ಪ್ರವಾಸಿಗರನ್ನು ಆಕರ್ಷಿಸುವಂತೆ ಮಾಡಬಹುದು. ಆದರೆ ಇಂತಹ ಸ್ಥಳಗಳನ್ನು ಸರ್ಕಾರ ಪ್ರವಾಸಿ ತಾಣವನ್ನಾಗಿ ಮಾಡಲು ಏಕೆ ಮುಂದಾಗುತ್ತಿಲ್ಲ ಎಂಬ ಪ್ರಶ್ನೆ ಎಲ್ಲರನ್ನು ಕಾಡುತ್ತಿದೆ.
ಇನ್ನುಳಿದಂತೆ ರಾಜನಕೋಳೂರ ಗ್ರಾಮದಲ್ಲಿ ಬುಡ್ಡರ ಮನೆಗಳೆಂದು ಹೆಸರುವಾಸಿಯಾಗಿರುವ ಹಳೇ ಶಿಲಾಯುಗದ ಶಿಲಾ ಸಮಾಧಿಗಳ ಸ್ಥಳವೂ ಹಾಗೆ ಉಳಿದಿದೆ.