ಜಿಲ್ಲೆ

ಅಭಿವೃದ್ಧಿಯಿಂದ ದೂರಾಗಿರುವ ಮಂಡ್ಯ

ಮಂಡ್ಯ: ಜಿಲ್ಲೆಯಲ್ಲಿ ಅಭಿವೃದ್ಧಿ ಮರೀಚಿಕೆಯಾಗಿದೆ. ರೈತರ ಮಕ್ಕಳು ದೂರದ ನಗರಗಳಲ್ಲಿ ಸಿಕ್ಕ ಕೆಲಸ ಮಾಡಿಕೊಂಡು ಕಡಿಮೆ ವೇತನಕ್ಕೆ ಬದುಕು ನಡೆಸುವಂತಾಗಿದೆ. ಆದರೆ, ಇತ್ತ ಅವರ ಮನೆಯವರು ಮಂಡ್ಯದ ಹಳ್ಳಿಗಳಲ್ಲಿ ಸಂಕಷ್ಟದಲ್ಲಿ ಜೀವನ ಸಾಗಿಸುತ್ತಿದ್ದಾರೆ ಎಂದು ರಾಜ್ಯ ರೈತ ಸಂಘದ ಸಂಘಟನಾ ಕಾರ್ಯದರ್ಶಿ ಎಸ್.ಸಿ.ಮಧುಚಂದನ್ ವಿಷಾದಿಸಿದರು.
ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ಆರ್ಗ್ಯಾನಿಕ್ ಮಂಡ್ಯ ಾರ್ಮರ್ಸ್ ೌಂಡೇಷನ್‌ನ ವತಿಯಿಂದ ಭಾನುವಾರ ಆಯೋಜಿಸಿದ್ದ ಕೀರೆಮಡಿ ಮಹಿಳಾ ಸಮಾವೇಶ ಹಾಗೂ ಕೀರೆಮಡಿ ಮಹಿಳಾ ಸೌಹಾರ್ದ ಸಹಕಾರ ಸಂಘದ ಸ್ಥಾಪನೆ ಕುರಿತ ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು. ಹಲವಾರು ದೇಶಗಳಲ್ಲಿ ಕೆಲಸ ಮಾಡಿದ್ದ ನನಗೆ ಹಣ ಅಧಿಕಾರ ಅಂತಸ್ತು ಎಲ್ಲವೂ ಲಭಿಸಿತ್ತು. ಆದರೆ, ನನ್ನ ತವರು ಮಂಡ್ಯದ ಮೇಲಿನ ಭಾವನಾತ್ಮಕ ಸೆಳೆತ ನನ್ನನ್ನು ಇಲ್ಲಿಗೆ ಕರೆತಂದಿದೆ. ಅಕ್ಕಪಕ್ಕದ ಜಿಲ್ಲೆಗಳಾದ ತುಮಕೂರು, ಹಾಸನ ಏನೆಲ್ಲ ಅಭಿವೃದ್ಧಿ ಕಂಡಿವೆ. ಅಲ್ಲಿನ ಮಂಡ್ಯ ಜಿಲ್ಲೆ ಜನ ಅದೇ ಜಿಲ್ಲೆಯಲ್ಲಿ ಕೆಲಸ ಮಾಡಿಕೊಂಡಿದ್ದಾರೆ. ಮಾತ್ರವಲ್ಲದೆ ಮಂಡ್ಯ ಹಿಂದೆ ಹೇಗಿತ್ತೋ ಈಗಲೂ ಹಾಗೆಯೇ ಇದೆ ಎಂದರು.
ಮಂಡ್ಯ ತಾಲೂಕಿನ ಹೆಣ್ಣುಮಕ್ಕಳು ಇಲ್ಲಿ ಸರಿಯಾದ ಕೈಗಾರಿಕೆಗಳಿಲ್ಲದೆ ಪ್ರತಿದಿನ ವಾಹನಗಳಲ್ಲಿ ಪಕ್ಕದ ತಾಲೂಕುಗಳಲ್ಲಿರುವ ಗಾರ್ಮೆಂಟ್ಸ್‌ಗಳಿಗೆ ಹೋಗಿ ಬರುತ್ತಿದ್ದಾರೆ. ಇನ್ನು ಅನೇಕ ಅನಕ್ಷರಸ್ಥ ಮಹಿಳೆಯರು ಮತ್ತೊಬ್ಬರ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದಾರೆ. ಮಾತ್ರವಲ್ಲದೆ ಅನೇಕ ಸಂಕಷ್ಟಗಳ ನಡುವೆ ಬದುಕು ಸಾಗಿಸುತ್ತಿದ್ದಾರೆ. ಅದಕ್ಕಾಗಿ ಆರ್ಗ್ಯಾನಿಕ್ ಮಂಡ್ಯ ವತಿಯಿಂದ ಸುಮಾರು 1,500 ನಾಟಿ ಹಸುಗಳನ್ನು ವಿತರಿಸಲಾಗಿದೆ. 23 ರಿಂದ 24 ಸಾವಿರ ಮಹಿಳೆಯರು ಕೀರೆಮಡಿ ಸಂಘದಲ್ಲಿದ್ದಾರೆ. ಅವರೆಲ್ಲರಿಗೂ ವಿಮಾ ಸೌಲಭ್ಯ ಕಲ್ಪಿಸಲಾಗುತ್ತಿದೆ. ಇದು ನಮ್ಮ ಕಳಕಳಿ ಎಂದರು.
ನಮ್ಮ ಜನಪ್ರತಿನಿಧಿಗಳು ಏನು ಮಾಡುತ್ತಿದ್ದಾರೆ? ಅಧಿಕಾರವಿದ್ದರೂ ಒಂದಷ್ಟು ಜನರಿಗೆ ಉದ್ಯೋಗ ನೀಡುವ ಅವಕಾಶ ಕಲ್ಪಿಸಲಾಗಿಲ್ಲ ಎಂದರೆ ಇವರನ್ನು ಜನಪ್ರತಿನಿಧಿಗಳು ಎನ್ನುತ್ತೀರಾ? ನಾವು ಮಗಳ ಮದುವೆ ಮಾಡಲು ವರನ ಸಂಪೂರ್ಣ ವಿವರ ಕೇಳುತ್ತೇವೆ. ಆದರೆ, ನಮ್ಮನ್ನು ಐದು ವರ್ಷ ಕಾಲ ಆಳುವ ವ್ಯಕ್ತಿಯ ಕುರಿತು ಏನೂ ವಿಚಾರಿಸದೆ ಯಾರು ಜಾಸ್ತಿ ಹಣ ಕೊಡುತ್ತಾರೋ ಅವರಿಗೆ ಮತ ಹಾಕುವುದು ಸರಿಯಲ್ಲ. ಸಾಲ ಮಾಡಿ ಮಕ್ಕಳನ್ನು ಖಾಸಗಿ ಶಾಲೆಗೆ ಸೇರಿಸಿ ಇನ್ನಷ್ಟು ಸಾಲಗಾರರಾಗುತ್ತಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಕೊಡಬೇಕಾದ ಜ್ಞಾನದಾಸೋಹ ಬಿಟ್ಟು ಬಿಸಿಯೂಟ ಮಾತ್ರ ಕೊಡುತ್ತಿದ್ದಾರೆ. ಆದ್ದರಿಂದ ಈ ಕ್ಷೇತ್ರದ ಜನ ಇದನ್ನು ಸವಾಲಾಗಿ ತೆಗೆದುಕೊಂಡು ಮಂಡ್ಯ ನಿರ್ಮಾಣಕ್ಕೆ ಮುಂದಾಗಬೇಕು. ಅದುವೇ ನನ್ನ ಗುರಿ, ಆದ್ಯತೆ ಎಂದು ಹೇಳಿದರು.
ನಗರಸಭೆ ಮಾಜಿ ಸದಸ್ಯೆ ನಾಗರೇವಕ್ಕ ಮಾತನಾಡಿ, ಮಂಡ್ಯ ಬದಲಾಗಬೇಕೆಂದರೆ ಮಹಿಳೆಯರು ಸ್ವಾವಲಂಬನೆಯಿಂದ ಬದುಕು ಕಟ್ಟಿಕೊಳ್ಳಲು ಸಾಧ್ಯ. ಒಂದು ಕುಕ್ಕರ್, ಸೀರೆ, ಹಣಕ್ಕಾಗಿ ಆಸೆಪಟ್ಟು ಮತಹಾಕಿದರೆ ಮುಂದೆ ಸಾಕಷ್ಟು ಸಂಕಷ್ಟಕ್ಕೆ ಸಿಲುಕಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ರೈತ ಸಂಘದ ರಾಜ್ಯ ಸಮಿತಿ ಸದಸ್ಯ ಪ್ರಸನ್ನ ಎನ್.ಗೌಡ ಮಾತನಾಡಿ, ಇದುವರೆಗೆ ಮತದಾರರಿಗೆ ಇನ್ನೂರು ಮುನ್ನೂರು ಕೊಟ್ಟು ಆಯ್ಕೆಗೊಂಡು ಬಂದವರು ತಾವು ಮಾತ್ರ ಕೋಟ್ಯಂತರ ರೂ.ಆಸ್ತಿ ಗಳಿಸಿಕೊಂಡಿದ್ದಾರೆ. ತಕ್ಷಣದ ಆಸೆ ಬಿಟ್ಟು ಸ್ವಾವಲಂಬನೆಯ ಬದುಕು ಕಟ್ಟಿಕೊಳ್ಳಲು ನೆರವಾಗುವಂಥವರನ್ನು ಗೆಲ್ಲಿಸಿಕೊಳ್ಳಿ. ಅದಕ್ಕಾಗಿ ಈ ಬಾರಿ ಬದಲಾವಣೆ ತನ್ನಿ ಎಂದು ಕರೆ ನೀಡಿದರು.
ನಗರಸಭೆ ಮಾಜಿ ಅಧ್ಯಕ್ಷೆ ನಿರ್ಮಲಾ ಚಿಕ್ಕೇಗೌಡ ಅಧ್ಯಕ್ಷತೆ ವಹಿಸಿದ್ದರು. ಕಸಾಪ ನಗರಾಧ್ಯಕ್ಷೆ ಸುಜಾತಾ ಕೃಷ್ಣ, ಹುಲಿವಾನ ರವಿಕುಮಾರ್, ಸ್ಕೌಟ್ಸ್ ಮತ್ತು ಗೈಡ್ಸ್ ಆಯುಕ್ತ ವರಪ್ರಸಾದ್, ತಗ್ಗಹಳ್ಳಿ ಪ್ರಸನ್ನ ಇತರರಿದ್ದರು.
ಸಮಾವೇಶದಲ್ಲಿ ಪ್ರಸ್ತುತ ಚುನಾವಣಾ ವ್ಯವಸ್ಥೆ, ಹಣ ಆಮಿಷಕ್ಕೊಳಗಾಗಿ ಮತ ಮಾರಿಕೊಳ್ಳುವುದರಿಂದ ಆಗುವ ದುಷ್ಪರಿಣಾಮಗಳು, ಆಗಬೇಕಾಗಿರುವ ಬದಲಾವಣೆಗಳೇನು ಎಂಬ ನಿಟ್ಟಿನಲ್ಲಿ ಚಿಂತನ ಮಂಥನ ನಡೆಯಿತು. ವಿವಿಧೆಡೆಯಿಂದ ಮಹಿಳೆಯರು ಆಗಮಿಸಿದ್ದರು. ಇದೇ ವೇಳೆ ಕೀರೆಮಡಿ ಮಹಿಳಾ ಸಂಘದ ಸದಸ್ಯರಿಗೆ ವಿಮಾಪತ್ರ ವಿತರಿಸಲಾಯಿತು.