ಬೆಳಗಾವಿ: ರಾಜ್ಯ ಸರ್ಕಾರವು ಬೆಳಗಾವಿ ಜಿಲ್ಲೆಯಲ್ಲಿ ಉದ್ಯೋಗಾವಕಾಶ ಹಾಗೂ ಮೂಲ ಸೌಕರ್ಯ ವೃದ್ಧಿ ವಿಷಯವಾಗಿ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿ, ಆಮ್ ಆದ್ಮಿ ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ರವಾನಿಸಿದರು.
ಉತ್ತರ ಕರ್ನಾಟಕ ನಾಯಕರಾಗಿದ್ದ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾದ ಬಳಿಕ ಬೆಳಗಾವಿ ಜಿಲ್ಲೆಯ ಜನರು ಅವರ ಮೇಲೆ ಸಾಕಷ್ಟು ನಂಬಿಕೆ ಇಟ್ಟುಕೊಂಡಿದ್ದರು. ಎಲ್ಲ ಹಂತದಲ್ಲಿಯೂ ಸಕಲ ಸೌಕರ್ಯ ಹೊಂದಿರುವ ಬೆಳಗಾವಿ ಜಿಲ್ಲೆಯನ್ನು ಕಡೆಗಣಿಸಿ ಹುಬ್ಬಳ್ಳಿ-ಧಾರವಾಡ, ಕಲಬುರಗಿ, ಬೆಂಗಳೂರು ಹಾಗೂ ಮಂಗಳೂರಿನ ಹೊರ ಭಾಗದಲ್ಲಿ ಹೈಟೆಕ್ ಸಿಟಿ ನಿರ್ಮಾಣ ಘೋಷಣೆ ಮಾಡಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇತ್ತೀಚೆಗೆ ಬೆಂಗಳೂರಿನಲ್ಲಿ ಆಯೋಜಿಸಿದ್ದ ತಂತ್ರಜ್ಞಾನ ಶೃಂಗದ ರಜತೋತ್ಸವದಲ್ಲಿ ಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳ ಬೆಳವಣಿಗೆ ಉತ್ತೇಜಿಸಲು ಬೆಳಗಾವಿ ಜಿಲ್ಲೆಯನ್ನು ಕಡೆಗಣಿಸಿ ರಾಜ್ಯದ ಆರು ಜಿಲ್ಲೆಗಳಲ್ಲಿ ಹೈಟೆಕ್ ಸಿಟಿ ನಿರ್ಮಾಣ ಘೋಷಣೆ ಮಾತ್ರವಲ್ಲ ಸ್ಟಾರ್ಟ್ ಅಪ್ ಕ್ಲಸ್ಟರ್ ನಲ್ಲಿಯೂ ಬೆಳಗಾವಿಗೆ ಅನ್ಯಾಯವಾಗಿದೆ. ಹುಬ್ಬಳ್ಳಿ-ಧಾರವಾಡ, ಬೆಳಗಾವಿ ಸೇರಿ ಕ್ಲಸ್ಟರ್ ನಿರ್ಮಾಣ ಮಾಡಿದರು. ಅದರ ಎಲ್ಲ ಕಾರ್ಯಕ್ರಮ, ಯೋಜನೆಗಳು ಕೇವಲ ಹುಬ್ಬಳ್ಳಿ-ಧಾರವಾಡದ ಪಾಲಾಗುತ್ತಿವೆ ವಿನಃ ಬೆಳಗಾವಿಗೆ ಬರುತ್ತಿಲ್ಲ. ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಎಕ್ಸಿಲೆನ್ಸ್ ಸೆಂಟರ್ ಬೆಳಗಾವಿ ಜಿಲ್ಲೆಗೆ ಘೋಷಣೆ ಮಾಡಿ ಹುಬ್ಬಳ್ಳಿ-ಧಾರವಾಡದಲ್ಲಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಆಮ್ ಆದ್ಮಿ ಉತ್ತರ ವಲಯ ಉಸ್ತುವಾರಿ ರಾಜಕುಮಾರ ಟೋಪಣ್ಣವರ, ಶಂಕರ ಹೆಗಡೆ, ಅಸ್ತಂ ತಹಸೀಲ್ದಾರ್, ಸುದರ್ಶನ ಶಿಂಧೆ, ಶಬ್ಬೀರ್ ಮುಲ್ಲಾ, ರವೀಂದ್ರ ಬೆಲ್ಲದ ಇತರರಿದ್ದರು.