ಕೊಳ್ಳೇಗಾಲ: ಪಟ್ಟಣ ವ್ಯಾಪ್ತಿಯಲ್ಲಿರುವ ಕೊಂಗಳಕೆರೆ ಹಾಗೂ ಮುಡಿಗುಂಡ ಕೆರೆ ಅಭಿವೃದ್ಧಿ ಕಾಮಗಾರಿ ಭರದಿಂದ ಸಾಗುತ್ತಿದೆ ಎಂದು ಶಾಸಕ ಎನ್.ಮಹೇಶ್ ಹೇಳಿದರು.
ಸಣ್ಣ ನೀರಾವರಿ ಇಲಾಖೆ ಮೂಲಕ 10 ಕೋಟಿ ರೂ. ವೆಚ್ಚದಲ್ಲಿ ಪಟ್ಟಣ ವ್ಯಾಪ್ತಿಯಲ್ಲಿ ಬರುವ ಚಿಕ್ಕರಂಗನಾಥ, ಮುಡಿಗುಂಡ ಕೆರೆ, ಕೊಂಗಳಕೆರೆ ಅಭಿವೃದ್ಧಿಗೆ ಇತ್ತೀಚೆಗಷ್ಟೆ ಚಾಲನೆ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಶುಕ್ರವಾರ ವಿವಿಧ ಇಲಾಖೆಯ ಅಧಿಕಾರಿಗಳ ಜತೆ ಕೊಂಗಳಕೆರೆ ಹಾಗೂ ಮುಡಿಗುಂಡ ಕೆರೆ ಅಭಿವೃದ್ಧಿ ಕಾಮಗಾರಿ ವೀಕ್ಷಿಸಿ ಮಾತನಾಡಿದರು.
ಪಟ್ಟಣದಲ್ಲಿ ಈ ಮೂರು ಕೆರೆಗಳನ್ನು ಅಭಿವೃದ್ಧಿಪಡಿಸುವ ಉದ್ದೇಶದಿಂದ 10 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಇದರಿಂದ ಜನವಸತಿ ಪ್ರದೇಶದಿಂದ ಕೆರೆಗಳಿಗೆ ತುಂಬುತ್ತಿದ್ದ ವೇಸ್ಟೇಜ್ ನೀರಿಗೂ ಕಡಿವಾಣ ಬೀಳಲಿದ್ದು, ಒಂದು ಸುಂದರ ವಾತಾವರಣ ಸೃಷ್ಟಿಯಾಗುತ್ತದೆ. ಕೆರೆ ಸಂರಕ್ಷಣೆ ಹಾಗೂ ಸಾರ್ವಜನಿಕರಿಗೆ ಉಪಯೋಗಕ್ಕೆ ಬರುವಂತೆ ಕೆರೆಯ ಸುತ್ತಲೂ ವಾಕಿಂಗ್ ಪಾತ್ ನಿರ್ಮಿಸುವುದು, ಗಿಡ ನೆಡುವುದು, ಇದೀಗ ಶೇಖರಣೆ ಆಗಿರುವ ಕೊಳಚೆ ನೀರನ್ನು ಸಂಪೂರ್ಣವಾಗಿ ಹೊರತೆಗೆದು ಸ್ವಚ್ಛಂದವಾದ ಕೆರೆ ಪರಿಸರ ಸೃಷ್ಟಿಸುವುದಕ್ಕಾಗಿ ಅಭಿವೃದ್ಧಿಪಡಿಸಲಾಗುತ್ತಿದೆ ಎಂದರು.
ಉಪವಿಭಾಗಾಧಿಕಾರಿ ಗೀತಾ ಹುಡೇದ, ತಹಸೀಲ್ದಾರ್ ಮಂಜುಳಾ, ನಗರಸಭೆ ಆಯುಕ್ತ ನಂಜುಂಡಸ್ವಾಮಿ, ಸಣ್ಣ ನೀರಾವರಿ ಇಲಾಖೆಯ ಎಇಇ ರಮೇಶ್, ರಾಮಕೃಷ್ಣ, ಸೆಸ್ಕ್ ಎಇಇ ಲಿಂಗರಾಜು, ನಾಮನಿರ್ದೇಶಿತ ಸದಸ್ಯ ಮಧುಚಂದ್ರ, ಮುಖಂಡ ಆಗಸ್ಟೀನ್, ರಾಜೇಂದ್ರ, ಜಗದೀಶ್ ಮತ್ತಿತರಿದ್ದರು.