ಜಿಲ್ಲೆ

ಅಭಿವೃದ್ಧಿಯ ಕ್ರೆಡಿಟ್ ಪಡೆಯಲು ಪೈಪೋಟಿ : ಬಿಜೆಪಿ-ಜೆಡಿಎಸ್‌ನಿಂದ ಜಂಗಿ ಕುಸ್ತಿ ಆರಂಭ

ಚನ್ನಪಟ್ಟಣ: ಸಾರ್ವತ್ರಿಕ ಚುನಾವಣೆಗೆ ಹಲವು ತಿಂಗಳು ಬಾಕಿ ಇರುವಾಗಲೇ ಹಾಗೂ ಜಿಪಂ, ತಾಪಂ ಚುನಾವಣೆ ಸಮೀಪಿಸುತ್ತಿದ್ದು, ಬೊಂಬೆನಾಡಿನಲ್ಲಿ ರಾಜಕೀಯ ಕಾವೇರಿದೆ. ಅಭಿವೃದ್ಧಿಯ ಕ್ರೆಡಿಟ್ ಪಡೆಯಲು ಜೆಡಿಎಸ್ ಹಾಗೂ ಬಿಜೆಪಿ ಜಂಗಿಕುಸ್ತಿ ಆರಂಭಿಸಿವೆ.

ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಸ್ವಕ್ಷೇತ್ರವಾದ ಕಾರಣ ಚನ್ನಪಟ್ಟಣದ ರಾಜಕೀಯ ಸಾಕಷ್ಟು ರಂಗು ಪಡೆದುಕೊಂಡಿದೆ. ಕ್ಷೇತ್ರದಲ್ಲಿ ನಡೆಯುತ್ತಿರುವ ಹಾಗೂ ನಡೆದಿರುವ ಕಾಮಗಾರಿಗಳ ಕ್ರೆಡಿಟ್ ಪಡೆಯಲು ಈ ಎರಡೂ ಪಕ್ಷಗಳ ಕಾರ್ಯಕರ್ತರು ಪೈಪೋಟಿಗಿಳಿದಿದ್ದಾರೆ. ಮಾಕಳಿ ಏತ ನೀರಾವರಿ ಯೋಜನೆ ಹಾಗೂ ಕೋಲೂರು ಗ್ರಾಮದ ಅಭಿವೃದ್ಧಿ ವಿಚಾರದಲ್ಲಿ ನಡೆಯುತ್ತಿರುವ ಚರ್ಚೆಗಳು ಇದಕ್ಕೆ ಪುಷ್ಠಿ ನೀಡಿದೆ.

ನೀರಾವರಿ ಯೋಜನೆ ಫಲಕ್ಕೆ ಆರಂಭವಾದ ೈಟ್

ಗರಕಹಳ್ಳಿ ಹಾಗೂ ಕಣ್ವ ಏತ ನೀರಾವರಿಯಿಂದ ತಾಲೂಕು ಸಮೃದ್ಧವಾಗಿರುವುದು ಇತಿಹಾಸ. ಈ ನಡುವೆ ನೀರಾವರಿಯಿಂದ ವಂಚಿತವಾಗಿದ್ದ ಮಾಕಳಿ ಭಾಗಕ್ಕೆ ಮಾಕಳಿ ಏತ ನೀರಾವರಿ ಯೋಜನೆ ರೂಪಿಸಲಾಗಿತ್ತು. ಇದೀಗ, ಕಣ್ವ ಜಲಾಶಯದಿಂದ ಸೋಮವಾರ ಮಾಕಳಿ ಭಾಗಕ್ಕೆ ಪ್ರಾಯೋಗಿಕವಾಗಿ ನೀರು ಹರಿಸಲಾಗಿದೆ. ಈ ಭಾಗಕ್ಕೆ ನೀರು ಹರಿಯುತ್ತಲೇ ಇದರ ಲಾಭ ಪಡೆಯಲು ಎರಡೂ ಪಕ್ಷಗಳ ಸ್ಥಳೀಯ ನಾಯಕರು ಹರಸಾಹಸ ಆರಂಭಿಸಿದ್ದಾರೆ. ನೀರಾವರಿಯಿಂದ ವಂಚಿತವಾಗಿದ್ದ ನಮ್ಮ ಭಾಗಕ್ಕೆ ಕುಮಾರಸ್ವಾಮಿ ಅವರು ನೀರು ಹರಿಸಲು ಕಾರಣರಾಗಿದ್ದಾರೆ. ಅವರ ಶ್ರಮದಿಂದ ನೀರಾವರಿ ವಂಚಿತ ಭಾಗಕ್ಕೆ ಜೀವಸೆಲೆ ಸಿಕ್ಕಿದೆ ಎಂಬುದು ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರ ವಾದವಾಗಿದೆ. ಆದರೆ, ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಆ ಭಾಗದ ಬಿಜೆಪಿ ಮುಖಂಡರು, ನಮ್ಮ ಭಾಗಕ್ಕೆ ನೀರು ಹರಿಯಲು ಕುಮಾರಸ್ವಾಮಿಯವರ ಶ್ರಮ ಲವಲೇಶವೂ ಇಲ್ಲ. ಈ ಭಾಗವನ್ನು ನೀರಾವರಿ ಮಾಡುವುದು ನಮ್ಮ ನಾಯಕ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಅವರ ಕನಸಿನ ಕೂಸಾಗಿತ್ತು. ಅವರ ಶ್ರಮ ಹಾಗೂ ಹೋರಾಟದಿಂದ ಈ ಭಾಗದ 20ಕ್ಕೂ ಹೆಚ್ಚಿನ ಕೆರೆ-ಕಟ್ಟೆಗಳಿಗೆ ಜೀವ ಬರುತ್ತಿದೆ. ಆದರೆ, ಈ ಯೋಜನೆ ನಮ್ಮದು ಎನ್ನುವ ಜೆಡಿಎಸ್ ಮುಖಂಡರು ಈ ಯೋಜನೆ ಬಗ್ಗೆ ಅವರ ಹೋರಾಟ ಹಾಗೂ ಕೆಲಸ ಬಹಿರಂಗಪಡಿಸಲಿ ಎಂದು ಕಾದಾಟಕ್ಕೆ ಇಳಿದಿದ್ದಾರೆ.

ಕೋಲೂರು ಅಭಿವೃದ್ಧಿ ರಗಳೆ: ಇನ್ನು ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿರುವ ಕೋಲೂರು ಅಭಿವೃದ್ಧಿ ವಿಚಾರದಲ್ಲೂ ಜೆಡಿಎಸ್ ಹಾಗೂ ಬಿಜೆಪಿ ಕಾರ್ಯಕರ್ತರ ಜಂಗೀಕುಸ್ತಿ ಆರಂಭವಾಗಿದೆ. ಇತ್ತೀಚೆಗೆ ಗ್ರಾಮಕ್ಕೆ ಭೇಟಿ ನೀಡಿದ್ದ ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್, ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ ಹಾಗೂ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ವೇಳೆ ಖಾಸಗಿ ವ್ಯಾಜ್ಯದಿಂದ ಹಲವು ದಿನಗಳಿಂದ ಸಮಸ್ಯೆಯಾಗಿದ್ದ ರಸ್ತೆ ವ್ಯಾಜ್ಯವೊಂದನ್ನು ಪರಿಹರಿಸಿದ್ದರು. ಇದು ಸಾಕಷ್ಟು ಪ್ರಚಾರ ಪಡೆದುಕೊಂಡಿತ್ತು. ಆದರೆ, ಇದಕ್ಕೆ ಪತ್ರಿಕೆ ಪ್ರಕಟಣೆಯ ಮೂಲಕ ಟಾಂಗ್ ಕೊಟ್ಟ ಅಲ್ಲಿನ ಜೆಡಿಎಸ್ ಮುಖಂಡರು, ನಮ್ಮ ಗ್ರಾಮದ ವಿಚಾರದಲ್ಲಿ ಸಿ.ಪಿ. ಯೋಗೇಶ್ವರ್ ಅನಗತ್ಯ ಪ್ರಚಾರ ಪಡೆಯುತ್ತಿದ್ದಾರೆ ಎಂದು ಆರೋಪಿಸಿದ್ದರು. ನಮ್ಮ ನಾಯಕರಾದ ಕುಮಾರಸ್ವಾಮಿಯವರು, ಕೋಲೂರು ಗ್ರಾಮಕ್ಕೆ ಶುದ್ಧ ನೀರಿನ ಘಟಕ ಮಂಜೂರು ಮಾಡಿಕೊಟ್ಟಿದ್ದು ಕಾಮಗಾರಿ ಪ್ರಗತಿಯಲ್ಲಿದೆ. ಇಷ್ಟೇ ಅಲ್ಲದೆ ನಮ್ಮ ಗ್ರಾಮದಲ್ಲಿ ಶಾಸಕರ ಅನುದಾನದಲ್ಲಿ ಹಲವಾರು ರಸ್ತೆಗಳೂ ಅಭಿವೃದ್ದಿ ಆಗಿದ್ದು ಇನ್ನೂ ಅನೇಕ ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ಸಮರ್ಥಿಸಿಕೊಂಡಿದ್ದರು. ಇದಕ್ಕೆ ವಿರೋಧ ವ್ಯಕ್ತಪಡಿಸಿರುವ ಬಿಜೆಪಿ ಕಾರ್ಯಕರ್ತರು, ಕೋಲೂರು ಗ್ರಾಮದ ಅಭಿವೃದ್ಧಿ ವಿಚಾರದಲ್ಲಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರ ಸಾಕ್ಷಿಗುಡ್ಡೆ ಏನೂ ಇಲ್ಲ. ಅಭಿವೃದ್ಧಿ ಮಾಡಿದ್ದಾರೆ ಎಂದು ಹೇಳಿಕೆ ನೀಡುತ್ತಿರುವ ಕೆಲ ಜೆಡಿಎಸ್ ಮುಖಂಡರು ದಾಖಲೆ ಸಮೇತ ಬಹಿರಂಗ ಚರ್ಚೆಗೆ ಬರಲಿ ಎಂದು ಪಂಥಾಹ್ವಾನ ನೀಡುವ ಮೂಲಕ ಗ್ರಾಮದ ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಕೆಸರೆರಚಾಟಕ್ಕೆ ನಿಂತಿದ್ದಾರೆ.

ಒಟ್ಟಾರೆ, ಚುನಾವಣೆಗೆ ಹಲವು ತಿಂಗಳು ಬಾಕಿ ಇರುವಾಗಲೇ ತಾಲೂಕಿನಲ್ಲಿ ರಾಜಕೀಯ ರಂಗು ಪಡೆದುಕೊಂಡಿರುವುದು ಎಲ್ಲೆಡೆ ಕಂಡುಬರುತ್ತಿದೆ. ಪ್ರತಿ ಅಭಿವೃದ್ಧಿ ವಿಚಾರಕ್ಕೂ ಎರಡು ಪಕ್ಷದ ಕಾರ್ಯಕರ್ತರು ವಾದ ಪ್ರತಿವಾದಕ್ಕೆ ಇಳಿದಿದ್ದಾರೆ. ಮುಂದಿನ ದಿನಗಳಲ್ಲಿ ಇದು ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ.