ಜಿಲ್ಲೆ

ಅಭಿವೃದ್ಧಿಪಡಿಸಿ ಬಡಾವಣೆ ಹಸ್ತಾಂತರ ಮಾಡಿ:  ಅಧಿಕಾರಿಗಳಿಗೆ ಶಾಸಕ ಜಿಟಿಡಿ ಸೂಚನೆ

ಮೈಸೂರು: ಜೆ.ಎನ್. ನರ್ಮ್-ಬಿಎಸ್‌ಯುಪಿ ಯೋಜನೆಯಡಿ ನಿರ್ಮಾಣಗೊಂಡಿರುವ ಬಡಾವಣೆಗಳನ್ನು ಪೂರ್ಣ ಪ್ರಮಾಣದಲ್ಲಿ ಅಭಿವೃದ್ಧಿ ಪಡಿಸಿ ಹಸ್ತಾಂತರ ಮಾಡುವಂತೆ ಅಧಿಕಾರಿಗಳಿಗೆ ಶಾಸಕ ಜಿ.ಟಿ.ದೇವೇಗೌಡ ಸೂಚಿಸಿದರು.

ಜಲದರ್ಶಿನಿಯಲ್ಲಿರುವ ಶಾಸಕರ ಕಚೇರಿಯಲ್ಲಿ ಗುರುವಾರ ಶ್ರೀರಾಂಪುರ, ಬೋಗಾದಿ, ಕಡಕೊಳ ಮತ್ತು ರಮ್ಮನಹಳ್ಳಿ ಪಟ್ಟಣ ಪಂಚಾಯಿತಿಯ ಮುಖ್ಯಾಧಿಕಾರಿಗಳು ಹಾಗೂ ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಅಧಿಕಾರಿಗಳ ಸಭೆ ನಡೆಸಿದರು.

ಚಾಮುಂಡೇಶ್ವರಿ ಕ್ಷೇತ್ರದ ವ್ಯಾಪ್ತಿಯಲ್ಲಿ ಏಕಲವ್ಯನಗರ (1040 ಮನೆಗಳು), ಬೋಗಾದಿ ರೂಪಾನಗರ (ನಿಂಗರಾಜನಕಟ್ಟೆ-156 ಮನೆಗಳು), ಹಂಚ್ಯಾ ಸಾತಗಳ್ಳಿ(ಭಾರತ್‌ನಗರ-432 ಮನೆಗಳು), ಕುಪ್ಪಲೂರು (ಮಹದೇವಪುರ-336 ಮನೆಗಳು), ಮಂಡಕಳ್ಳಿ (576 ಮನೆಗಳು), ಸಾತಗಳ್ಳಿ (ವಿ.ಟಿ.ಯು. ಹಿಂಭಾಗ-560 ಮನೆಗಳು), ರಾಜೀವ್‌ನಗರ (552 ಮನೆಗಳು), ಹಳೇ ಕೆಸರೆ (252 ಮನೆಗಳು) ಸೇರಿದಂತೆ 3904 ಮನೆಗಳನ್ನು ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿಯಿಂದ ನಿರ್ಮಾಣಗೊಂಡಿದ್ದು, ಇವುಗಳಲ್ಲಿ ಫಲಾನುಭವಿಗಳು ವಾಸಮಾಡುತ್ತಿದ್ದಾರೆ.

ಆದರೆ ಈ ಬಡಾವಣೆಗಳಲ್ಲಿ ಮೂಲ ಸೌಕರ್ಯವಿಲ್ಲದೆ ತೊಂದರೆ ಅನುಭವಿಸುತ್ತಿದ್ದಾರೆ. ಆದ್ದರಿಂದ ಈ ಬಡಾವಣೆಗಳನ್ನು ಪೂರ್ಣಪ್ರಮಾಣದಲ್ಲಿ ಅಭಿವೃದಿ ್ಧಪಡಿಸಬೇಕು ಎಂದು ನಿರ್ದೇಶಿಸಿದರು.

ಈಗಾಗಲೇ ಮುಖ್ಯಮಂತ್ರಿ, ವಸತಿ ಸಚಿವರನ್ನು ಖುದ್ದಾಗಿ ಭೇಟಿ ಮಾಡಿ ಈ ಬಡಾವಣೆಗಳ ಅಭಿವೃದ್ಧಿಗೆ ಅನುದಾನ ನೀಡುವಂತೆ ಮನವಿ ಸಲ್ಲಿಸಿದ್ದು, ಅನುದಾನ ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದ್ದಾರೆ. ಆದ್ದರಿಂದ ಮಂಡಳಿಯ ಇಂಜಿನಿಯರ್, ಪಟ್ಟಣ ಪಂಚಾಯಿತಿಯ ಮುಖ್ಯಾಧಿಕಾರಿಗಳು, ಪಿಡಿಒಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ, ಅಲ್ಲಿನ ನಿವಾಸಿಗಳೊಡನೆ ಕುಂದುಕೊರತೆ ಸಭೆ ಮಾಡಬೇಕು. ಅವಶ್ಯವಾಗಿರುವ ಕುಡಿಯುವ ನೀರು, ಒಳಚರಂಡಿ, ರಸ್ತೆ, ಅಂಗನವಾಡಿ, ಶಾಲೆ, ಸ್ಮಶಾನಗಳ ಅಭಿವೃದ್ಧಿಪಡಿಸುವ ಬಗ್ಗೆ ಅಂದಾಜು ಪಟ್ಟಿ ತಯಾರಿಸಿ ಮಂಡಳಿಗೆ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಮುಡಾದಿಂದ ಹಸ್ತಾಂತರಗೊಂಡಿರುವ ಬಡಾವಣೆಗಳಲ್ಲಿ ಖಾತೆ ಅದಾಲತ್ ಜತೆಗೆ ಕುಂದುಕೊರತೆಗಳ ಸಭೆ ಮಾಡುವಂತೆ ಮುಖ್ಯಾಧಿಕಾರಿಗಳಿಗೆ ಸೂಚಿಸಿದರು.

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಬಡಾವಣೆಗಳನ್ನು ಸ್ಥಳೀಯ ಸಂಸ್ಥೆಗಳಾದ ಪಟ್ಟಣ ಪಂಚಾಯಿತಿ, ನಗರಸಭೆ, ಗ್ರಾಮ ಪಂಚಾಯಿತಿಗಳಿಗೆ ಹಸ್ತಾಂತರ ಮಾಡುವ ಪ್ರಕ್ರಿಯೆ ಪ್ರಗತಿಯಲ್ಲಿದೆ. ಖಾಸಗಿ ಬಡಾವಣೆಗಳಿಗೆ ಹತ್ತಾರು ವರ್ಷಗಳಿಂದ ಯಾವುದೇ ಮೂಲ ಸೌಕರ್ಯ ಮುಡಾ ಒದಗಿಸಿರುವುದಿಲ್ಲ.

ಆದ್ದರಿಂದ ಹಸ್ತಾಂತರ ಮಾಡಿಕೊಳ್ಳುವ ಪ್ರತಿ ಬಡಾವಣೆಗಳಿಗೆ ಭೇಟಿ ನೀಡಿ ಅಲ್ಲಿನ ಸಮಸ್ಯೆಗಳ ಬಗ್ಗೆ ಸ್ಥಳೀಯ ನಿವಾಸಿಗಳೊಡನೆ ಸಭೆ ನಡೆಸಬೇಕು. ಅಲ್ಲಿಯ ಜನರ ಅಭಿಪ್ರಾಯ ಪಡೆದು, ಜರೂರಾಗಿ ಅವಶ್ಯವಿರುವ ಕಾಮಗಾರಿಗಳನ್ನು ಹಂತ ಹಂತವಾಗಿ ಕೈಗೆತ್ತಿಕೊಳ್ಳಬೇಕು ಎಂದರು.

ಪ್ರತಿಯೊಬ್ಬ ಸಿಬ್ಬಂದಿಯು ಸ್ವಚ್ಛತೆ, ಕುಡಿಯುವ ನೀರು, ವಿದ್ಯುತ್, ಒಳಚರಂಡಿ ಸಮಸ್ಯೆ ನಿರ್ವಹಿಸಬೇಕು. ಪಟ್ಟಣ ಪಂಚಾಯಿತಿಯಲ್ಲಿ ಲಭ್ಯವಿರುವ ಅನುದಾನದಲ್ಲಿ ಮೂಲ ಸೌಕರ್ಯ ಒದಗಿಸಬೇಕು ಎಂದು ತಿಳಿಸಿದರು.

ಪಟ್ಟಣ ಪಂಚಾಯಿತಿಯಿಂದ ಗ್ರಾಮ, ಬಡಾವಣೆಗಳಲ್ಲಿ ಕಸ ವಿಲೇವಾರಿ ಮಾಡುವ ಕ್ರಮ ಕೈಗೊಳ್ಳಬೇಕು. ಅಧಿಕಾರಿಗಳು ಸಹ ಬೆಳಗ್ಗೆ ಭೇಟಿ ನೀಡಿ ಪರಿಶೀಲಿಸಬೇಕು ಎಂದರು.

ಪಟ್ಟಣ ಪಂಚಾಯಿತಿಯಿಂದ ಈಗಾಗಲೇ ಕೈಗೊಂಡಿರುವ ಕಾಮಗಾರಿಗಳು, ಮುಂದೆ ಕೈಗೊಳ್ಳಬೇಕಾದ ಕಾಮಗಾರಿಗಳ ಕುರಿತು ಚರ್ಚಿಸಲಾಯಿತು. ಶಾಲೆಗಳು, ಅಂಗನವಾಡಿ ಕಟ್ಟಡ ದುರಸ್ತಿಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ಸಭೆಯಲ್ಲಿ ಮುಖ್ಯಾಧಿಕಾರಿಗಳಾದ ದೀಪಾ, ಬಸವರಾಜು, ರವಿಕೀರ್ತಿ, ಸುರೇಶ್, ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯ ಅಧಿಕಾರಿಗಳು ಇನ್ನಿತರರಿದ್ದರು.