ಹಗರಿಬೊಮ್ಮನಹಳ್ಳಿ: ಉಚಿತ ಯೋಜನೆಗಳನ್ನು ನೀಡುವ ಭರಾಟೆಯಲ್ಲಿ ರಸ್ತೆಗಳ ಅಭಿವೃದ್ಧಿ ಮರೀಚಿಕೆಯಾಗಿದೆ ಎಂದು ಶಾಸಕ ಕೆ.ನೇಮಿರಾಜ್ ನಾಯ್ಕ ಹೇಳಿದರು.
ಶಕ್ತಿ ಯೋಜನೆಯಡಿ 500 ಕೋಟಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಿದ ಹಿನ್ನೆಲೆಯಲ್ಲಿ ಪಟ್ಟಣದ ಸರ್ಕಾರಿ ಬಸ್ ನಿಲ್ದಾಣದಲ್ಲಿ ಆಯೋಜಿಸಿದ್ದ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಸೋಮವಾರ ಮಾತನಾಡಿದರು. ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳ ಮೂಲಕ ಉಚಿತ ಸೌಲಭ್ಯ ಕಲ್ಪಿಸಲಿ. ಅದರೊಂದಿಗೆ ಮೂಲ ಸೌಲಭ್ಯಗಳ ಅಭಿವೃದ್ಧಿಗೆ ಸಮರ್ಪಕ ಅನುದಾನ ನೀಡುವುದು ಕೂಡ ರಾಜ್ಯ ಸರ್ಕಾರದ ಹೊಣೆಯಾಗಿದೆ ಎಂದರು.
ಉಚಿತ ಯೋಜನೆಗಳನ್ನು ನೀಡಿದ್ದಕ್ಕೆ ರಾಜ್ಯ ಅಭಿವೃದ್ಧಿಯಾಗುವುದಿಲ್ಲ. ರಸ್ತೆ, ಕುಡಿವ ನೀರು, ರೈತರಿಗೆ ಬಿತ್ತನೆ ಬೀಜ, ರಸಗೊಬ್ಬರ, ಕೃಷಿಗೆ ಪೂರಕವಾಗುವ ಪರಿಕರಗಳನ್ನು ಉಚಿತವಾಗಿ ನೀಡಬೇಕು. ಜಾತಿಗಳ ತಾರತಮ್ಯ ಮಾಡದೆ ನಿಜವಾದ ರೈತರಿಗೆ ಸೌಲಭ್ಯಗಳು ದೊರೆಯಬೇಕು. ಶಿಕ್ಷಣ ಕ್ಷೇತ್ರದಲ್ಲಿ ಸೌಲಭ್ಯಗಳ ಕೊರತೆ ಇದೆ. ಸಮೀಕ್ಷೆಗಳ ಪ್ರಕಾರ ಪ್ರಾಥಮಿಕ ಹಂತದ ಶಿಕ್ಷಣದಲ್ಲಿ ರಾಜ್ಯ ಹಿಂದೆ ಬಿದ್ದಿದೆ ಎಂದು ದೂರಿದರು.
ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಗುರುಬಸವರಾಜ ಸೊನ್ನದ್ ಮಾತನಾಡಿ, ಮಧ್ಯವರ್ತಿಗಳ ಹಾವಳಿ, ಭ್ರಷ್ಟಾಚಾರವಿಲ್ಲದೆ ಆಧಾರ್ ಕಾರ್ಡ್ ಆಧರಿಸಿ ಸೌಲಭ್ಯಗಳನ್ನು ನೀಡುವಲ್ಲಿ ರಾಜ್ಯ ಸರ್ಕಾರ ಯಶಸ್ವಿಯಾಗಿದೆ ಎಂದರು. ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಕೋರಿ ಗೋಣಿಬಸಪ್ಪ ಮಾತನಾಡಿ, ಶಕ್ತಿ ಯೋಜನೆ ದಾಖಲೆ ನಿರ್ಮಿಸಿದೆ. ಸರ್ಕಾರ ನುಡಿದಂತೆ ನಡೆದಿದೆ ಎಂದು ತಿಳಿಸಿದರು.
ಪುರಸಭೆ ಸದಸ್ಯ ದೀಪಕ್‌ಸಾ ಕಠಾರೆ, ಮಾಜಿ ಸದಸ್ಯ ಮೃತ್ಯುಂಜಯ ಬದಾಮಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾ ಉಪಾಧ್ಯಕ್ಷ ಜಂದಿಸಾಬ್, ತಾಲೂಕು ಸದಸ್ಯರಾದ ಎಸ್.ಎ.ಸಂತೋಷ, ಗಿರೀಶ್ ತಂಬ್ರಹಳ್ಳಿ, ಗಿರಿರಾಜ್, ಪರಶುರಾಮ್, ರಾಘು, ರಾಮಣ್ಣ, ಪ್ರಮುಖರಾದ ಚಿತ್ರವಾಡ್ಗಿ ಪ್ರಕಾಶ, ಈ.ಕೆ.ಕೃಷ್ಣಮೂರ್ತಿ, ವಿಶ್ವಕರ್ಮ ಸಮಾಜದ ತಾಲೂಕು ಅಧ್ಯಕ್ಷ ಸಿದ್ದರಾಜು, ಡಿಶ್ ಮಂಜುನಾಥ, ಬಾಳಪ್ಪ, ಎಂ.ಪ್ರಕಾಶ್, ರುದ್ರೇಶ, ಸಾರಿಗೆ ಘಟಕದ ವ್ಯವಸ್ಥಾಪಕ ಜಡೇಶ, ಟ್ರಾಫಿಕ್ ಇನ್‌ಸ್ಪೆಕ್ಟರ್ ಸಂತೋಷನಾಯ್ಕ, ಅಧಿಕಾರಿ ಚಿದಾನಂದ ಇತರರಿದ್ದರು. ,