ಜಿಲ್ಲೆ

ಅಭಿವೃದ್ಧಿಗೆ ಮತ್ತೆ 36 ಕೋಟಿ!

ಬಸವರಾಜ ಇದ್ಲಿ ಹುಬ್ಬಳ್ಳಿ

ಸುಮಾರು 270 ಎಕರೆ ವಿಸ್ತೀರ್ಣ ಇರುವ ಬೃಹತ್ ಉಣಕಲ್ಲ ಕೆರೆ ಸುತ್ತ ಇನ್ಮುಂದೆ ವಾಕ್ ಮಾಡಬಹುದು. ಮನಮೋಹಕ ಹಸಿರು ಉದ್ಯಾನದಲ್ಲಿ ಸಂಚರಿಸಿ ಕೆರೆಯಲ್ಲಿ ಬೋಟಿಂಗ್ ಕೂಡ ಮಾಡಬಹುದು.

ಎಲ್ಲವೂ ಅಂದುಕೊಂಡಂತೆ ನಡೆದರೆ ಇನ್ನೊಂದು ವರ್ಷದಲ್ಲಿ ಈ ಎಲ್ಲ ಸವಲತ್ತುಗಳು ನಮ್ಮ ಅಚ್ಚುಮೆಚ್ಚಿನ ಕೆರೆ ಪ್ರದೇಶದಲ್ಲಿ ಲಭಿಸಲಿವೆ. ಹುಬ್ಬಳ್ಳಿ- ಧಾರವಾಡ ಸ್ಮಾರ್ಟ್ ಸಿಟಿ ಕಂಪನಿ ಲಿಮಿಟೆಡ್ ವತಿಯಿಂದ ಸುಮಾರು 51 ಕೋಟಿ ರೂ. ವೆಚ್ಚದಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳನ್ನು ಇಲ್ಲಿ ಕೈಗೊಳ್ಳಲಾಗಿದೆ.

ಮೊದಲ ಹಂತದಲ್ಲಿ 15 ಕೋಟಿ ರೂ. ಕೆರೆ ಸ್ವಚ್ಛತೆ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ. ಎರಡನೇ ಹಂತದಲ್ಲಿ ಸುಮಾರು 36 ಕೋಟಿ ರೂ. ವೆಚ್ಚದಲ್ಲಿ ಕೆರೆ ಪರಿಸರ ಅಭಿವೃದ್ಧಿಗೆ ಯೋಜನೆ ರೂಪಿಸಲಾಗಿದೆ. ಕೆಲವೇ ತಿಂಗಳಲ್ಲಿ ಈ ಕಾಮಗಾರಿಗಳು ಆರಂಭವಾಗಲಿವೆ. ಹಂತಹಂತವಾಗಿ ಒಂದೊಂದೇ ಸೌಲಭ್ಯಗಳನ್ನು ಜನರಿಗೆ ಒದಗಿಸುವ ಭರವಸೆ ನೀಡುತ್ತಾರೆ ಸ್ಮಾರ್ಟ್ ಸಿಟಿ ಕಂಪನಿ ಅಧಿಕಾರಿಗಳು.

ಹತ್ತು ಹಲವು ಸವಲತ್ತು: ಉಣಕಲ್ಲ ಜಲಾಶಯದ ಗೋಡೆ (ದಂಡೆ) ಸುಂದರಗೊಳಿಸಿ ಅದರ ಮೇಲೆ ವಾಕಿಂಗ್ ಪಾತ್ ಹಾಗೂ ಕೆರೆ ಸುತ್ತ ಸುಮಾರು 4.5 ಕಿ.ಮೀ. ಉದ್ದದ ಫುಟ್​ಪಾತ್ ನಿರ್ವಿುಸಲಾಗುತ್ತದೆ. ಕೆರೆಯನ್ನು ಸಂಪೂರ್ಣ ಸುತ್ತು ಹಾಕಿ ಸಂತಸಪಡಬೇಕು ಎನ್ನುವವರಿಗೆ, ವಾಯುವಿಹಾರಿಗಳಿಗೆ ಇದು ಅನುಕೂಲವಾಗಲಿದೆ. ಹುಬ್ಬಳ್ಳಿ- ಧಾರವಾಡ ರಸ್ತೆಗೆ ಹೊಂದಿಕೊಂಡು ಈಗಿರುವ ದಂಡೆ ಮೇಲಿನ ಉದ್ಯಾನವನ್ನು ಇನ್ನಷ್ಟು ಆಧುನಿಕ ಸೌಕರ್ಯಗಳೊಂದಿಗೆ ಅಭಿವೃದ್ಧಿಪಡಿಸಲಾಗುತ್ತದೆ. ವಿಶೇಷವಾಗಿ ಬಟರ್​ಫ್ಲೈ (ಚಿಟ್ಟೆ) ಗಾರ್ಡನ್ ನಿರ್ವಿುಸಲಾಗುತ್ತಿದೆ. ತರಹೇವಾರಿ ಹೂವಿನ ಗಿಡಗಳನ್ನು ಬೆಳೆಸುವುದರಿಂದ ಚಿಟ್ಟೆಗಳು ಆಕರ್ಷಣೆಗೊಂಡು ಇಲ್ಲಿಗೆ ಬರಲಿವೆ. ನೋಡುಗರಿಗೆ ಮುದ ನೀಡಲಿವೆ. ಕೆರೆ ಸುತ್ತ ಬೇಲಿ ನಿರ್ವಿುಸಲಾಗುತ್ತದೆ. ಇದರಿಂದ ಅನಧಿಕೃತ ಪ್ರವೇಶ ನಿರ್ಬಂಧಿಸಬಹುದು. ಕೆರೆ ಒತ್ತುವರಿಯೂ ನಿಲ್ಲಲಿದೆ. ಇನ್ನು, ಉದ್ಯಾನ ಪ್ರವೇಶ ದ್ವಾರದಲ್ಲಿ ಟಿಕೆಟ್ ಕೌಂಟರ್ ಸ್ಥಾಪಿಸಲಾಗುತ್ತದೆ. ಆಧುನಿಕ ಲೈಟಿಂಗ್ ವ್ಯವಸ್ಥೆ ಮಾಡಲಾಗುತ್ತದೆ. ಅಲ್ಲದೆ, ಸಂಗೀತ (ಸೌಂಡ್ ಸಿಸ್ಟ್ಂ), ಕಾರಂಜಿ ಅಳವಡಿಸಲಾಗುತ್ತಿದೆ.

ನಾಲ್ಕು ತಿಂಗಳಲ್ಲಿ ಬೋಟಿಂಗ್: ಕೆರೆ ಜಲಕಳೆ ಆವರಿಸಿದ ನಂತರ ಕೆಲ ವರ್ಷದಿಂದ ಬೋಟಿಂಗ್ ಬಂದ್ ಆಗಿದೆ. ಹುಬ್ಬಳ್ಳಿ- ಧಾರವಾಡ ಮಧ್ಯದ ಜನರಿಗೆ ಇದ್ದ ಏಕೈಕ ಜಲವಿಹಾರದ ಮಜಾ ಸಿಗದಂತಾಗಿದೆ. ಇದೀಗ ಸ್ಮಾರ್ಟ್ ಸಿಟಿ ಕಂಪನಿ ರೂಪಿಸಿರುವ ಕೆರೆ ಅಭಿವೃದ್ಧಿ ಯೋಜನೆಯಿಂದ ಈ ವರ್ಷದ ಜೂನ್ ವೇಳೆಗೆ ಮತ್ತೆ ಬೋಟಿಂಗ್ ಆರಂಭವಾಗಲಿದೆ. ಇದಕ್ಕೆ ಬೇಕಾದ ಎಲ್ಲ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹಿಂದೆಯೂ ಖರ್ಚು ಮಾಡಲಾಗಿತ್ತು: ಹತ್ತು ವರ್ಷದ ಹಿಂದೆ ಮುಖ್ಯಮಂತ್ರಿಯವರ 100 ಕೋಟಿ ಅನುದಾನದಲ್ಲಿ ಸುಮಾರು 7.5 ಕೋಟಿ ರೂ. ಖರ್ಚು ಮಾಡಿ ಉಣಕಲ್ಲ ಕೆರೆ ಉದ್ಯಾನ ಅಭಿವೃದ್ಧಿಪಡಿಸಲಾಗಿತ್ತು. ಇದರಲ್ಲಿ ಕೆರೆ ವೀಕ್ಷಣಾ ಗೋಪುರ, ಮಕ್ಕಳ ಆಟಿಕೆ, ಉದ್ಯಾನದಲ್ಲಿ ವಾಕಿಂಗ್ ಪಾತ್, ಗಿಡ- ಮರ ಬೆಳೆಸುವುದು, ಬಯಲು ರಂಗ ಮಂದಿರ, ಮನರಂಜನಾ ಬೋಟಿಂಗ್ ವ್ಯವಸ್ಥೆ ಮಾಡಲಾಗಿತ್ತು. ಇವುಗಳಲ್ಲಿ ಬಹುತೇಕ ಸೌಲಭ್ಯಗಳು ಈಗ ಶಿಥಿಲಾವಸ್ಥೆಗೆ ತಲುಪಿವೆ. ಉದ್ಯಾನಕ್ಕೆ ಸುತ್ತಲೂ ನಿರ್ವಿುಸಿದ್ದ ಗ್ರಿಲ್ ಕಾಂಪೌಂಡ್ ಒಂದಿಷ್ಟು ಉತ್ತಮವಾಗಿದೆ. ಶಿಥಿಲಗೊಂಡ ಈ ಸವಲತ್ತುಗಳನ್ನು ಸ್ಮಾರ್ಟ್ ಸಿಟಿ ಯೋಜನೆಯ ಮೂಲಕ ಪುನರುಜ್ಜೀವನ ಮಾಡಲಾಗುತ್ತಿದೆ.

ಗಣಪತಿ ವಿಸರ್ಜನೆಗೆ ವ್ಯವಸ್ಥೆ: ಉಳವಿ ಚನ್ನಬಸವೇಶ್ವರ ದೇವಸ್ಥಾನ ಬಳಿ ಗಣೇಶನ ಮೂರ್ತಿ ವಿಸರ್ಜನೆಗೆ ಅನುಕೂಲ ಕಲ್ಪಿಸಲಾಗುತ್ತಿದೆ. ಪ್ರತ್ಯೇಕ ಬಾವಿ ಮಾದರಿಯ ವ್ಯವಸ್ಥೆಯನ್ನು ನಾಲ್ಕು ಕಡೆ ಮಾಡಲಾಗುತ್ತಿದೆ. ಇದರಿಂದ ಕೆರೆ ಸ್ವಚ್ಛವಾಗಿ ಉಳಿಯಲಿದೆ. ದಂಡೆಯಲ್ಲೇ ಪೂಜೆ ಹಾಗೂ ವಿಸರ್ಜನೆ ಪ್ರಕ್ರಿಯೆ ನಡೆಯುವುದರಿಂದ ಪರಿಸರ ಮಾಲಿನ್ಯವನ್ನೂ ತಡೆಯಬಹುದು. ಅಲ್ಲದೆ, ಉದ್ಯಾನ ಬಳಿ ಶೌಚಗೃಹ, ಸ್ನಾನಗೃಹಗಳನ್ನು ಕಟ್ಟಲಾಗುತ್ತದೆ.

ಸಲಹಾ ಸಮಿತಿಯಲ್ಲಿ ಜನಪ್ರತಿನಿಧಿಗಳು: ಮೊದಲ ಹಂತದ ಕಾಮಗಾರಿ ಮುಗಿದ ನಂತರವೇ ಎರಡನೇ ಹಂತದ ಕಾಮಗಾರಿ ಆರಂಭಿಸಲು ಸ್ಮಾರ್ಟ್ ಸಿಟಿ ಸಲಹಾ ಸಮಿತಿ ಸೂಚಿಸಿದೆ. ಈ ಸಮಿತಿಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಸೇರಿ ಸ್ಥಳೀಯ ಜನಪ್ರತಿನಿಧಿಗಳು ಇದ್ದಾರೆ. ಎರಡನೇ ಹಂತದಲ್ಲಿ ಕೈಗೊಳ್ಳಲಾಗುವ ಕಾಮಗಾರಿಗಳ ವಿವರಣೆಯನ್ನು ಇವರಿಗೆ ನೀಡಲಾಗುವುದು. ಮಾರ್ಪಾಡು, ಸಲಹೆ ನೀಡಿದರೆ ಅವುಗಳನ್ನು ಅಳವಡಿಸಿಕೊಂಡು ಮುಂದಿನ ಕಾಮಗಾರಿ ಕೈಗೊಳ್ಳಲಾಗುವುದು ಎಂದು ಸ್ಮಾರ್ಟ್ ಸಿಟಿ ಕಂಪನಿ ವಿಶೇಷಾಧಿಕಾರಿ ಎಸ್.ಎಚ್. ನರೇಗಲ್ಲ ಹೇಳುತ್ತಾರೆ.