ಚಿಕ್ಕಮಗಳೂರು : ನಗರೋತ್ಥಾನದ ನಾಲ್ಕನೇ ಹಂತದ ಯೋಜನೆಗೆ ಸರ್ಕಾರದಿಂದ 40 ಕೋಟಿ ರೂ. ಅನುದಾನ ಮಂಜೂರಾಗಿ ಸಿವಿಲ್ ಕಾಮಗಾರಿಗೆ 15 ಕೋಟಿ ರೂ. ಮೀಸಲಿಟ್ಟಿದ್ದು ಡಿಸೆಂಬರ್ ಅಂತ್ಯದೊಳಗೆ ಕಾಮಗಾರಿ ಆರಂಭಿಸಲಾಗುವುದು ಎಂದು ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ಹೇಳಿದರು.
ಟಿಪ್ಪು ನಗರದಲ್ಲಿ ಭಾನುವಾರ ಮಳೆ ನೀರು ಕೊಯ್ಲು, ಚರಂಡಿ ನಿರ್ಮಾಣ ಇನ್ನಿತರ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ನಗರದಲ್ಲಿ ಅಮೃತ್ ಯೋಜನೆ, ಒಳಚರಂಡಿ ಅಭಿವೃದ್ಧಿ ಕಾಮಗಾರಿಗಳು ಪ್ರಗತಿಯಲ್ಲಿರುವುದರಿಂದ ಮತ್ತು ಮಳೆ ಕಾರಣ ಕೆಲವು ರಸ್ತೆಗಳು ಹಾಳಾಗಿವೆ. 2023ರ ಫೆಬ್ರವರಿ ಅಂತ್ಯದೊಳಗೆ ಬಹುತೇಕ ರಸ್ತೆಗಳ ಡಾಂಬರೀಕರಣ ಮಾಡಲಾಗುತ್ತದೆ. ರಸ್ತೆ, ಚರಂಡಿ, ಪಾರ್ಕ್, ಸಮುದಾಯ ಭವನ ಕಾಮಗಾರಿಯನ್ನು ಸೇರ್ಪಡೆ ಮಾಡಿ ಯೋಜನೆ ತಯಾರಿ ಹಂತದಲ್ಲಿದ್ದು ಜಿಲ್ಲಾಧಿಕಾರಿ ಒಂದು ತಿಂಗಳಲ್ಲಿ ಟೆಂಡರ್ ಕರೆದು ಕಾಮಗಾರಿ ನಡೆಸಲಾಗುತ್ತದೆ ಎಂದರು.
ಬೀದಿ ದೀಪಗಳು ಹಾಳಾಗಿವೆ. ನಗರದ 12 ಸಾವಿರ ಬೀದಿ ದೀಪಗಳನ್ನು ಬದಲಿಸಿ ಎಲ್ಇಡಿ ಬಲ್ಬ್ ಅಳವಡಿಸಲು ಜಿಲ್ಲಾಧಿಕಾರಿ ಸದ್ಯದಲ್ಲೇ ಅನುಮತಿ ನೀಡಲಿದ್ದಾರೆ ಎಂದು ತಿಳಿಸಿದರು. ಟಿಪ್ಪು ನಗರದಲ್ಲಿ ನಿರ್ಮಾಣ ಹಂತದಲ್ಲಿರುವ ಅಂಗನವಾಡಿ ಮತ್ತು ಅಕ್ಕಪಕ್ಕದ ಮನೆಗಳಿಗೆ ಮಳೆಗಾಲದಲ್ಲಿ ಯಾವುದೇ ತೊಂದರೆಯಾಗದಂತೆ 5 ಲಕ್ಷ ರೂ. ವೆಚ್ಚದಲ್ಲಿ ಮಳೆನೀರು ಕೊಯ್ಲು ಕಾಮಗಾರಿ ನಡೆಸಲಾಗುತ್ತಿದೆ ಎಂದು ಹೇಳಿದರು.