ಜಿಲ್ಲೆ

ಅಭಿವೃದ್ಧಿಗೆ ಆರ್ಯವೈಶ್ಯ ಸಮಾಜ ಮಾದರಿಯಾಗಲಿ



ಚಿತ್ರದುರ್ಗ: ಶಿಕ್ಷಣದೊಂದಿಗೆ ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬುವ ಕೆಲಸವೂ ಆಗಬೇಕಿದೆ ಎಂದು ತುಮಕೂರು ವಿಶ್ವವಿದ್ಯಾನಿಲಯದ ಉಪ ಕುಲಪತಿ ಡಾ.ಎಂ.ವೆಂಕಟೇಶ್ವರುಲು ಹೇಳಿದರು.

ಆರ್ಯವೈಶ್ಯ ಸಂಘ, ಆರ್ಯವೈಶ್ಯ ಸಹ ಸಂಸ್ಥೆಗಳ ಸಹಕಾರದೊಂದಿಗೆ, ಬೆಂಗಳೂರು ವಿಶ್ವ ವಾಸವಿ ಜಗದ್ಗುರು ಮಹಾಸಂಸ್ಥಾನಂ, ವಾಸವಿಪೀಠಂನ ಶ್ರೀ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಅವರ ಪೀಠಾರೋಹಣದ 2ನೇ ವಾರ್ಷಿಕೋತ್ಸವದ ಅಂಗವಾಗಿ ನಗರದಲ್ಲಿ ಭಾನುವಾರ ಆಯೋಜಿಸಿದ ಭಕ್ತಿಸಿಂಚನ ಸಮಾರೋಪದಲ್ಲಿ ಮಾತನಾಡಿದರು.

ಆರ್ಯವೈಶ್ಯ ಸಮುದಾಯ ವಿಶ್ವಕ್ಕೆ ಮಾದರಿಯಾಗಿದೆ. ನಮ್ಮ ಸಮುದಾಯಕ್ಕೆ ಗುರು ಸಿಕ್ಕಿದ್ದಾರೆ, ಗುರಿಯೂ ಇದೆ. ಹಾಗಾಗಿ ಗುರುವಿನ ಮಾರ್ಗದರ್ಶನೊಂದಿಗೆ ನಾವೆಲ್ಲರೂ ಗುರಿಯತ್ತ ಸಾಗೋಣ. ಒಂದು ಕಾಲದಲ್ಲಿ ನಮ್ಮ ಸಮುದಾಯ ವ್ಯಾಪಾರಕ್ಕೆ ಸೀಮಿತವಾಗಿತ್ತು. ಈಗ ನಮ್ಮ ಸಮುದಾಯಕ್ಕೆ ಲಕ್ಷ್ಮಿಯೊಂದಿಗೆ ಸರಸ್ವತಿಯ ಆರ್ಶೀವಾದವೂ ಇದ್ದು, ನಮ್ಮ ಈ ಸಮಾಜ ಮಾದರಿಯಾಗಿ ಅಭಿವೃದ್ಧಿ ಹೊಂದಬೇಕಿದೆ ಎಂದು ಹೇಳಿದರು.

ದಾನ ನಮ್ಮ ಹಿರಿಮೆ. ಶಿಕ್ಷಣ, ವ್ಯವಹಾರ, ಕೈಗಾರಿಕೆ ಸೇರಿ ಅನೇಕ ಕ್ಷೇತ್ರಗಳಲ್ಲಿ ಸಮುದಾಯದ ಜನರು ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದಾರೆ. ಸನಾತನ ಹಿಂದು ಧರ್ಮದ ಪ್ರಚಾರಕ್ಕಾಗಿ ಶ್ರೀಗಳನ್ನು ಹಾರ್ಡ್‌ವರ್ಡ್ ವಿಶ್ವವಿದ್ಯಾನಿಲಯ ಆಹ್ವಾನಿಸಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ವಿಚಾರವಾಗಿದೆ ಎಂದರು.

ಕುಡಾ ಮಾಜಿ ಅಧ್ಯಕ್ಷ ಟಿ.ಬದ್ರಿನಾಥ್ ಮಾತನಾಡಿ, ಜನಸಂಖ್ಯೆಯಲ್ಲಿ ಕಡಿಮೆಯಿದ್ದರೂ ಸಮುದಾಯದವರು ಇಡೀ ವಿಶ್ವದಲ್ಲಿದ್ದಾರೆ. ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡು ಕೊಡುಗೈ ದಾನಿಗಳೆನಿಸಿಕೊಂಡಿದ್ದಾರೆ ಎಂದು ಹೇಳಿದರು.

ಸಾನ್ನಿಧ್ಯ ವಹಿಸಿದ್ದ ಶ್ರೀ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಮಾತನಾಡಿ, ಜಗತ್ತಿನ ಪ್ರಮುಖ ವಿಶ್ವವಿದ್ಯಾನಿಲಯಗಳಲ್ಲಿ ಭಗವದ್ಗೀತೆಯ ಅಧ್ಯಯನವಾಗುತ್ತಿದೆ. ಆದರೆ, ನಮ್ಮ ದೇಶದ ಯಾವುದೇ ವಿಶ್ವವಿದ್ಯಾನಿಲಯಗಳಲ್ಲೂ ಈ ಕಾರ್ಯ ಆಗದಿರುವುದು ನೋವಿನ ಸಂಗತಿಯಾಗಿದೆ ಎಂದರು.

ವಾಸವಿ ವಿದ್ಯಾನಿಕೇತನ ಟ್ರಸ್ಟ್ ಅಧ್ಯಕ್ಷ ಬೆಂಗಳೂರಿನ ಮಾನಂದಿ ಸುರೇಶ್ ಮಾತನಾಡಿದರು. ಆರ್ಯವೈಶ್ಯ ಸಂಘದ ಅಧ್ಯಕ್ಷ ಎಲ್.ಇ.ಶ್ರೀನಿವಾಸ ಬಾಬು ಅಧ್ಯಕ್ಷತೆ ವಹಿಸಿದ್ದರು.
ಟಿ.ಆರ್.ಅಶ್ವಥ್ ನಾರಾಯಣಶೆಟ್ಟಿ, ಎಸ್.ಎನ್.ಕಾಶಿವಿಶ್ವನಾಥ ಶೆಟ್ಟಿ, ಎಚ್.ಕೊಟ್ರೇಶ್ ಶೆಟ್ಟಿ, ಎಲ್.ಆರ್.ವೆಂಕಟೇಶ್‌ಕುಮಾರ್, ಎ.ಎನ್.ಚಿದಾನಂದ್, ಎಸ್.ನಾಗರಾಜ್, ಡಿ.ಪಿ.ವಿನಯ್‌ಪ್ರಸಾದ್ ಇತರರಿದ್ದರು.