ಶ್ರೀನಿವಾಸಪುರ: ಸಂವಿಧಾನವನ್ನು ಹೊರತುಪಡಿಸಿ ನಾನು ಯಾರಿಗೂ ತಲೆಬಾಗುವವನಲ್ಲ. ನನಗೆ ಉಳಿದಿರುವುದು ಕಾಶಿಯಾತ್ರೆ ಮಾತ್ರ. 40 ವರ್ಷ ನನ್ನನ್ನು ಸಾಕಿ ಬೆಳೆಸಿದ ಕ್ಷೇತ್ರದ ಜನರ ಋಣ ತೀರಿಸುವವರೆಗೆ ವಿಶ್ರಮಿಸಲಾರೆ. ಗ್ರಾಮಗಳ ಅಭಿವೃದ್ಧಿ ಕಾರ್ಯಗಳಿಗೆ ಯಾರ ಅಪ್ಪಣೆ ಬೇಕಾಗಿಲ್ಲ. ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಿಪಡಿಸಿದರೆ ಸುಮ್ಮನೆ ಕೂರುವವನು ನಾನಲ್ಲ ಎಂದು ಮಾಜಿ ಸ್ಪೀಕರ್, ಶಾಸಕ ಕೆ.ಆರ್.ರಮೇಶ್ ಕುಮಾರ್ ಮುಖಂಡರಿಗೆ ಖಡಕ್ ಎಚ್ಚರಿಕೆ ನೀಡಿದರು.
ಹೊಗಳಗೆರೆ ಮಾವು ಅಭಿವೃದ್ಧಿ ಕೇಂದ್ರದಲ್ಲಿ ಗುರುವಾರ ಕರೆದಿದ್ದ ಅಧಿಕಾರಿಗಳ ಪ್ರಗತಿಪರಿಶೀಲನೆ ಸಭೆಯಲ್ಲಿ ಗ್ರಾಮಗಳಲ್ಲಿ ವಿವಿಧ ಸಮುದಾಯಗಳಿಗೆ ಮಂಜೂರಾಗಿರುವ ಸಮುದಾಯ ಭವನದ ಕಾಮಗಾರಿ ಪ್ರಗತಿ ಬಗ್ಗೆ ಮಾಹಿತಿ ಪಡೆಯುವ ವೇಳೆ ಅಧಿಕಾರಿಗಳು ಕೆಲವು ಗ್ರಾಮಗಳಲ್ಲಿ ಭವನ ನಿರ್ಮಾಣಕ್ಕೆ ಮುಖಂಡರು ಅಡ್ಡಿಪಡಿಸುತ್ತಿದ್ದಾರೆ ಎಂದಾಗ ಕೆಂಡಾಮಂಡಲರಾದ ರಮೇಶ್‌ಕುಮಾರ್, ಇಷ್ಟು ವರ್ಷ ತಳ ಸಮುದಾಯದವರನ್ನು ತುಳಿದಿದ್ದು ಸಾಕಾಗಲಿಲ್ಲವಾ? ಅವರು ಒಂದು ಕಡೆ ಕುಳಿತು ಮದುವೆ-ಮುಂಜಿ ಮಾಡಿಕೊಳ್ಳಲು ಅನುಕೂಲವಾಗಲಿ ಎಂದು ಆಯಾ ಜಾತಿಗೆ ಅನುಗುಣವಾಗಿ ಭವನಗಳನ್ನು ಪ್ರತಿ ಗ್ರಾಮಕ್ಕೆ ಮಂಜೂರು ಮಾಡಿಸಿದ್ದೇನೆ. ಕಾಮಗಾರಿಗಳಿಗೆ ಅಡ್ಡಿಪಡಿಸಿದರೆ ಸುಮ್ಮನೆ ಇರುವುದಿಲ್ಲ. ಇದನ್ನೆ ಬಳಸಿಕೊಂಡು ಅಧಿಕಾರಿಗಳಾಗಿ ಕಾಲಹರಣ ಮಾಡಲು ಬಿಡುವುದಿಲ್ಲ. ಸೋಮವಾರದಿಂದ ಎಲ್ಲ ಕಾಮಗಾರಿ ಪ್ರಾರಂಭಗೊಳ್ಳಬೇಕು, ಇಲ್ಲದಿದ್ದಲ್ಲಿ ಅಧಿಕಾರಿಗಳನ್ನು ಅಮಾನತುಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಭವನ ನಿರ್ಮಾಣಕ್ಕೆ ಸರ್ಕಾರಿ ಜಾಗ ಗುರುತಿಸಲು ವಿಳಂಬ ಮಾಡಿರುವ ಪಿಡಿಒಗಳಿಗೆ ಚಾಟಿ ಬೀಸಿದ ಮಾಜಿ ಸ್ಪೀಕರ್, ಸಮುದಾಯ ಭವನ ಮಂಜೂರಾಗಿರುವುದು ಅಂಬೇಡ್ಕರ್ ಹೆಸರಲ್ಲಿ. ಮೋಸ ಮಾಡಿದ್ರೆ ಅಂಬೇಡ್ಕರ್‌ಗೆ ಮೋಸ ಮಾಡಿದಂತಾಗುತ್ತದೆ. ನೀವು ಆ ಸಮುದಾಯದಲ್ಲಿ ಹುಟ್ಟಿದ್ರೆ ನಿಮಗೆ ಕಷ್ಟ ಗೊತ್ತಾಗುತ್ತದೆ ಎಂದು ತರಾಟೆಗೆ ತೆಗೆದುಕೊಂಡರು.
ತಾಲೂಕಿನ ವಸತಿ ನಿಲಯಗಳ ಬಗ್ಗೆ ಮುಖ್ಯಸ್ಥರಿಂದ ಮಾಹಿತಿ ಪಡೆಯುವ ವೇಳೆ ಕೆಲ ವಸತಿ ಶಾಲೆಗಳಲ್ಲಿ ಮಕ್ಕಳಿಗೆ ಕಾಟ್, ಬೆಡ್, ಕುಡಿಯುವ ನೀರಿನ ಸೌಲಭ್ಯಗಳ ಕೊರತೆ ಇದೆ ಎಂದು ತಿಳಿಸಿದಾಗ ಅಗತ್ಯವಿರುವ ಮೂಲ ಸೌಲಭ್ಯಗಳ ಬಗ್ಗೆ ಪಟ್ಟಿ ಪಡೆದ ಮಾಜಿ ಸ್ಪೀಕರ್. ವಸತಿ ಶಾಲೆಗಳು ಮಂಜೂರಾದಾಗ ಎಲ್ಲ ಸೌಲಭ್ಯ ಒದಗಿಸಲು ಹಣ ಬಿಡುಗಡೆಯಾಗಿರುತ್ತದೆ. ಆದರೆ ಆ ಹಣವನ್ನು ನುಂಗಿ ನೀರು ಕುಡಿದಿರುತ್ತಾರೆ. ಬಡ ಮಕ್ಕಳು ವಾಸಿಸುವ ವಸತಿ ನಿಲಯಗಳ ಹಣ ಸಹ ಲಪಟಾಯಿಸುತ್ತಾರೆ ಎಂದು ಜನಪ್ರತಿನಿಧಿಗಳ ವಿರುದ್ಧ ಕಿಡಿಕಾರಿ, ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಸೌಲಭ್ಯ ಕಲ್ಪಸುವುದಾಗಿ ಭರವಸೆ ನೀಡಿದರು.
ಅಪರ ಜಿಲ್ಲಾಧಿಕಾರಿ ಪುಷ್ಪಲತಾ, ಉಪವಿಭಾಗಾಧಿಕಾರಿ ಸೋಮಶೇಖರ್, ಕೋಲಾರ ತಹಸೀಲ್ದಾರ್ ಶೋಭಿತಾ, ಇಒ ಎಸ್. ಆನಂದ್, ಎಇಇ ಅಪ್ಪಿರೆಡ್ಡಿ, ಶ್ರೀನಿವಾಸಮೂರ್ತಿ, ಜಿಪಂ ಸದಸ್ಯ ಗೋವಿಂದಸ್ವಾಮಿ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ದಿಂಬಾಲ ಅಶೋಕ್, ತಾಪಂ ಅಧ್ಯಕ್ಷ ನರೇಶ್, ರಾಯಲ್ಪಾಡು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂಜಯ್‌ರೆಡ್ಡಿ ಉಪಸ್ಥಿತರಿದ್ದರು.
ಹಣ ಬಿಡುಗಡೆಗೆ ಸಿದ್ಧ: ಶ್ರೀನಿವಾಸಪುರ ಕ್ಷೇತ್ರದ ಎಲ್ಲ ಪಿಡಿಒಗಳು ಗ್ರಾಮಗಳಲ್ಲಿ ಅಗತ್ಯವಿರುವ ಚರಂಡಿಗಳ ಮಾಹಿತಿ ಪಡೆದು ಗ್ರಾಪಂ ಚುನಾವಣೆಯೊಳಗೆ ಸಿಸಿ ಚರಂಡಿ ನಿರ್ಮಿಸಬೇಕು. ಎನ್‌ಆರ್‌ಇಜಿ, ಪಿಡಬ್ಲ್ಯುಡಿ, ಎಸ್‌ಸಿಪಿ ಮತ್ತು 14ನೇ ಹಣಕಾಸು ಯೋಜನೆ ಹಾಗೂ ನನ್ನ ಅನುದಾನ ಸೇರಿ ಅನುಮೋದನೆ ಪಟ್ಟಿ ತಯಾರಿಸಿ , ಅದಕ್ಕೆ ತಗಲುವ ಹಣ ಬಿಡುಗಡೆಗೊಳಿಸಲಾಗುವುದು ಎಂದು ರಮೇಶ್‌ಕುಮಾರ್ ಹೇಳಿದರು.