Oplus_131072 
ಜಿಲ್ಲೆ

ಅಭಿವೃದ್ಧಿಗೆ ಅನುದಾನ ಕೊರತೆ

ಹೂವಿನಹಡಗಲಿ: ಜಗತ್ತಿನ ವಿಜ್ಞಾನ ಮತ್ತು ತಂತ್ರಜ್ಞಾನದ ಬೆಳವಣಿಗೆಯಲ್ಲಿ ಗುರುಗಳ ಪಾತ್ರ ಮುಖ್ಯವಾಗಿದೆ ಎಂದು ಶಾಸಕ ಕೃಷ್ಣನಾಯ್ಕ ಹೇಳಿದರು.

ಪಟ್ಟಣದ ಪಂಚಮಸಾಲಿ ಸಮುದಾಯ ಭವನದಲ್ಲಿ ಶಾಲಾ ಶಿಕ್ಷಣ ಇಲಾಖೆಯಿಂದ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಂಗಳವಾರ ಮಾತನಾಡಿದರು. ಇಂಗ್ಲಿಷ್ ಕಲಿಕೆ ಸುಲಭವಾಗಲು ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳಲ್ಲಿ 5ರಿಂದ 10 ನೇ ತರಗತಿಯವರೆಗೆ ಕಂಪ್ಯೂಟರ್ ಶಿಕ್ಷಣ ಬೋಧಿಸಲು ಸೌಲಭ್ಯಗಳನ್ನು ಕಲ್ಪಿಸಲಾಗಿದೆ ಎಂದರು.

ನಾನು ಕ್ಷೇತ್ರ ಅಭಿವೃದ್ಧಿಗೆ ಅನೇಕ ಯೋಜನೆಗಳನ್ನು ಹಾಕಿಕೊಂಡಿದ್ದು, ವಿರೋಧ ಪಕ್ಷದಲ್ಲಿರುವುದರಿಂದ ಅನುದಾನದ ಕೊರತೆ ಕಾಡುತ್ತಿದೆ. ಲಭ್ಯ ಅನುದಾನವನ್ನು ವ್ಯರ್ಥ ಮಾಡದೆ ತಾಲೂಕಿನ ಶಾಲೆಗಳ ದುರಸ್ತಿ ಹಾಗೂ ನೂತನ ಕಟ್ಟಡಗಳ ನಿರ್ಮಾಣವನ್ನು ನಿರಂತರವಾಗಿ ಮಾಡುತ್ತಿರುವೆ. ಪಟ್ಟಣದಲ್ಲಿ ಗುರುಭವನ ನಿರ್ಮಾಣ ಮಾಡಲು 30 ಲಕ್ಷ ರೂ. ನೀಡುವೆ. ಇನ್ನೂ 15 ದಿನಗಳಲ್ಲಿ ಗುರುಭವನ ನಿರ್ಮಾಣ ಕಾಮಗಾರಿ ಆರಂಭಿಸಲಾಗುವುದು ಎಂದರು.

ಬಿಇಒ ಮಹೇಶ್ ಪೂಜಾರ್ ಮಾತನಾಡಿ, ಗುರುವಿನ ಸ್ಥಾನಕ್ಕೆ ಗೌರವ ಸಿಗಬೇಕಾದರೆ ಕರ್ತವ್ಯದಲ್ಲಿ ಯಶಸ್ವಿಯಾಗಬೇಕು. ಗುಣಮಟ್ಟದ ಶಿಕ್ಷಣ ನೀಡಲು ಎಲ್ಲರೂ ಮುಂದಾಗಬೇಕು. ಶಾಲಾ ಮಕ್ಕಳಿಗೆ ನೈತಿಕ ಶಿಕ್ಷಣ, ಸಮಯದ ಸದ್ಬಳಕೆ ಕುರಿತಾಗಿ ಅರಿವು ಮೂಡಿಸಬೇಕಾಗಿದೆ ಎಂದರು.

ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ, ತಹಸೀಲ್ದಾರ್ ಸಂತೋಷ್ ಕುಮಾರ್, ತಾಪಂ ಇಒ ಪರಮೇಶ್ವರಪ್ಪ, ಪುರಸಭೆ ಅಧ್ಯಕ್ಷೆ ಜಮಾಲ್‌ಬಿ, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಕೊಟ್ರಗೌಡ, ಪ್ರೌಢಶಾಲೆ ಮುಖ್ಯಗುರುಗಳ ಸಂಘದ ತಾಲೂಕು ಅಧ್ಯಕ್ಷ ಕಾಂತೇಶ್, ಸಹಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಶಿವಲಿಂಗಪ್ಪ, ಕ್ಷೇತ್ರ ಸಮನ್ವಯಾಧಿಕಾರಿ ಕೋಟೆಪ್ಪ, ಅಕ್ಷರ ದಾಸೋಹ ಯೋಜನೆ ಸಹಾಯಕ ನಿರ್ದೇಶಕ ವಿ.ಹನುಮಂತಪ್ಪ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಜಗದೀಶ ಇತರರಿದ್ದರು.