ಹೊಸಕೋಟೆ: ನಮ್ಮ ವಾರ್ಡ್ ನಗರಸಭೆ ವ್ಯಾಪ್ತಿಯಲ್ಲಿ ಇದೆಯೋ ಅಥವಾ ಪಂಚಾಯಿತಿ ವ್ಯಾಪ್ತಿಗೆ ಸೇರಿದೆಯೋ ಎಂಬ ಅನುಮಾನ ಮೂಡುತ್ತಿದೆ. ವಾರ್ಡ್‌ನಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ಆಗುತ್ತಿಲ್ಲ. ಅಭಿವೃದ್ಧಿ ಮಾಡಲು ಆಗದಿದ್ದರೆ ನಿಮಗೆ ಏಕೆ ಬೇಕು ಅಧಿಕಾರ ಎಂದು ಜನರು ಪ್ರಶ್ನಿಸುತ್ತಿದ್ದಾರೆ. ಯಾವ ನಾಯಕರೇ ಭೂಮಿಪೂಜೆ ಮಾಡಿದರೂ ಸರಿಯೇ ವಾರ್ಡ್ ಅಭಿವೃದ್ಧಿಯಾದರೆ ಸಾಕು ಎಂದು ಆಡಳಿತರೂಢ ಪಕ್ಷದ ಸದಸ್ಯರು ಆಕ್ರೋಶ ನಗರಸಭೆ ಸಾಕ್ಷಿಯಾಯಿತು.
ನಗರಸಭೆ ಆವರಣದಲ್ಲಿ ಗುರುವಾರ ಏರ್ಪಡಿಸಿದ್ದ ಸರ್ವ ಸದಸ್ಯರ ವಿಶೇಷ ಸಭೆಯಲ್ಲಿ ಆಡಳಿತಪಕ್ಷದ ಸದಸ್ಯರು ಒಕ್ಕೂರಲಲ್ಲಿ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದರು. ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಗಾಲು ಆಗಿರುವುದಾಗಿ ಆರೋಪಿಸಿದರು. ಅಲ್ಲದೆ, ಅಭಿವೃದ್ಧಿ ಕಾರ್ಯಗಳಿಗೆ ಆದ್ಯತೆ ನೀಡುವಂತೆ ಅಧ್ಯಕ್ಷರು ಮತ್ತು ಅಧಿಕಾರಿಗಳನ್ನು ಆಗ್ರಹಿಸಿದರು.
ವಿಶೇಷ ಸಭೆ ಏಕೆ?: ಪ್ರತಿ ತಿಂಗಳು ಸರ್ವ ಸದಸ್ಯರ ಸಭೆ ಕರೆಯುವಂತೆ ಕಳೆದ ಸಭೆಯಲ್ಲಿ ಮನವಿ ಮಾಡಲಾಗಿತ್ತು. ಆದರೆ, ಮೂರು ತಿಂಗಳಿಂದಲೂ ಸಭೆ ಕರೆಯದೆ, ವಿಶೇಷ ಸಭೆ ನಡೆಲಾಗುತ್ತಿದೆ. ಕಳೆದ ಸಭೆಯ ನಡಾವಳಿಗಳ ಅನುಮೋದನೆ ಬಗ್ಗೆ ಯಾವ ಸದಸ್ಯರಿಗೂ ಮಾಹಿತಿ ಇಲ್ಲ. ಅಭಿವೃದ್ಧಿ ಕಾಮಗಾರಿಗಳಿಗೆ ಹಣ ಬಿಡುಗಡೆ ಮಾಡಲು ಅನುಮೋದನೆ ಪಡೆಯುವ ಕಾರ್ಯಸೂಚಿಯ ಇಂಥ ವಿಶೇಷ ಸಭೆಗಳನ್ನು ಏರ್ಪಡಿಸುವುದು ಎಷ್ಟು ಸೂಕ್ತ ಎಂದು ಪ್ರತಿಪಕ್ಷ ನಾಯಕ ಕೇಶವಮೂರ್ತಿ ಪ್ರಶ್ನಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ನಗರಸಭೆ ಅಧ್ಯಕ್ಷ ಅರುಣ್‌ಕುಮಾರ್, ನಗರದಲ್ಲಿ ಅಭಿವೃದ್ಧಿ ಕಾಮಗಾರಿಗಳು ನಿಲ್ಲಬಾರದು ಎಂಬ ಕಾರಣಕ್ಕೆ ವಿಶೇಷ ಸಭೆ ಕರೆಯಲಾಗಿದೆ. ಕಳೆದ ಸಭೆಯ ನಡಾವಳಿಗಳ ಅನುಮೋದನೆಗಳ ಬಗ್ಗೆ ಮುಂದಿನ ಸಭೆಯಲ್ಲಿ ಮಾಹಿತಿ ನೀಡಲಾಗುವುದು ಎಂದು ಸ್ಪಷ್ಟಪಡಿಸಿದರು.
ಉಪಾಧ್ಯಕ್ಷೆ ಶೋಭಾ, ಸ್ಥಾಯಿ ಸಮಿತಿ ಅಧ್ಯಕ್ಷ ಸೋಮಶೇಖರ್, ಎಇಇ ರಾಮೇಗೌಡ, ಜೆಇ ಗೌತಮ್ ಮತ್ತಿತರರಿದ್ದರು.
ಧಾರ್ಮಿಕ ಭಾವನೆಗಳಿಗೆ ಧಕ್ಕೆ: ನಗರದ ಕೆ.ಆರ್. ರಸ್ತೆ ಅಭಿವೃದ್ಧಿ ಕಾಮಗಾರಿ ವೇಳೆ ಚರಂಡಿ ನಿರ್ಮಾಣಕ್ಕಾಗಿ ಅಶ್ವತ್ಥಕಟ್ಟೆ ಒಡೆಯಲಾಗಿದೆ. ಕಟ್ಟೆಯನ್ನು ಒಡೆಯುವ ಅವಶ್ಯಕತೆ ಬಂದಲ್ಲಿ, ಧಾರ್ಮಿಕ ವಿಧಿವಿಧಾನ ಪಾಲಿಸಿ ಒಡೆಯುವುದು ಸಾಮಾನ್ಯ. ಆದರೆ, ಇದಾವುದನ್ನೂ ಪಾಲಿಸದೆ ಕಟ್ಟೆಯನ್ನು ಒಡೆದು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರಲಾಗಿದೆ ಎಂದು ನಗರಸಭೆ ಸದಸ್ಯ ಗುಳ್ಳು ಎನ್. ನಾಗರಾಜ್ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಪಕ್ಷ ನಾಯಕ ಕೇಶವಮೂರ್ತಿ ಕೂಡ ಇದಕ್ಕೆ ಧ್ವನಿಗೂಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ನಗರಸಭೆ ಅಧ್ಯಕ್ಷ ಅರುಣ್‌ಕುಮಾರ್, ಅಚಾತುರ್ಯದಿಂದ ಇಂಥ ಸಮಸ್ಯೆ ಉಂಟಾಗಿದೆ. ಇದು ನನ್ನ ಗಮನಕ್ಕೂ ಬಂದಿದೆ. ಶುಕ್ರವಾರ (ಅ.8) ಅಶ್ವತ್ಥಕಟ್ಟೆಗೆ ಪೂಜೆ ಸಲ್ಲಿಸಿ, ಕಟ್ಟೆ ನಿರ್ಮಿಸಲಾಗುವುದು ಎಂದು ಹೇಳಿದರು.