ಜಿಲ್ಲೆ

ಅಭಿವೃದ್ಧಿಗೆ ಅಕ್ಷರ ಜ್ಞಾನವೇ ಮೂಲ

ನಮ್ಮ ಶಾಲೆ- ನಮ್ಮ ಜವಾಬ್ದಾರಿ ಕಾರ್ಯಕ್ರಮದಲ್ಲಿ ಶಾಸಕ ಕೆ.ಷಡಕ್ಷರಿ ಅಭಿಮತ

ತಿಪಟೂರು: ಶಿಕ್ಷಣ ಕುರುಡರಿಗೆ ಕಣ್ಣು ಕೊಟ್ಟಂತೆ, ಅಕ್ಷರ ಜ್ಞಾನವಿಲ್ಲದೇ ಅಭಿವೃದ್ಧಿ ಸಾಧ್ಯವಿಲ್ಲ ಎಂದು ಶಾಸಕ ಕೆ.ಷಡಕ್ಷರಿ ಹೇಳಿದರು. ನಗರದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಶನಿವಾರ ಜಿಪಂ ಶಾಲಾ ಶಿಕ್ಷಣ ಇಲಾಖೆ ಮತ್ತು ತಾಪಂ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ನಮ್ಮ ಶಾಲೆ- ನಮ್ಮ ಜವಾಬ್ದಾರಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಹಿಂದಿನ ಶಾಲಾ ದಿನಗಳ ಪರಿಸ್ಥಿತಿ ಈಗ ಬದಲಾಗಿದೆ. ಶಿಕ್ಷಣ ಈಗ ಸರಳವಾಗಿದೆ. ಆದರೂ ಸರ್ಕಾರಿ ಶಾಲಾ, ಕಾಲೇಜುಗಳನ್ನು ಮುಚ್ಚುವ ಪರಿಸ್ಥಿತಿ ನಿಮಾರ್ಣವಾಗಿರುವುದು ಶೋಚನೀಯ. ಈ ನಿಟ್ಟಿನಲ್ಲಿ ಶಿಕ್ಷಣ ಸಚಿವರು ನಮ್ಮ ಶಾಲೆ, ನಮ್ಮ ಜವಾಬ್ದಾರಿ ಎಂಬ ಮಹತ್ವಾಂಕಾಂಕ್ಷಿ ಯೋಜನೆ ಪ್ರಾರಂಭಿಸುವ ಮೂಲಕ ಸರ್ಕಾರಿ ಶಾಲೆಗಳ ಉಳಿವಿಗಾಗಿ ಗ್ರಾಮೀಣ ಮಕ್ಕಳನ್ನು ಸರ್ಕಾರಿ ಶಾಲೆಗೆ ದಾಖಲಿಸಲು ಪ್ರೇರೇಪಿಸು ಯೋಜನೆ ಹಮ್ಮಿಕೊಂಡಿದ್ದಾರೆ. ಇದಕ್ಕಾಗಿ ಬಿಆರ್​ಸಿ, ಸಿಆರ್​ಪಿಗಳನ್ನು ನೆಚ್ಚಿಕೊಳ್ಳದೇ ಪ್ರತಿ ಗ್ರಾಮಗಳಲ್ಲಿ ಗ್ರಾಮಸಭೆ ಏರ್ಪಡಿಸಿ ಶಾಲಾ ಎಸ್​ಡಿಎಂಸಿ ಸದಸ್ಯರು, ಶಾಲಾ ಶಿಕ್ಷಕರು ಮತ್ತು ಪಾಲಕರಲ್ಲಿ ಸರ್ಕಾರಿ ಶಾಲೆಗಳಲ್ಲಿ ಸಿಗುತ್ತಿರುವ ಸೌಲಭ್ಯಗಳ ಕುರಿತು ಮನದಟ್ಟು ಮಾಡಿ ಅವರ ಮಕ್ಕಳನ್ನು ಸರ್ಕಾರಿ ಶಾಲೆಗೆ ದಾಖಲಿಸುವಂತೆ ಮಾಡುವ ಕೆಲಸ ಮಾಡಬೇಕು ಎಂದರು.

ಪ್ರತಿ ಶಿಕ್ಷಕರು ಕನಿಷ್ಠ 10 ಮಕ್ಕಳನ್ನು ಸರ್ಕಾರಿ ಸಾಲೆಗೆ ದಾಖಲಿಸುವ ಇಚ್ಛಾಶಕ್ತಿ ಪ್ರದರ್ಶಿಸಿದರೆ ನಿಜಕ್ಕೂ ಯೋಜನೆ ಸಫಲವಾಗುವ ಜತೆಗೆ ಸರ್ಕಾರಿ ಶಾಲೆಗಳಿಗೆ ಅಂಟಿರುವ ಕಳಂಕ ದೂರವಾಗುತ್ತೆ. ನಿಮಗೆ ಸಿಕ್ಕಿರುವ ಶಿಕ್ಷಕ ವೃತ್ತಿಗೆ ಗೌರವ ಕೊಡಿ. ನಿಮ್ಮ ಶಾಲಾ ಆವರಣವನ್ನು ಸ್ವಚ್ಛವಾಗಿಟ್ಟುಕೊಳ್ಳಿ ಎಂದು ಸಲಹೆ ನೀಡಿದರು.

ಪ್ರಾಂಶುಪಾಲ ಎಂ.ಡಿ.ಶಿವಕುಮಾರ್​ ಮಾತನಾಡಿ, ಸರ್ಕಾರಿ ಶಾಲಾ, ಕಾಲೇಜುಗಳಲ್ಲಿ ಅತ್ಯುನ್ನತವಾದ ಮೂಲ ಸೌಲಭ್ಯಗಳಿವೆ. ಸಿಇಟಿ ಮತ್ತು ನೀಟ್​ಗಿಂತ ಸರ್ಕಾರಿ ಶಾಲೆಗಳಲ್ಲಿ ಜೀವನಕ್ಕೆ ಅಗತ್ಯವಿರುವ ಪಾಠ ಕಲಿಸಲಾಗುತ್ತೆ. ಸರ್ಕಾರಿ ಶಾಲೆ ಸುಸಂಸತಿ, ಸಭ್ಯತೆ ಕಲಿಸುತ್ತೆ. ಸರ್ಕಾರಿ ಶಾಲಾ ಕೊಠಡಿಗಳು ಯಾವುದೇ ಹೈಟೆಕ್​ ಕೊಠಡಿಗಳಿಗೆ ಕಮ್ಮಿ ಇಲ್ಲ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಚಂದ್ರಯ್ಯ ಮಾತನಾಡಿ, ಮೇ 29ರಿಂದ ಶಾಲೆಗಳು ಪ್ರಾರಂಭವಾಗಲಿವೆ. ಸರ್ಕಾರ ಶಾಲೆಗಳಿಗೆ ಎಲ್ಲವನ್ನೂ ಕೊಟ್ಟಿದೆ. ಆದರೆ ಇದು ನಮ್ಮ ಶಾಲೆ ಎಂಬ ಭಾವನೆ ಎಲ್ಲರಲ್ಲೂ ಮೂಡಿದಾಗ ಮಾತ್ರ ಯೋಜನೆ ಸಾರ್ಥಕವಾಗುತ್ತೆ. ತಾಲೂಕಿನ 272 ಸರ್ಕಾರಿ ಶಾಲೆಗಳ ಪೈಕಿ 11ಕ್ಕಿಂತ ಕಡಿಮೆ ಮಕ್ಕಳಿರುವ ಶಾಲೆಗಳು 40&-50. ಇಂತಹ ಶಾಲೆಗಳಿಗೆ ಅನಿವಾರ್ಯವಾಗಿ ಏಕ ಶಿಕ್ಷಕರನ್ನು ನೇಮಿಸಲಾಗುತ್ತೆ. 11 ಕ್ಕಿಂತ ಹೆಚ್ಚು ಮಕ್ಕಳಿರುವ ಶಾಲೆಗಳಿಗೆ ಇಬ್ಬರು ಶಿಕ್ಷಕರಿರುತ್ತಾರೆ. ಸರ್ಕಾರಿ ಶಾಲೆಗಳ ಸೌಲಭ್ಯದ ಚಿತ್ರಣವನ್ನು ಶಿಕ್ಷಕರು ಮತ್ತು ಎಸ್​ಡಿಎಂಸಿ ಸದಸ್ಯರು

ಪಾಲಕರಿಗೆ ಮನವರಿಕೆ ಮಾಡಬೇಕು ಎಂದರು.

ಕೆಲವು ಶಾಲೆಗಳಲ್ಲಿ ಶಿಕ್ಷಕರು ಸ್ವಚ್ಛತೆಗೆ ಮಹತ್ವ ನೀಡುತ್ತಿಲ್ಲ. 9.-30ಕ್ಕೆ ಶಾಲೆಗೆ ಬರಬೇಕಾದ ಕೆಲ ಶಿಕ್ಷಕರು 11 ಗಂಟೆಯಾದರೂ ಸ್ಕೂಟಿಗಳಲ್ಲಿ ಸುತ್ತುವುದನ್ನು ನೋಡಿದ್ದೇನೆ. ಶಿಕ್ಷಕರ ಹಾಜರಾತಿ ಖಾತ್ರಿಗೆ ಶಾಲೆಗಳಲ್ಲಿ ಬಯೋಮೆಟ್ರಿಕ್​ ಅಳವಡಿಕೆಗೆ ಶಿಕ್ಷಣ ಸಚಿವರಿಗೆ ಶಿಫಾರಸು ಮಾಡುತ್ತೇನೆ. |  ಕೆ.ಷಡಕ್ಷರಿ ಶಾಸಕ