ಜಿಲ್ಲೆ

ಅಭಿವೃದ್ಧಿ ಹಣ ಲೂಟಿಕೋರರ ಪಾಲಾಗುತ್ತಿದೆ:ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ವಿಷಾದ

ಹಾಸನ: ಪ್ರಸ್ತುತ ಶ್ರೀಮಂತಿಕೆ, ಅಧಿಕಾರವನ್ನು ಪೂಜಿಸುವ ಸಮಾಜದಲ್ಲಿ ನಾವಿದ್ದೇವೆ. ಸಮಾಜದ ಭಾವನೆ ಬದಲಾದರೆ ಮಾತ್ರ ಜನರ ಭಾವನೆ ಬದಲಾವಣೆ ಸಾಧ್ಯ ಎಂದು ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಹೇಳಿದರು.

ನಗರದ ಸರ್ಕಾರಿ ಕಲಾ ಕಾನೂನು ಕಾಲೇಜಿನಲ್ಲಿ ಗುರುವಾರ ಹಮ್ಮಿಕೊಂಡಿದ್ದ ‘ಪ್ರಸ್ತುತ ಕಾನೂನಿನ ವ್ಯವಸ್ಥೆ ಹಾಗು ಸಮಾಜ’ ಎಂಬ ವಿಷಯದ ಕುರಿತ ರಾಷ್ಟ್ರೀಯ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಅಧಿಕಾರ ಮತ್ತು ಶ್ರೀಮಂತಿಕೆಯ ವ್ಯಾಮೋಹದಿಂದ ಸಮಾಜದಲ್ಲಿ ಅಶಾಂತಿ ನೆಲೆಸಿದೆ. ಇತ್ತೀಚಿನ ದಿನಗಳಲ್ಲಿ ಅಧಿಕಾರಶಾಯಿಗಳು ಸರ್ಕಾರದ ಹಣವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಸಮಾಜದ ಅಭಿವೃದ್ಧಿಗೆ ನೀಡಿದ್ದ ಹಣ ಲೂಟಿಕೋರರ ಪಾಲಾಗಿ ಕೊನೆಗೆ ಅಭಿವೃದ್ಧಿ ಮರೀಚಿಕೆಯಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ಜೈಲಿಗೆ ಹೋಗಿ ಜಾಮೀನು ತೆಗೆದುಕೊಂಡು ಬಂದವರನ್ನು ಹೂವಿನ ಹಾರ, ಸೇಬಿನ ಹಾರ ಹಾಕಿ ಸ್ವಾಗತ ಕೋರಲಾಗುತ್ತಿದೆ. ಜಾಮೀನಿನ ಮೇಲೆ ಇರುವವರು ಎಷ್ಟು ಜನ ಅಧಿಕಾರದಲ್ಲಿದ್ದಾರೆ. ಜಾಮೀನಿನ ಮೇಲೆ ಇರುವವರನ್ನು ಎಷ್ಟು ಮಂದಿಯನ್ನು ನಾವು ಆಯ್ಕೆ ಮಾಡಿದ್ದೇವೆ. ಅಧಿಕಾರದಲ್ಲಿ ಇರುವವರು 40 ಪಸೆರ್ಂಟ್ ಎಂದು ಮಾತನಾಡುತ್ತಿದ್ದಾರೆ. ಹೀಗಾದರೆ ಯಾವ ರೀತಿ ಅಭಿವೃದ್ಧಿ ಆಗಲು ಸಾಧ್ಯ. ಇವತ್ತಿನ ಪರಿಸ್ಥಿತಿಗೆ ಮೂಲ ಕಾರಣ ದುರಾಸೆ, ಆ ದುರಾಸೆಗೆ ಯಾವುದೇ ಮದ್ದು ಇಲ್ಲ. ದುರಾಸೆಗೆ ಒಳಗಾದವರಿಗೆ ಹೆದರಿಕೆ ಇಲ್ಲ. ಈ ದುರಾಸೆ ಹೋಗಬೇಕಾದರೆ ಹಿರಿಯರು ಕಟ್ಟಿದ ಮೌಲ್ಯ, ತೃಪ್ತಿಯಿಂದ ಮಾತ್ರ ಸಾಧ್ಯ ಎಂದು ಹೇಳಿದರು.

ಇತ್ತೀಚಿನ ದಿನಗಳಲ್ಲಿ ನ್ಯಾಯಾಂಗ ವ್ಯವಸ್ಥೆಯಲ್ಲಿ ಬಹಳಷ್ಟು ಸುಧಾರಣೆ ಆಗುವ ಅಗತ್ಯವಿದೆ. ಯಾವುದಾದರೂ ಒಂದು ಪ್ರಕರಣ ಕೋರ್ಟ್ ಮೆಟ್ಟಿಲೇರಿದರೆ ಅದರ ತೀರ್ಪು ಎಷ್ಟು ತಡವಾಗಿ ಬರುತ್ತವೆ ಎಂಬ ನಿದರ್ಶನಗಳು ನಮ್ಮ ಕಣ್ಣ ಮುಂದೆ ಇವೆ. ಆದ್ದರಿಂದ ಮುಂದಿನ ಪೀಳಿಗೆಯ ಯುವ ವಕೀಲರು ಹಾಗು ಇಲಾಖೆ ಅಧಿಕಾರಿಗಳು ಯಾವುದೇ ಪ್ರಕರಣವನ್ನು ತ್ವರಿತವಾಗಿ ವಿಲೇವಾರಿ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಟಿ.ಎನ್.ಇನವಳ್ಳಿ, ಸರ್ಕಾರಿ ಕಾನೂನು ಕಾಲೇಜಿನ ಪ್ರಾಂಶುಪಾಲ ಶೀನಾ ಥಾಮಸ್, ಏಷ್ಯಾ ಕಿರಿಯ ಪ್ರೇರಕ ಭಾಷಣಗಾರ್ಥಿ ಯಶಿಕಾ ಮಹಾಜನ್ ಹಾಜರಿದ್ದರು.