ತುರಮರಿ ಗ್ರಾಮದ ರಸ್ತೆಗಳಲ್ಲಿ ತುಂಬಿಕೊಂಡಿರುವ ಕೆಸರು, ನೀರು.  
ಜಿಲ್ಲೆ

ಅಭಿವೃದ್ಧಿ ವಂಚಿತ ತುರಮರಿ ಗ್ರಾಮ

ಶಿವಾನಂದ ವಿಭೂತಿಮಠ ಎಂ.ಕೆ.ಹುಬ್ಬಳ್ಳಿ, ಬೆಳಗಾವಿ:
ಚನ್ನಮ್ಮನ ಕಿತ್ತೂರು ತಾಲೂಕಿನ ತುರಮರಿ (ಸ್ಥಳಾಂತರಗೊಂಡಿರುವ ಗ್ರಾಮ) ಊರಿನಲ್ಲಿ ಯಾವುದೇ ಮೂಲ ಸೌಲಭ್ಯಗಳೇ ಇಲ್ಲ.
ಸರಿಯಾದ ರಸ್ತೆಗಳಿಲ್ಲ. ಸ್ವಚ್ಛತೆಗೆ ಆದ್ಯತೆ ಇಲ್ಲ. ಚರಂಡಿಗಳು ಕಸ&ಕಡ್ಡಿಗಳಿಂದ ತುಂಬಿಕೊಂಡಿವೆ.

ಹಲವು ದಶಕಗಳ (1972ರಲ್ಲಿ) ಹಿಂದೆ ಮಲಪ್ರಭಾ ನದಿ ಮುಳುಗಡೆ ಪ್ರದೇಶದಿಂದ ಸ್ಥಳಾಂತರಗೊಂಡ ಈ ಗ್ರಾಮದಲ್ಲಿ ಅಭಿವೃದ್ಧಿ ಮರೀಚಿಕೆಯಾಗಿದೆ. ರಸ್ತೆ, ಚರಂಡಿ, ಸ್ವಚ್ಛತೆಗಾಗಿ ಸ್ಥಳಿಯ ಗ್ರಾಪಂಗೆ ಅಲೆದಾಡಿ ಸುಸ್ತಾಗಿರುವ ಇಲ್ಲಿನ ಜನರು, ಸ್ಥಳಿಯ ಆಡಳಿತದ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ.

ಹಲವು ದಶಕ ಕಳೆದರೂ ಅಭಿವೃದ್ಧಿ ಕಾಣದ ರಸ್ತೆಗಳಿಂದ ರೋಸಿ ಹೋಗಿರುವ ಜನರು ಮಳೆಗಾಲದಲ್ಲಿ ಕೆಸರುಮಯ ರಸ್ತೆಗಳಲ್ಲೇ ಸಂಚಾರ ಮಾಡುವಂತಾಗಿದೆ. ಚರಂಡಿಗಳು ಕಸದಲ್ಲಿ ಕಣ್ಮರೆಯಾಗಿದೆ. ಸಂಜೆಯಾಗುತ್ತಿದ್ದಂತೆ ಸೊಳ್ಳೆಗಳ ಕಾಟ ವಿಪರೀತವಾಗಿದ್ದು, ಸಾಂಕ್ರಾಮಿಕ ಕಾಯಿಲೆಗಳ ಭೀತಿ ಇಲ್ಲಿನ ಜನರನ್ನು ಕಾಡಲಾರಂಭಿಸಿದೆ. ಈ ಊರಿನಲ್ಲಿ ಅಭಿವೃದ್ಧಿ ಕಾರ್ಯಗಳ ಕೊರತೆ ಒಂದೆಡೆಯಾದರೆ, ಇರುವ ಸೌಲಭ್ಯಗಳು ಸರಿಯಾಗಿ ಸಿಗುತ್ತಿಲ್ಲ ಎಂಬ ಆರೋಪ ಮತ್ತೊಂದೆಡೆಯಾಗಿದೆ.