ಬಸವಕಲ್ಯಾಣ: ಶರಣರ ಕಾಯಕ ಭೂಮಿ ಬಸವಕಲ್ಯಾಣ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಪ್ರಯತ್ನಿಸುವುದಾಗಿ ಎಂದು ಶಾಸಕ ಶರಣು ಸಲಗರ ಭರವಸೆ ನೀಡಿದರು.
ತಾಲೂಕು ಆಡಳಿತದಿಂದ ನಗರದ ರಥ ಮೈದಾನದ ಸಭಾ ಭವನದಲ್ಲಿ ಕಲ್ಯಾಣ ಕರ್ನಾಟಕ ಉತ್ಸವ ನಿಮಿತ್ತ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ಸರ್ದಾರ್ ವಲ್ಲಭಭಾಯಿ ಪಟೇಲರ ದಿಟ್ಟ ಕ್ರಮದಿಂದ ಈ ಭಾಗಕ್ಕೆ ಸ್ವಾತಂತ್ರÈ ದೊರಕಿದೆ. ವಿದ್ಯಾರ್ಥಿಗಳು ಈ ಭಾಗದ ಇತಿಹಾಸ, ಪರಂಪರೆ ಅಧ್ಯಯನ ಮಾಡಬೇಕು ಎಂದರು.
ಹೈಕ ವಿಮೋಚನಾ ಹೋರಾಟದ ವೇಳೆ ಹಲವರು ಹುತಾತ್ಮರಾಗಿದ್ದಾರೆ. ಹುತಾತ್ಮರ ಸ್ಮರಣೆಗೆ ಗೋರ್ಟಾದಲ್ಲಿ ಸ್ಮಾರಕ ನಿರ್ಮಿಸಲಾಗಿದೆ. ಕಲ್ಯಾಣ ಕರ್ನಾಟಕ ಉತ್ಸವ ವೈಭವದಿಂದ ಆಚರಿಸಬೇಕು. ಅಧಿಕಾರಿಗಳು, ಸಂಘ, ಸಂಸ್ಥೆ ಪದಾಧಿಕಾರಿಗಳು, ಸಾರ್ವಜನಿಕರು ಭಾಗವಹಿಸಬೇಕು ಎಂದರು.
ಸಹಾಯಕ ಆಯುಕ್ತ ಪ್ರಕಾಶ ಕುದರಿ ಮಾತನಾಡಿ, ವಿಮೋಚನಾ ಚಳುವಳಿ, ಕಲ್ಯಾಣ ಕರ್ನಾಟಕ ಉತ್ಸವದಂಥ ಮಹತ್ವದ ಕಾರ್ಯಕ್ರಮದಲ್ಲಿ ಕೆಲ ಅಧಿಕಾರಿಗಳು ಭಾಗವಹಿಸದಿರುವುದು ಸರಿಯಲ್ಲ. ಕಾರ್ಯಕ್ರಮಕ್ಕೆ ಬರದ ಅಧಿಕಾರಿಗಳಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಿ, ಈ ಕುರಿತು ಜಿಲ್ಲಾಧಿಕಾರಿಗೆ ವರದಿ ಸಲ್ಲಿಸುವಂತೆ ತಹಸೀಲ್ದಾರ್‌ಗೆ ಸೂಚಿಸಿದರು.
ಪ್ರೊ.ರುದ್ರೇಶ್ವರ ಸ್ವಾಮಿ ಗೋರ್ಟಾ ವಿಶೇಷ ಉಪನ್ಯಾಸ ನೀಡಿ, ಜಲಿಯನ ವಾಲಾಬಾಗ್ ಹತ್ಯಾಕಾಂಡ ಮಾದರಿಯಲ್ಲಿಯೇ ಗೋರ್ಟಾ ಗ್ರಾಮದಲ್ಲಿ ರಜಾಕಾರರು ಹತ್ಯಾಕಾಂಡ ನಡೆಸಿದ್ದಾರೆ. ಪಟೇಲರ ನಿರ್ಧಾರದಿಂದ ಈ ಭಾಗಕ್ಕೆ ಸ್ವಾತಂತ್ರ ದೊರಕಿದೆ ಎಂದರು.
ಮಾಜಿ ಶಾಸಕ ಮಲ್ಲಿಕಾರ್ಜುನ ಎಸ್ ಖೂಬಾ, ಪೌರಾಯುಕ್ತ ಮನೋಜಕುಮಾರ ಕಾಂಬಳೆ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಮಹಾದೇವ ಬಾಬಳಗೆ, ಸಿಪಿಐ ಅಲಿಸಾಬ್ ಇತರರಿದ್ದರು. ನೀಲಾಂಬಿಕಾ ಶಾಲಾ ವಿದ್ಯಾರ್ಥಿಗಳಿಂದ ನಾಡಗೀತೆ ಜರುಗಿತು. ತಹಸೀಲ್ದಾರ್ ಶಾಂತಗೌಡ ಬಿರಾದಾರ ಸ್ವಾಗತಿಸಿದರು. ದೈಹಿಕ ಶಿಕ್ಷಕ ಶಿವಕುಮಾರ ಜಡಗೆ ನಿರೂಪಣೆ ಮಾಡಿ, ವಂದಿಸಿದರು.