ಯಳಂದೂರು: ಮಾಜಿ ಸಂಸದ ಆರ್. ಧ್ರುವನಾರಾಯಣ ನಿಧನರಾದ ಹಿನ್ನೆಲೆಯಲ್ಲಿ ಪಟ್ಟಣವೂ ಸೇರಿದಂತೆ ತಾಲೂಕಿನ ವಿವಿಧೆಡೆ ಶ್ರದ್ಧಾಂಜಲಿ ಸಭೆಗಳನ್ನು ನಡೆಸಲಾಯಿತು.
ಪಟ್ಟಣದ ಎಸ್‌ಬಿಐ ವೃತ್ತದ ಬಳಿ ಪಟ್ಟಣ ಪಂಚಾಯಿತಿ ಸದಸ್ಯರು, ಮುಸ್ಲಿಂ ಮುಖಂಡರು ಹಾಗೂ ಧ್ರುವನಾರಾಯಣ ಅಭಿಮಾನಿ ಬಳಗದ ಸದಸ್ಯರು ಶ್ರದ್ಧಾಂಜಲಿ ಸಭೆಯನ್ನು ನಡೆಸಿದರು. ಪಪಂ ಸದಸ್ಯ ವೈ.ಜಿ.ರಂಗನಾಥ ಮಾತನಾಡಿ, ರಾಜ್ಯ ಕಂಡ ಅಪರೂಪದ ರಾಜಕಾರಣಿ ಧ್ರುವನಾರಾಯಣ ಆಗಿದ್ದರು. 2 ಬಾರಿ ಶಾಸಕರಾಗಿ, 2 ಬಾರಿ ಸಂಸದರಾಗಿ ಅನೇಕ ಜನಾನುರಾಗಿ ಕೆಲಸಗಳನ್ನು ಇವರು ಮಾಡಿದ್ದಾರೆ. ಸದಾ ಅಭಿವೃದ್ಧಿ ಪರ ತುಡಿತವುಳ್ಳ ಪ್ರಾಮಾಣಿಕ ರಾಜಕಾರಣಿಯಾಗಿ ಇವರು ಗುರುತಿಸಿಕೊಂಡಿದ್ದರು. ಇವರ ಬಳಿ ಯಾರೇ ಹೋದರೂ ಅವರಿಗೆ ಕೂಡಲೇ ಸ್ಪಂದಿಸುವ ಔದಾರ್ಯ ಹೊಂದಿದ್ದರು.
ಪಕ್ಷ, ಜಾತಿ, ಧರ್ಮ, ಮತಭೇದವನ್ನು ಮರೆತು ಸಾರ್ವಜನಿಕರಿಗಾಗಿಯೇ ತಮ್ಮ ಜೀವನ ಮುಡಿಪಾಗಿಟ್ಟ ಅಪರೂಪದ ಪ್ರಾಮಾಣಿಕ ರಾಜಕಾರಣಿಯಾಗಿದ್ದರು. ಇವರ ಅವಧಿಯಲ್ಲಿ ಪಟ್ಟಣದ ರಾಷ್ಟ್ರೀಯ ಹೆದ್ದಾರಿಯ ಬೈಪಾಸ್ ರಸ್ತೆ, ದಿವಾನ್ ಪೂರ್ಣಯ್ಯ ವಸ್ತು ಸಂಗ್ರಹಾಲಯ, ಬಳೇಮಂಟಪದ ನವೀಕರಣ, ಬಿಳಿಗಿರಿಂಗನಬೆಟ್ಟದಲ್ಲಿ ಮಾದರಿ ಮುರಾರ್ಜಿ ದೇಸಾಯಿ ವಸತಿ ಶಾಲೆ ಸೇರಿದಂತೆ ಅನೇಕ ಅಭಿವೃದ್ಧಿ ಕಾರ್ಯಗಳು ಯಳಂದೂರು ಪಟ್ಟಣ ಹಾಗೂ ತಾಲೂಕಿನಲ್ಲಿ ನಡೆದಿದ್ದವು. ಇವರ ಅಕಾಲಿಕ ನಿಧನದಿಂದ ಕಾಂಗ್ರೆಸ್ ಪಕ್ಷಕ್ಕಲ್ಲದೆ, ಕ್ಷೇತ್ರದ ಮತದಾರರು, ಸಾರ್ವಜನಿಕರಿಗೆ ಅಪಾರ ನೋವನ್ನು ತಂದಿದೆ ಎಂದರು.
ಕಾಂಗ್ರೆಸ್ ಮುಖಂಡ ಮುನವರ್ ಬೇಗ್ ಮಾತನಾಡಿದರು. ಪಪಂ ಸದಸ್ಯ ಮಹೇಶ್, ಬಿ.ರವಿ ಮುಖಂಡರಾದ ನಯಾಜ್‌ಖಾನ್ ಮುನವರ್, ಇರ್ಫಾನ್, ಅಪ್ಸರ್‌ಖಾನ್, ಸನಾವುಲ್ಲಾ, ಗುಂಬಳ್ಳಿ ಜಬ್ಬಾರ್, ಪಾಪಣ್ಣ, ನಾಗು, ಮಾರನಾಯಕ ಸೇರಿದಂತೆ ಅನೇಕರು ಇದ್ದರು