ಚಿಟಗುಪ್ಪ ಪುರಸಭೆ ಸಭಾಂಗಣದಲ್ಲಿ ಬುಧವಾರ ತಾಲೂಕು ಉಸ್ತುವಾರಿ ಅಧಿಕಾರಿ ಸುರೇಖಾ ಅಧ್ಯಕ್ಷತೆಯಲ್ಲಿ ತಾಲೂಕು ಮಟ್ಟದ ಅಧಿಕಾರಿಗಳ ಪ್ರಗತಿ ಪರಿಶೀಲನೆ ಸಭೆ ನಡೆಯಿತು. ತಹಸೀಲ್ದಾರ್ ಮಂಜುನಾಥ ಪಂಚಾಳ, ತಾಪಂ ಇಒ ಲಕ್ಷ್ಮೀ ಬಿರಾದಾರ ಇತರರಿದ್ದರು. 
ಜಿಲ್ಲೆ

ಅಭಿವೃದ್ಧಿ ನಿರ್ಲಕ್ಷಿಸಿದರೆ ಕ್ರಮ

ಚಿಟಗುಪ್ಪ: ತಾಲೂಕಿನ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಜತೆಗೆ ಸರ್ಕಾರದ ಅಭಿವೃದ್ಧಿ ಕಾರ್ಯಗಳ ತೀವ್ರ ಪ್ರಗತಿಗೆ ತಾಲೂಕು ಅನುಷ್ಠಾನ ಅಧಿಕಾರಿಗಳು ಹಾಗೂ ಸಿಬ್ಬಂದಿ ಚುರುಕಿನಿಂದ ಕೆಲಸ ಮಾಡಬೇಕು. ಈ ನಿಟ್ಟಿನಲ್ಲಿ ನಿರ್ಲಕ್ಷ್ಯ ವಹಿಸುವವರ ವಿರುದ್ಧ ಸರ್ಕಾರ ಸೂಕ್ತ ಕ್ರಮ ವಹಿಸಲಿದೆ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಕೆಎಎಸ್ (ಹಿರಿಯ ಶ್ರೇಣಿ) ಅಧಿಕಾರಿ ಹಾಗೂ ತಾಲೂಕು ಉಸ್ತುವಾರಿ ಅಧಿಕಾರಿ ಸುರೇಖಾ ಎಚ್ಚರಿಕೆ ನೀಡಿದರು.

ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಬುಧವಾರ ನಡೆದ ತಾಲೂಕು ಮಟ್ಟದ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಪ್ರತಿಯೊಂದು ಇಲಾಖೆಯ ಅಧಿಕಾರಿಗಳು ತಮ್ಮ ತಮ್ಮ ಇಲಾಖೆಯಡಿ ನಡೆಯುವ ಅಭಿವೃದ್ಧಿಯಲ್ಲಿ ಸರ್ಕಾರದ ನಿರ್ದಿಷ್ಟ ಗುರಿ ಮುಟ್ಟುವ ಕೆಲಸ ಮಾಡಬೇಕು. ಜನಸಾಮಾನ್ಯರಿಗೆ ತೊಂದರೆಯಾಗದಂತೆ ಕೆಲಸ ಕಾರ್ಯ ಮಾಡಿಕೊಡುವ ಮೂಲಕ ಸರ್ಕಾರದ ಯೋಜನೆ ಕಾನೂನಿನ ಚೌಕಟ್ಟಿನಲ್ಲಿ ಜನರಿಗೆ ತಲುಪಬೇಕೆಂದು ಸೂಚಿಸಿದರು.

ಅಂಗನವಾಡಿ, ವಸತಿ ನಿಲಯ, ಆಸ್ಪತ್ರೆ ಸೇರಿ ಎಲ್ಲೆಡೆ ಸ್ವಚ್ಛತೆಗೆ ಗಮನ ಕೊಡುವುದರ ಮೂಲಕ ಮೂಲ ಸೌಲಭ್ಯ ಒದಗಿಸಬೇಕು. ಸರ್ಕಾರದ ಯೋಜನೆ ಅನುಷ್ಠಾನ ಹಾಗೂ ಅಭಿವೃದ್ಧಿ ಕೆಲಸಗಳ ಬಗ್ಗೆ ನಿರ್ಲಕ್ಷ ಧೋರಣೆ ಸಹಿಸುವುದಿಲ್ಲ ಎಚ್ಚರಿಸಿದರು.

ಎಲ್ಲ ಇಲಾಖೆಯ ತಾಲೂಕು ಅನುಷ್ಠಾನ ಅಧಿಕಾರಿಗಳ ಪ್ರಗತಿ ವರದಿ ಪರಿಶೀಲಿಸಿದ ಅವರು, ಕೆಲವು ಇಲಾಖೆಯ ಪ್ರಗತಿ ಮಂದ ಗತಿಯಲ್ಲಿ ಇರುವುದು ಕಂಡು ಬರುತ್ತಿದೆ. ಬರುವ ತಿಂಗಳ ಸಭೆಯಲ್ಲಿ ಪ್ರಗತಿ ಸಾಧಿಸಿ ವರದಿ ನೀಡಬೇಕೆಂದು ತಿಳಿಸಿದರು.

ತಹಸೀಲ್ದಾರ್ ಮಂಜುನಾಥ ಪಂಚಾಳ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಲಕ್ಷ್ಮೀ ಬಿರಾದಾರ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.

ವಸತಿ ನಿಲಯಕ್ಕೆ ಭೇಟಿ ನೀಡಿ ಪರಿಶೀಲನೆ: ಪಟ್ಟಣದಲ್ಲಿರುವ ಅಲ್ಪಸಂಖ್ಯಾತರ ಇಲಾಖೆಯ ಮೆಟ್ರಿಕ್ ನಂತರ ಬಾಲಕಿಯರ ವಸತಿ ನಿಲಯಕ್ಕೆ ತಾಲೂಕು ಉಸ್ತುವಾರಿ ಅಧಿಕಾರಿ ಸುರೇಖಾ ಬುಧವಾರ ಭೇಟಿ ನೀಡಿ ವ್ಯವಸ್ಥೆ ಪರಿಶೀಲಿಸಿದರು. ವಿದ್ಯಾರ್ಥಿಗಳಿಗೆ ತೊಂದರೆಯಾಗಬಾರದು. ಬಡ ಮಕ್ಕಳಿಗೆ ಗುಣಮಟ್ಟದ ಆಹಾರ, ಒಳ್ಳೆಯ ಪುಸ್ತಕ ಹಾಗೂ ಇತರೆ ಮೂಲಸೌಲಭ್ಯ ಒದಗಿಸಿಕೊಡಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.

ಸರ್ಕಾರದ ಯೋಜನೆ ಅನುಷ್ಠಾನ, ಅಭಿವೃದ್ಧಿ ಪ್ರಗತಿ, ಜನರ ಸಮಸ್ಯೆಗಳ ಸ್ಪಂದನೆ ಪ್ರಗತಿ ಪರಿಶೀಲಿಸಲು ತಾಲೂಕಿನ ಉಸ್ತುವಾರಿ ಅಧಿಕಾರಿಯಾಗಿ ನನ್ನನ್ನು ನೇಮಿಸಲಾಗಿದ್ದು, ಸರ್ಕಾರದ ಮುಖ್ಯ ಕಾರ್ಯದರ್ಶಿಯವರ ಅಧೀನದಲ್ಲಿ ಕರ್ತವ್ಯ ನಿರ್ವಹಿಸಲಾಗುತ್ತಿದ್ದು, ಪ್ರಗತಿ ವರದಿಯನ್ನು ಅವರಿಗೆ ನೇರವಾಗಿ ಸಲ್ಲಿಸಲಾಗುವುದು. ಆದ್ದರಿಂದ ಅಧಿಕಾರಿಗಳು ಪ್ರಗತಿಯಲ್ಲಿ ನಿರ್ಲಕ್ಷ್ಯ ತೋರದೆ ಚುರುಕಿನಿಂದ ಕೆಲಸ ಮಾಡಿ.

| ಸುರೇಖಾ

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಅಧಿಕಾರಿ ಹಾಗೂ ತಾಲೂಕು ಉಸ್ತುವಾರಿ ಅಧಿಕಾರಿ