ಜಿಲ್ಲೆ

ಅಭಿವೃದ್ಧಿ ಕೆಲಸಗಳಿಗೆ ಆದ್ಯತೆ ನೀಡಿ

 ಕೆ.ಎಂ.ದೊಡ್ಡಿ: ರಾಜಕೀಯವನ್ನು ಎಲ್ಲ ಸಂದರ್ಭಗಳಲ್ಲೂ ಮಾಡದೆ ಚುನಾವಣೆ ವೇಳೆ ಮಾಡಿ ತಮ್ಮ ಶಕ್ತಿ ತೋರಿಸಬೇಕು. ಉಳಿದ ಸಮಯದಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ ಹೇಳಿದರು.

ಸಮೀಪದ ಮೆಳ್ಳಹಳ್ಳಿ ಗ್ರಾಮದಲ್ಲಿ ಕನಕ ಭವನ ಕಾಂಪೌಂಡ್ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿ ಅವರು, ಪಕ್ಷದಲ್ಲಿ ಯಾರು ಇರುತ್ತಾರೋ, ಹೋಗುತ್ತಾರೋ ಎಂಬುದು ಮುಖ್ಯವಲ್ಲ. ಚುನಾವಣೆ ಬಂದಾಗ ಹೇಗೆ ಎದುರಿಸುತ್ತೇವೆ ಎನ್ನುವುದು ಮುಖ್ಯ. ಜನಪರ ಕಾರ್ಯಕ್ರಮಗಳ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಯಶಸ್ವಿಯಾಗಿ ಮುನ್ನಡೆಯುತ್ತಿದೆ. ಪಕ್ಷದ ಶಾಸಕನಾಗಿ ಶಿಸ್ತಿನಿಂದ ಕೆಲಸ ಮಾಡುತ್ತಿದ್ದೇನೆ ಎಂದರು.

ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಸದೃಢವಾಗಿದೆ. ಎರಡು ವರ್ಷದಿಂದ ಅಭಿವೃದ್ಧಿ ಕೆಲಸಗಳಿಗೆ ಹೆಚ್ಚಿನ ಒತ್ತು ಕೊಡುತ್ತಿದೆ. ಮೆಳ್ಳಹಳ್ಳಿ ಗ್ರಾಮಸ್ಥರು ಕನಕ ಭವನದ ಸುತ್ತ ಕಾಂಪೌಂಡ್ ನಿರ್ಮಾಣಕ್ಕೆ ಮನವಿ ಮಾಡಿದ್ದರು. ಅದರಂತೆ 9 ಲಕ್ಷ ರೂ.ಅನುದಾನ ಬಿಡುಗಡೆ ಮಾಡಿ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಈ ಕಾಮಗಾರಿ ಪೂರ್ಣಗೊಳಿಸುವ ಜವಾಬ್ದಾರಿ ನಮ್ಮ ಮೇಲಿದೆ. ಅದನ್ನು ಪ್ರಾಮಾಣಿಕವಾಗಿ ಮಾಡಲಾಗುವುದು. ಮುಂದಿನ ದಿನಗಳಲ್ಲಿ ಕನಕ ಭವನ ನಿರ್ಮಾಣಕ್ಕೆ ಸಹಕಾರ ನೀಡುತ್ತೇನೆ ಎಂದು ಭರವಸೆ ನೀಡಿದರು.

ಗ್ರಾಪಂ ಸದಸ್ಯ ವಿನಯ್ ಹೊನ್ನೇಗೌಡ ಮಾತನಾಡಿ, ಮೆಳ್ಳಹಳ್ಳಿ ಗ್ರಾಮದಲ್ಲಿ ಕನಕ ಭವನದ ಕಾಂಪೌಂಡ್ ನಿರ್ಮಾಣಕ್ಕೆ ಎಂಎಲ್ಸಿ ಮಧು.ಜಿ.ಮಾದೇಗೌಡ ಅವರು ಅನುದಾನ ನೀಡಿದ್ದಾರೆ. ಗ್ರಾಮದ ಅಭಿವೃದ್ಧಿಗೆ ಮತ್ತಷ್ಟು ಸಹಕಾರ ನೀಡಿ ಎಂದು ಕೋರಿದರು.

ತಾಪಂ ಮಾಜಿ ಸದಸ್ಯರಾದ ಬಿ.ಗಿರೀಶ್, ಭರತೇಶ್, ಮುಖಂಡರಾದ ಅಣ್ಣೂರು ಆರ್.ಸಿದ್ದಪ್ಪ, ಕಾರ್ಕಹಳ್ಳಿ ಸ್ವರೂಪ್ ಬಸವೇಗೌಡ, ಗ್ರಾಪಂ ಅಧ್ಯಕ್ಷೆ ಸೌಭಾಗ್ಯಾ ರಾಮಣ್ಣ, ಉಪಾಧ್ಯಕ್ಷೆ ಸುವರ್ಣಾ, ಸದಸ್ಯರಾದ ಕೆ.ಟಿ.ಶ್ರೀನಿವಾಸ್, ಕೆ.ವಿ.ಶ್ರೀನಿವಾಸ್, ಮಿಥುನ್, ರವಿಚಂದ್ರ, ಮಂಜುನಾಥ್, ಕೌಶಲ್ಯಾ, ಪಿಡಿಒ ಸುಧಾ, ಮುಖಂಡರಾದ ಎಂ.ಕೆ.ಹೊನ್ನೇಗೌಡ, ಪುಟ್ಟಸ್ವಾಮಿ, ಬಿ.ರೇವಣ್ಣ, ನಾಡಗೌಡ ತಮ್ಮಣ್ಣ, ಕರಿಯಪ್ಪ, ಶಿವಣ್ಣ, ಕೆ.ರೇವಣ್ಣ, ಕೃಷ್ಣ ಮತ್ತಿತರರು ಹಾಜರಿದ್ದರು.