ಬೆಂಗಳೂರು ಗ್ರಾಮಾಂತರ/ ಸೂಲಿಬೆಲೆ: ಉಪಚುನಾವಣೆಯಲ್ಲಿ ನಾನು ಸೋಲು ಅನುಭವಿಸಿದ್ದರೂ ಎಂದಿಗೂ ಕಂಗೆಟ್ಟಿಲ್ಲ. ಆದರೆ ಹೊಸಕೋಟೆ ಅಭಿವೃದ್ಧಿ ಕುಂಠಿತವಾಗಿರುವುದೇ ನನ್ನನ್ನು ಚಿಂತೆಗೆ ದೂಡಿದೆ ಎಂದು ವಿಧಾನ ಪರಿಷತ್ ಸದಸ್ಯ ಎಂಟಿಬಿ ನಾಗರಾಜ್ ತಿಳಿಸಿದರು.
ದೊಡ್ಡನಲ್ಲೂರಹಳ್ಳಿಯಲ್ಲಿ ಬುಧವಾರ ಆಯುಷ್ಮಾನ್ ಆರೋಗ್ಯ ಕಾರ್ಡ್ ವಿತರಣೆ, ಬಿಜೆಪಿ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿ, ರಾಜಕೀಯದಲ್ಲಿ ವಂಚನೆ ಮಾಡಿ ಬದುಕುವ ಅನಿವಾರ್ಯ ನನಗೆ ಬಂದಿಲ್ಲ. ತಾಲೂಕಿನಲ್ಲಿ ಅಧಿಕಾರ ಮಾಡಿದ ಬಚ್ಚೇಗೌಡ ಕುಟುಂಬ ಬಡವರ ಮೇಲೆ ದೌರ್ಜನ್ಯ, ದಬ್ಬಾಳಿಕೆ ಮಾಡಿ ರಾಜಕೀಯ ಮಾಡಿದ್ದರು. ನಾನು ಹೊಸಕೋಟೆಗೆ ಬಂದ ಮೇಲೆ ಶಾಂತಿ ಸುವ್ಯವಸ್ಥೆ ನೆಲೆಸಿದೆ ಎಂದರು.
ಉಪಚುನಾವಣೆಯಲ್ಲಿ ನನ್ನ ಸೋಲಿನಿಂದ ಹೊಸಕೋಟೆಗೆ ಆಗಬೇಕಿದ್ದ ಶಾಶ್ವತ ನೀರಾವರಿ ಯೋಜನೆ, ಮೆಟ್ರೋ ಯೋಜನೆಗೆ ತೊಡಕಾಗಿದೆ. ಆದರೂ ನಾನು ಸಿಎಂ ಯುಡಿಯೂರಪ್ಪನವರ ಬಳಿ ತಾಲೂಕಿನ ಆಭಿವೃದ್ಧಿಗೆ ಸಾಕಷ್ಟು ಚರ್ಚೆ ನಡೆಸಿ ಮೂಲ ಸೌಕರ‌್ಯಕ್ಕೆ ಶಕ್ತಿ ಮೀರಿ ಶ್ರಮಿಸುತ್ತೇನೆ ಎಂದರು.
ತಾಲೂಕು ಬಿಜೆಪಿ ಅಧ್ಯಕ್ಷ ಹುಲ್ಲೂರು ಸತೀಶ್ ಮಾತನಾಡಿ, ಮುಂದಿನ ದಿನಗಳಲ್ಲಿ ಗ್ರಾಪಂ ಚುನಾವಣೆ ಸಮೀಪಿಸುತ್ತಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸಿ, ಗ್ರಾಪಂಗಳಲ್ಲಿ ಬಿಜೆಪಿ ತೆಕ್ಕೆಗೆ ಬರುವ ವಿಶ್ವಾಸ ಇದೆ ಎಂದರು.
ಚಿಕ್ಕಹುಲ್ಲೂರು, ಚೊಕ್ಕಹಳ್ಳಿ, ಪಿಲ್ಲಗುಂಪೆ, ಚೋಳಪ್ಪನಹಳ್ಳಿ, ಮಲ್ಲಿಮಾಕನಪುರ, ದೊಡ್ಡನಲ್ಲೂರಹಳ್ಳಿ ಗ್ರಾಮಗಳಲ್ಲಿ ಆಯುಷ್ಮಾನ್ ಭಾರತ್ ಆರೋಗ್ಯ ಕಾರ್ಡ್‌ಗಳನ್ನು ವಿತರಣೆ ಮಾಡಲಾಯಿತು.
ತಾಪಂ ಅಧ್ಯಕ್ಷ ವಿ.ಸಿ.ಜಯದೇವಯ್ಯ, ಬಿಜೆಪಿ ಮಹಿಳಾ ಮೋರ್ಚಾ ತಾಲೂಕು ಅಧ್ಯಕ್ಷೆ ಸುಜಾತಾ ನಾಗರಾಜ್, ಸಂಚಾಲಕಿ ಸುಮತಿ ರೆಡ್ಡಿ, ಮುಖಂಡರಾದ ಶಿವರಾಜ್, ಡಿ.ಸಿ.ರಾಜಣ್ಣ, ಸುಬ್ರಮಣ್ಯಾಚಾರಿ, ನಾಗಭೂಷಣ್, ಮಂಜುನಾಥ್, ತಿಮ್ಮರಾಯಪ್ಪ, ಮೂರ್ತಿ, ವಿನೋದ್‌ರಾಜ್, ಸಿಸಿಕೆ ಮುನಿರಾಜ್, ರಮೇಶ್, ಪ್ರಸಾದ್ ಇದ್ದರು.
ಸಂಸದ ಬಚ್ಚೇಗೌಡ ಅವರ ಕುಟುಂಬ ನನ್ನ ಮೇಲೆ ಸುಳ್ಳು ಆರೋಪ ಮಾಡಿ ಜನರ ವಿಶ್ವಾಸ ಗಳಿಸುವ ಕೆಲಸ ಮಾಡುತ್ತಿದೆ. ಅವರ ಮಗ ಈಗ ಸ್ವಾಭಿಮಾನದ ಹೆಸರಿನಲ್ಲಿ ಗೆದ್ದು, ಕಾಂಗ್ರೆಸ್ ಕದ ತಟ್ಟಿದ್ದಾರೆ. ಪ್ರತಿ ಬಾರಿ ಚುನಾವಣೆಗೂ ಒಂದೊಂದು ಪಕ್ಷದಿಂದ ಸ್ಪರ್ಧೆ ಮಾಡಿ ಮತದಾರರನ್ನು ಯಾಮಾರಿಸುವುದೇ ಬಚ್ಚೇಗೌಡರ ಕುಟುಂಬದ ಸಾಧನೆ. ಎಂಟಿಬಿ ನಾಗರಾಜ್, ಎಂಎಲ್‌ಸಿ