ಚಿತ್ರದುರ್ಗ: ರಾಜಕಾರಣದಲ್ಲಿ ತ್ವರಿತ ಫಲ ಸಿಗಲಿದ್ದು, ಯುವಸಮೂಹ ರಾಜಕೀಯದತ್ತ ಒಲವು ತೋರಬೇಕು. ಇದರಿಂದ ಸಮಾಜದಲ್ಲಿ ಬದಲಾವಣೆಗೂ ಸಹಕಾರಿಯಾಗಲಿದೆ ಎಂದು ಅಬಕಾರಿ ಸಚಿವ ಆರ್.ಬಿ.ತಿಮ್ಮಾಪೂರ ಸಲಹೆ ನೀಡಿದರು.
ಜಿಲ್ಲಾ ಮಾದಿಗ ನೌಕರರ ಸಾಂಸ್ಕೃತಿಕ ಸಂಘದಿಂದ 2022-23ನೇ ಸಾಲಿನ ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಸಮುದಾಯದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಭಾನುವಾರ ತರಾಸು ರಂಗಮಂದಿರದಲ್ಲಿ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಉದ್ಘಾಟಿಸಿ ಮಾತನಾಡಿದರು.
ಅಭಿವೃದ್ಧಿ ಕೀಲಿಕೈ ರಾಜಕಾರಣದಲ್ಲಿ ಅಡಗಿದೆ. ಹೀಗಾಗಿ ಯಾವ ಸಮುದಾಯವಾಗಲಿ ಜನರಿಂದ ಆರಿಸಿ ಹೋಗುವ ಜನಪ್ರತಿನಿಧಿಗಳು ಸಂಸತ್ ಭವನ, ರಾಜ್ಯಸಭೆ, ವಿಧಾನಸಭೆ, ವಿಧಾನ ಪರಿಷತ್‌ಗಳಲ್ಲಿ ತಮ್ಮ ಕ್ಷೇತ್ರದ ಅಭಿವೃದ್ಧಿ ಪರವಾಗಿ ಧ್ವನಿ ಎತ್ತುವ ಕಾರಣದಿಂದಾಗಿ ಪ್ರಗತಿ ಸಾಧಿಸಲು ಸಾಧ್ಯವಾಗಲಿದೆ. ಸಶಕ್ತ ಸಮಾಜ ಕಟ್ಟುವ ಕೆಲಸಕ್ಕೂ ನಾಂದಿಯಾಗಲಿದೆ ಎಂದರು.
ದೇಶದಲ್ಲಿ ಆರ್ಥಿಕ, ಶೈಕ್ಷಣಿಕವಾಗಿ ಹಿಂದುಳಿದಿರುವ ಮಾದಿಗ ಸಮುದಾಯದಲ್ಲಿ ಸಾಮಾಜಿಕ ನೋವು ಈಗಲೂ ಕಡಿಮೆಯಾಗಿಲ್ಲ. ಆದ್ದರಿಂದ ಈ ಸಮಾಜದವರ ಏಳಿಗೆಗೆ ಇಚ್ಛಾಶಕ್ತಿ ಅಗತ್ಯವಿದೆ. ರಾಜಕಾರಣ, ಹೋರಾಟ ಎರಡೂ ತದ್ವಿರುದ್ಧವಾಗಿದ್ದು, ಈ ಪೈಕಿ ಆಯ್ಕೆ ಮಾಡಿಕೊಂಡ ಮಾರ್ಗದಲ್ಲಿ ಸಾಗಿದರೆ, ಏನಾದರೂ ಸಾಧಿಸಬಹುದು ಎಂದು ಸಲಹೆ ನೀಡಿದರು.
ಜನಸಂಖ್ಯೆ ಸರ್ವೇ ಕಾರ್ಯವಾಗಬೇಕು. ಆಗ ಈ ಸಮುದಾಯಕ್ಕೆ ಲಾಭವಾಗುವ ಸಾಧ್ಯತೆ ಹೆಚ್ಚಿದೆ. ಸಂಘ ಪ್ರತಿಭಾವಂತರನ್ನು ಗುರುತಿಸಿ ಸನ್ಮಾನಿಸುತ್ತಿರುವ ಕಾರ್ಯ ಶ್ಲಾಘನೀಯ. ಇದು ಇತರೆ ಮಕ್ಕಳಿಗೆ ಪ್ರೇರಣೆಯಾಗಲಿದೆ ಎಂದು ಅಭಿಪ್ರಾಯಪಟ್ಟರು.
ಸಾನಿಧ್ಯ ವಹಿಸಿದ್ದ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಮಾತನಾಡಿ, ಸಮುದಾಯ ಶೈಕ್ಷಣಿಕ, ಸಾಮಾಜಿಕ, ಆರ್ಥಿಕವಾಗಿ ಹಿಂದುಳಿದಿದ್ದು, ಅಧಿಕಾರಿಗಳ ಸಂಖ್ಯೆಯೂ ಕಡಿಮೆ ಇದೆ. ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಸಮುದಾಯದ ಒಬ್ಬರಿಗೂ ಎಕ್ಸಿಕ್ಯೂಟಿವ್ ಹುದ್ದೆ ನೀಡಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾಮಾಜಿಕ ನ್ಯಾಯದ ಮೇಲೆ ನಂಬಿಕೆ ಉಳ್ಳವರಾಗಿದ್ದು, ಈಗಾಗಿರುವ ಅನ್ಯಾಯ ತ್ವರಿತವಾಗಿ ಸರಿಪಡಿಸಬೇಕು. ಈ ಕುರಿತು ಸಚಿವರು ಗಮನ ಹರಿಸಬೇಕು ಎಂದು ಒತ್ತಾಯಿಸಿದರು.
ಒಳ ಮೀಸಲು ಅಗತ್ಯವಿದೆ: ಎಸ್ಸಿಯ 101 ಜಾತಿಗಳ ಪೈಕಿ ನಮ್ಮ ಸಮುದಾಯ ಹೆಚ್ಚು ಜನಸಂಖ್ಯೆ ಹೊಂದಿದೆ. ಒಳ ಮೀಸಲಾತಿಗಾಗಿ ಸುಮಾರು 30 ವರ್ಷಗಳಿಂದಲೂ ಹೋರಾಟ ಮಾಡುತ್ತಿದ್ದೇವೆ. ಸಮಾಜದ ಮಕ್ಕಳು ವಿದ್ಯಾವಂತರಾದಾಗ ಮಾತ್ರ ಪ್ರಗತಿ ಸಾಧಿಸಲು ಸಾಧ್ಯ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳ ಆಲೋಚನೆ ಬದಲಾಗಬೇಕು. ಅಜ್ಞಾನ, ಮೌಢ್ಯ ಆಚರಣೆಗಳಿಂದ ದೂರವಿದ್ದು, ಅಭಿವೃದ್ಧಿ ಕಡೆಗೆ ಸಾಗಬೇಕು ಎಂದು ಸಲಹೆ ನೀಡಿದರು.
ಮಾಜಿ ಸಚಿವ ಎಚ್.ಆಂಜನೇಯ ಮಾತನಾಡಿ, ನಮ್ಮ ಸಮುದಾಯ ಅಳಿವಿನ ಅಂಚಿನಲ್ಲಿದೆ. ಒಳ ಮೀಸಲಾತಿ ಸಿಗದಿದ್ದರೆ ನಾವು ಇನ್ನಷ್ಟು ಕುಗ್ಗಲಿದ್ದೇವೆ. ಯಾರೂ ಅಪಹರಿಸಲಾಗದ ವಿದ್ಯೆ ಪ್ರಗತಿಗೆ ಬುನಾದಿಯಾಗಿದ್ದು, ವಿಶ್ವದಲ್ಲಿ ಎಲ್ಲಿ ಬೇಕಾದರೂ ಜೀವಿಸಬಹುದು. ಹೀಗಾಗಿ ಪಾಲಕರು ಶಿಕ್ಷಣದ ಮೂಲಕ ತಮ್ಮ ಮಕ್ಕಳನ್ನೇ ಸಮಾಜದ ಆಸ್ತಿಯನ್ನಾಗಿಸಿ ಎಂದು ಸಲಹೆ ನೀಡಿದರು.
ಶ್ರೀ ಷಡಕ್ಷರ ಮುನಿ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ, ಮಾಜಿ ಸಂಸದ ಬಿ.ಎನ್.ಚಂದ್ರಪ್ಪ, ಶಿವಮೊಗ್ಗ ಪಿಡಬ್ಲ್ಯುಡಿ ಅಧೀಕ್ಷಕ ಇಂಜಿನಿಯರ್ ಕೆ.ಜಿ.ಜಗದೀಶ್, ಮಾದಿಗ ನೌಕರರ ಸಾಂಸ್ಕೃತಿಕ ಸಂಘದ ಜಿಲ್ಲಾ ಅಧ್ಯಕ್ಷ ಸಿ.ಚಂದ್ರಪ್ಪ, ಮೈಸೂರು ಪ್ರಾದೇಶಿಕ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ ಪೊಲೀಸ್ ಅಧೀಕ್ಷಕಿ ಬಿ.ಟಿ.ಕವಿತಾ, ಆದಿಜಾಂಬವ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಬಿ.ಟಿ.ಮಂಜುನಾಥ, ಡಾ.ಬಿ.ಆರ್.ಅಂಬೇಡ್ಕರ್ ವಿದ್ಯಾರ್ಥಿ ಪರಿಷತ್ ಅಧ್ಯಕ್ಷ ಬಿ.ಪಿ.ತಿಪ್ಪೇಸ್ವಾಮಿ, ಡಾ.ಎಂ.ಡಿ.ಸತೀಶ್, ನಿವೃತ್ತ ಅಧಿಕಾರಿಗಳಾದ ಎಂ.ರೇವಣಸಿದ್ದಪ್ಪ, ಎಂ.ಮಲ್ಲಿಕಾರ್ಜುನ್, ಡಿ.ಟಿ.ಜಗನ್ನಾಥ್, ಜಿಪಂ ಮಾಜಿ ಸದಸ್ಯ ಆರ್.ನರಸಿಂಹರಾಜು ಇತರರಿದ್ದರು.