ಜಿಲ್ಲೆ

ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆ

ನರೇಗಲ್ಲ: ಜಿಲ್ಲೆಯ ಅತಿ ದೊಡ್ಡ ಹೋಬಳಿ, ಸ್ವಾತಂತ್ರ್ಯ ಪೂರ್ವದಲ್ಲೇ ಶಿಕ್ಷಣ ಸಂಸ್ಥೆ ಹೊಂದುವ ಮೂಲಕ ಈ ಭಾಗದ ಶೈಕ್ಷಣಿಕ ಹೆಬ್ಬಾಗಿಲು ಎಂದು ಹೆಸರುವಾಸಿಯಾಗಿರುವ ನರೇಗಲ್ಲ ಪಟ್ಟಣವು ನಿರೀಕ್ಷಿತ ಪ್ರಮಾಣದಲ್ಲಿ ಅಭಿವೃದ್ಧಿ ಕಾಣದೆ ಮೂಲಸೌಕರ್ಯದಿಂದ ವಂಚಿತವಾಗುತ್ತಿದೆ.

ಪಟ್ಟಣ ಪಂಚಾಯಿತಿಯು ಕೋಡಿಕೊಪ್ಪ, ಕೋಚಲಾಪೂರ, ದ್ಯಾಂಪೂರ, ಮಲ್ಲಾಪೂರ, ತೋಟಗಂಟಿ ಸೇರಿ 17 ವಾರ್ಡ್​ಗಳ ವ್ಯಾಪ್ತಿ ಹೊಂದಿದೆ. ಪ.ಪಂ. ವ್ಯಾಪ್ತಿಯಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳಾಗುತ್ತಿಲ್ಲ. ಎಲ್ಲೆಂದರಲ್ಲಿ ಅನೈರ್ಮಲ್ಯ, ಪೈಪ್​ಲೈನ್ ಕಾಮಗಾರಿಯಿಂದ ಕಿತ್ತು ಹೋದ ಸಿ.ಸಿ. ರಸ್ತೆಗಳು, ಚರಂಡಿ ನೀರು, ಕಸ ಕಡ್ಡಿಗಳಿಂದ ಪಟ್ಟಣದ ವಾರ್ಡ್​ಗಳು ತುಂಬಿಕೊಂಡಿವೆ. ಇಂತಹ ಹತ್ತಾರು ಸಮಸ್ಯೆಗಳಿಂದ ಪಟ್ಟಣ ಸೊರಗುತ್ತಿದೆ. ಈ ಬಗ್ಗೆ ಸಾರ್ವಜನಿಕರು ಪ.ಪಂ. ಸದಸ್ಯರಿಗೆ, ಶಾಸಕರಿಗೆ, ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ನಗರಾಭಿವೃದ್ಧಿ ಯೋಜನಾ ನಿದೇರ್ಶಕರ ಗಮನಕ್ಕೆ ತಂದರೂ ಯಾವುದೇ ಪ್ರಯೋಜವಾಗಿಲ್ಲ.

ಕಾಯಂ ಮುಖ್ಯಾಧಿಕಾರಿ, ಇಂಜಿನಿಯರ್ ಇಲ್ಲ: ರೋಣ ಪುರಸಭೆಯ ಮುಖ್ಯಾಧಿಕಾರಿ ಎಂ.ಎನ್. ನೂರುಲ್ಲಾಖಾನ್ ಅವರು ಪಪಂ ಪ್ರಭಾರಿ ಮುಖ್ಯಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. 15 ದಿನಗಳ ಹಿಂದೆ ಕುಂದಗೋಳ ಪುರಸಭೆ ಮುಖ್ಯಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ನಾರಾಯಣ ಡೊಂಬರ ಅವರನ್ನು ನರೇಗಲ್ಲ ಪಪಂ ಮುಖ್ಯಾಧಿಕಾರಿಯನ್ನಾಗಿ ಸರ್ಕಾರ ನೇಮಿಸಲಾಗಿತ್ತು. ಕರ್ತವ್ಯಕ್ಕೆ ಹಾಜರಾದ ನಾರಾಯಣ ಡೊಂಬರ ಅವರು ಎರಡೇ ದಿನಗಳಲ್ಲಿ ಅವರ ವೈಯಕ್ತಿಕ ಕಾರಣಗಳನ್ನು ಹೇಳಿ 15 ದಿನ ರಜೆ ಹಾಕಿ ಹೋಗಿದ್ದರು. ಈಗ ಮತ್ತೆ ರೋಣ ಪುರಸಭೆ ಮುಖ್ಯಾಧಿಕಾರಿಯನ್ನೇ ಮೂರನೇ ಬಾರಿಗೆ ನರೇಗಲ್ಲ ಪ.ಪಂ.ಗೆ ಪ್ರಭಾರಿ ಮುಖ್ಯಾಧಿಕಾರಿಯನ್ನಾಗಿ ನೇಮಿಸಲಾಗಿದೆ. ಖಾಲಿ ಇರುವ ಹುದ್ದೆಗೆ ಸರ್ಕಾರ ನೇಮಿಸಿದ ಅಧಿಕಾರಿಯನ್ನು ಮತ್ತೆ ವರ್ಗಾವಣೆ ಮಾಡಿ, ಪ್ರಭಾರ ಮುಖ್ಯಾಧಿಕಾರಿಯನ್ನು ನೇಮಿಸಿರುವುದು ಸಾಕಷ್ಟು ಗೊಂದಲ, ಸಂಶಯಗಳಿಗೆ ಕಾರಣವಾಗಿವೆ. ಅಲ್ಲದೆ, ನಾಲ್ಕೈದು ವರ್ಷಗಳಿಂದ ನರೇಗಲ್ಲ ಪ.ಪಂ.ಗೆ ಕಾಯಂ ಇಂಜಿನಿಯರ್ ಇಲ್ಲ. ಜಿಲ್ಲೆಯ ಇತರೆ ಪುರಸಭೆಗಳಲ್ಲಿ ಕರ್ತವ್ಯ ನಿರ್ವಹಿಸುವವರನ್ನು ಪ್ರಭಾರಿಯಾಗಿ ನೇಮಿಸಲಾಗುತ್ತಿದೆ.

ಸದಸ್ಯರಿಗೆ ಇಲ್ಲ ಅಧಿಕಾರ: ಪಟ್ಟಣದ 17 ವಾರ್ಡ್​ಗಳಿಗೆ ಆಯ್ಕೆಯಾದ ಸದಸ್ಯರು ಚುನಾವಣೆಯಲ್ಲಿ ಗೆದ್ದು ಬಂದು 2 ವರ್ಷ ಕಳೆದರೂ ಅವರಿಗೆ ಇನ್ನೂ ಅಧಿಕಾರ ಸಿಕ್ಕಿಲ್ಲ. ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ, ಉಪಾಧ್ಯಕ್ಷ ಮೀಸಲಾತಿ ತಾರತಮ್ಯದಿಂದ ಕೂಡಿದೆ ಎಂಬ ಆರೋಪದ ಹಿನ್ನೆಲೆಯಲ್ಲಿನ ಪ್ರಕರಣವು ನ್ಯಾಯಾಲಯದಲ್ಲಿದೆ. ಈ ಪ್ರಕರಣ ಇತ್ಯರ್ಥವಾಗಿ ಅಧಿಕಾರ ಸಿಗುವ ನಿರೀಕ್ಷೆಯಲ್ಲಿ ಸದಸ್ಯರು ಚಾತಕಪಕ್ಷಿಯಂತೆ ಕಾಯುತ್ತಿದ್ದಾರೆ. ಪಪಂ ಅಧಿಕಾರಿಗಳು ಚುನಾಯಿತ ಪ್ರತಿನಿಧಿಗಳ ಮಾತಿಗೆ ಕಿಮ್ಮತ್ತು ಕೊಡುತ್ತಿಲ್ಲ. ವಾರ್ಡ್​ಗಳಲ್ಲಿನ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವಲ್ಲಿ ಸದಸ್ಯರು ಹರಸಾಹಸ ಪಡಬೇಕಾದ ಪರಿಸ್ಥಿತಿ ನಿರ್ವಣವಾಗಿದೆ. ಮತ ನೀಡಿದ ಜನರಿಗೆ ಮುಖ ತೋರಿಸದ ಪರಿಸ್ಥಿತಿ ತಮ್ಮದಾಗಿದೆ ಎಂದು ಸದಸ್ಯರು ಗೋಳಾಡುತ್ತಿದ್ದಾರೆ.

ನರೇಗಲ್ಲ ಪಪಂ ಸದಸ್ಯರಾಗಿ ಆಯ್ಕೆಯಾಗಿ ಎರಡು ವರ್ಷ ಕಳೆದರೂ ಅಧಿಕಾರವಿಲ್ಲದೆ ಅಸಹಾಯಕರಾಗಿದ್ದೇವೆ. ವಾರ್ಡ್​ಗಳಲ್ಲಿನ ಹತ್ತು ಹಲವು ಸಮಸ್ಯೆಗಳನ್ನು ಹೊತ್ತು ಪ.ಪಂ.ಗೆ ಹೋದರೆ, ಯಾರೂ ಕೇಳುವವರಿಲ್ಲ. ಪಪಂನಲ್ಲಿ ಅಧಿಕಾರಿಗಳು ಆಡಿದ್ದೇ ಆಟವಾಗಿದೆ. ಮತ ನೀಡಿದ ಜನರಿಗೆ ಸ್ಪಂದಿಸಲು ಸಾಧ್ಯವಾಗುತ್ತಿಲ್ಲ. | ರಾಚಯ್ಯ ಮಾಲಗಿತ್ತಿಮಠ, 1ನೇ ವಾರ್ಡ್ ಸದಸ್ಯ
ಜಿಲ್ಲೆಯ ಸ್ಥಳೀಯ ಸಂಸ್ಥೆಗಳಲ್ಲಿ ಸಾಕಷ್ಟು ಹುದ್ದೆಗಳು ಖಾಲಿ ಇದ್ದು, ಹಂತ ಹಂತವಾಗಿ ನೇಮಕ ಮಾಡಲಾಗುತ್ತದೆ. ರಾಜಕೀಯದ ಒತ್ತಡದಿಂದಾಗಿ ನರೇಗಲ್ಲ ಪಪಂ ಮುಖ್ಯಾಧಿಕಾರಿ ನೇಮಕದಲ್ಲಿ ಸ್ವಲ್ಪ ಗೊಂದಲಗಳಾಗಿವೆ. ಆದಷ್ಟು ಬೇಗ ಸಮಸ್ಯೆ ಪರಿಹರಿಸಿ, ಕಾಯಂ ಮುಖ್ಯಾಧಿಕಾರಿಯನ್ನು ನೇಮಿಸಲಾಗುತ್ತದೆ. | ರುದ್ರೇಶ, ಜಿಲ್ಲಾ ಯೋಜನಾ ನಿರ್ದೇಶಕ