ಚಿಕ್ಕಮಗಳೂರು: ನಮ್ಮ ಸರ್ಕಾರವು ಪಂಚ ಗ್ಯಾರಂಟಿ ಯೋಜನೆಗಳನ್ನು ಜನರಿಗೆ ವ್ಯವಸ್ಥಿತವಾಗಿ ತಲುಪಿಸುವುದು ಮಾತ್ರವಲ್ಲದೆ ವಿವಿಧ ಯೋಜನೆಗಳನ್ನು ರೂಪಿಸಿ ರಾಜ್ಯದ ಸರ್ವತೋಮುಖ ಅಭಿವೃದ್ಧಿ ಕಾರ್ಯದಲ್ಲೂ ಮುಂದಿದೆ ಎಂದು ಚಿಕ್ಕಮಗಳೂರು ಶಾಸಕ ಎಚ್.ಡಿ.ತಮ್ಮಯ್ಯ ತಿಳಿಸಿದರು.
ವಿಧಾನಸಭಾ ಕ್ಷೇತ್ರದ ಬೆಳವಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಳವಾಡಿ ಗ್ರಾಮದ ರಸ್ತೆ ಮತ್ತು ಮಸೀದಿ ಅಭಿವೃದ್ಧಿಗೆ ಅಲ್ಪ ಸಂಖ್ಯಾತರ ಇಲಾಖೆ ಮತ್ತು ವಕ್ಫ್ ಬೋರ್ಡ್ ಇಲಾಖೆಯಿಂದ ೪೦ ಲಕ್ಷ ರೂ. ವೆಚ್ಚದಲ್ಲಿ ಅಭಿವೃದ್ಧಿ ಕೆಲಸಗಳಿಗೆ ಶಂಕುಸ್ಥಾಪನೆ ನೆರೆವೇರಿಸಿ ಮಾತನಾಡಿದರು.
ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರಲ್ಲಿ ಚುನಾವಣೆ ಪೂರ್ವದಲ್ಲಿ ಘೋಷಿಸಿದ ಅನ್ನಭಾಗ್ಯ, ಗೃಹಲಕ್ಷ್ಮೀ, ಗೃಹಜ್ಯೋತಿ, ಶಕ್ತಿಯೋಜನೆ ಹಾಗೂ ಯುವನಿಧಿಯಂತಹ ಪಂಚ ಗ್ಯಾರಂಟಿ ಯೋಜನೆಗಳನ್ನು ಕೇವಲ ೬ ತಿಂಗಳುಗಳಲ್ಲಿ ಜಾರಿಗೆ ತಂದು ಮಹಿಳಾ ಸಬಲೀಕರಣದೊಂದಿಗೆ ದೀನ ದಲಿತರನ್ನು ಹಸಿವು ಮುಕ್ತರನ್ನಾಗಿ ಮಾಡಿದೆ. ಈ ಮೂಲಕ ಬಡವರನ್ನು ಸಮಾಜದ ಮುಖ್ಯ ವಾಹಿನಿಗೆ ತಂದು ಆರ್ಥಿಕವಾಗಿ ಸಬಲರನ್ನಾಗಿ ಮಾಡಲು ಶ್ರಮಿಸುತ್ತಿದೆ ಎಂದರು.
ಕ್ಷೇತ್ರದ ಯಾವುದೇ ಗ್ರಾಮಕ್ಕೆ ಭೇಟಿ ನೀಡಿದರು ಅಲ್ಲಿರುವ ಷೋಷಿತ ಹಾಗೂ ಹಿಂದುಳಿದ ವರ್ಗಗಳ ಮಹಿಳೆಯರು ಸೇರಿದಂತೆ ಎಲ್ಲಾ ಮಹಿಳೆಯರು ಸಂತೋಷದಿAದ ಸ್ವಾವಲಂಬಿಗಳಾಗಿ ತಮ್ಮ ಜೀವನವನ್ನು ನಿರ್ವಹಿಸುತ್ತಿದ್ದಾರೆ. ಮಹಿಳಾ ಸಬಲೀಕರಣವು ಸರ್ಕಾರದ ಧ್ಯೇಯ ಎಂದು ಹೇಳಿದರು .
ಗ್ಯಾರಂಟಿ ಯೋಜನೆಗಳೊಂದಿಗೆ ಸರ್ಕಾರವು ವಿವಿಧ ಯೋಜನೆಗಳನ್ನು ರೂಪಿಸಿ ರಾಜ್ಯದ ಸರ್ವತೋಮುಖ ಅಭಿವೃದ್ಧಿ ಕಾರ್ಯಗಳನ್ನು ನಿರ್ವಹಿಸುತ್ತಿದೆ. ಕ್ಷೇತ್ರದ ಎಲ್ಲ ಗ್ರಾಮಗಳಲ್ಲಿಯು ಜನರು ರಸ್ತೆ ಹಾಗೂ ಸಮುದಾಯ ಭವನಗಳಿಗೆ ಅನುದಾನದ ಬೇಡಿಕೆ ಇಡುತ್ತಿದ್ದಾರೆ. ಮುಖ್ಯಮಂತ್ರಿಗಳು ನಮ್ಮ ಮನವಿ ಮೇರೆಗೆ ೨೫ ಕೊಟಿ ರೂ. ವಿಶೇಷ ಅನುದಾನವನ್ನು ನೀಡಿದ್ದಾರೆ. ಆ ಅನುದಾನದಲ್ಲಿ ಸುಮಾರು ೩ ಕೋಟಿಗೂ ಅಧಿಕ ಅನುದಾನದಲ್ಲಿ ಬೆಳವಾಡಿ, ಕೆ.ಬಿ.ಹಾಳ್ ಹಾಗೂ ಮಾಚೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಿವಿಧ ಕಾಮಗಾರಿಗಳಿಗಾಗಿ ಇಂದು ಶಂಕುಸ್ಥಾಪನೆ ನಡೆಸಲಾಗಿದೆ ಎಂದರು.
ಮಾಚೇನಹಳ್ಳಿ ತಾಂಡ್ಯದಿAದ ಜಾವಗಲ್‌ವರೆಗೂ ಸುಮಾರು ೫೦ ಲಕ್ಷ ರೂ. ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ನಿರ್ವಹಿಸಲಾಗುತ್ತಿದೆ. ಸಾರ್ವಜನಿಕರಿಗೆ ಹೆಚ್ಚು ಅಗತ್ಯವಿರುವ ಅಂಶಗಳಿಗೆ ಮೊದಲು ಆದ್ಯತೆ ನೀಡಿದ್ದು, ಇದೇ ರೀತಿ ಹಂತ ಹಂತವಾಗಿ ಕ್ಷೇತ್ರದ ಎಲ್ಲಾ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬಗರ್ ಹುಕ್ಕುಂ ಕಮಿಟಿ ಸದಸ್ಯರಾದ ಕೆಂಗೇಗೌಡ, ಶಂಕರ್ ನಾಯಕ್, ಅಮೀರ್ ಬೆಳವಾಡಿ, ಚಂದ್ರಶೇಖರ್, ಕೃಷ್ಣಮೂರ್ತಿ, ಹರೀಶ್, ನಾಗಣ್ಣ ಮತ್ತಿತರರಿದ್ದರು.