ಜಿಲ್ಲೆ

ಅಭಿವೃದ್ಧಿ ಕಾರ್ಯಗಳತ್ತಲೂ ಗಮನಹರಿಸಿ

ಹೊಳೆನರಸೀಪುರ: ರಾಜ್ಯ ಸರ್ಕಾರ ಐದು ಮಹತ್ವದ ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದ್ದು, ಅವುಗಳ ಜತೆಗೆ ಅಭಿವೃದ್ಧಿ ಕಾರ್ಯಗಳತ್ತಲೂ ಗಮನಹರಿಸಬೇಕಿದೆ ಎಂದು ಶಾಸಕ ಎಚ್.ಡಿ.ರೇವಣ್ಣ ಸಲಹೆ ನೀಡಿದರು.


ತಾಲೂಕಿನಲ್ಲಿ 25 ನೂತನ ಅಂಗನವಾಡಿ ಕಟ್ಟಡ ಉದ್ಘಾಟನೆಗಾಗಿ ಮಹಿಳಾ ಮತ್ತು ಶಿಶು ಅಭಿವೃದ್ಧಿ ಇಲಾಖೆ ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆ ಅನುಷ್ಠಾನದ ಭರದಲ್ಲಿ ರಾಜ್ಯದ ಅಭಿವೃದ್ಧಿಯನ್ನು ಕಡೆಗಣಿಸುವುದು ಸರಿಯಲ್ಲ ಎಂದರು.


ಕೇಂದ್ರ ಸರ್ಕಾರ ತಾಲೂಕಿನಲ್ಲಿ ನೂತನವಾಗಿ 25 ಅಂಗನವಾಡಿ ಕೇಂದ್ರ ಸ್ಥಾಪನೆಗೆ ಚಾಲನೆ ನೀಡಿದೆ, ಹೊಸದಾಗಿ ಆರಂಭಿಸಿರುವ ಅಂಗನವಾಡಿ ಕಟ್ಟಡಗಳಿಗೆ ಸೂಕ್ತ ಸವಲತ್ತು ನೀಡುವಲ್ಲಿ ರಾಜ್ಯ ಸರ್ಕಾರ ಮುಂದಾಗಬೇಕು ಎಂದರು.


ದೇಶಕ್ಕೆ ಸ್ವಾತಂತ್ರ ಬಂದು 75 ವರ್ಷ ಕಳೆದರೂ ಶೈಕ್ಷಣಿಕ ಪ್ರಗತಿಯಲ್ಲಿ ಹಿನ್ನಡೆ ಅನುಭವಿಸುತ್ತಿದೆ, ಆದ್ದರಿಂದ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕಿದೆ ಎಂದರು.
ಗೃಹಲಕ್ಷ್ಮೀ ಯೋಜನೆ ಅಂಗನವಾಡಿ ಕಾರ್ಯಕರ್ತೆಯರಿಗೆ ದೊರಕದಿರುವುದು ಸರಿಯಲ್ಲ, ಅವರನ್ನೂ ಈ ಯೋಜನೆಯಲ್ಲಿ ಸೇರ್ಪಡೆ ಮಾಡಿದರೆ ಅವರ ಕುಟುಂಬ ನಿರ್ವಹಣೆಗೆ ಸಹಕಾರಿಯಾಗಲಿದೆ ಎಂದರು.


ತಾಲೂಕಿನಲ್ಲಿ 263 ಅಂಗನವಾಡಿ ಕೇಂದ್ರಗಳು ಇದ್ದು, ಅವುಗಳಲ್ಲಿ 50ಕ್ಕೂ ಹೆಚ್ಚು ಕೇಂದ್ರಗಳು ಶಿಥಿಲಾವಸ್ಥೆಯಲ್ಲಿವೆ. ಅವುಗಳ ದುರಸ್ತಿ ಬದಲಾಗಿ ನೂತನ ಕಟ್ಟಡಗಳನ್ನು ನಿರ್ಮಿಸುವುದು ಸೂಕ್ತ ಎಂದರು.


ಪ್ರಭಾರ ಸಿಡಿಪಿಒ ಭಾಗ್ಯಮ್ಮ ಮಾತನಾಡಿ, ತಾಲೂಕಿನಲ್ಲಿ 263 ಕೇಂದ್ರಗಳಿದ್ದು, ಅವುಗಳಲ್ಲಿ ಬಹಳಷ್ಟು ಕೇಂದ್ರಗಳ ಮಕ್ಕಳಿಗೆ ಅವಶ್ಯವಾಗಿ ಬೇಕಿರುವ ಆಟೋಪಕರಣಗಳು ಇಲ್ಲದಿರುವುದು ಎದ್ದು ಕಾಣುತ್ತಿದೆ, ಕೊರತೆ ಇರುವ ಸವಲತ್ತುಗಳನ್ನು ನೀಡಿ ಸಮಸ್ಯೆ ಪರಿಹಾರಕ್ಕೆ ಸಾಥ್ ನೀಡುವಂತೆ ಕೋರಿದರು.
ತಾಲೂಕಿನಲ್ಲಿ 25 ಹೊಸ ಕೇಂದ್ರಗಳನ್ನು ಆರಂಭಿಸಲಾಗಿದೆ. ಅವುಗಳ ಆರಂಭದಲ್ಲಿ ಸಾಕಷ್ಟು ಸಮಸ್ಯೇ ಇದ್ದು ಅವನ್ನು ಪರಿಹರಿಸಿಕೊಡಬೇಕೆಂದು ಮನವಿ ಮಾಡಿ ಅಂಗನವಾಡಿ ಕಾರ್ಯಕರ್ತೆರಿಗೆ ಸರ್ಕಾರ ಬೆನ್ನೆಲುಬಾಗಿ ನಿಲ್ಲಬೇಕೆಂದರು.


ಪಟ್ಟಣದ ಅಂಗನವಾಡಿ ಕೇಂದ್ರಗಳಿಂದ ನೂರಕ್ಕೂ ಹೆಚ್ಚು ಸಿಬ್ಬಂದಿ ಹಾಜರಿದ್ದು, ನೂತನ ಕೊಠಡಿಗಳಿಗೆ ಮೂಲ ಸೌಕರ್ಯ ಕಲ್ಪಿಸುವಂತೆ ಮನವಿ ಮಾಡಿದರು.