ಜಿಲ್ಲೆ

ಅಭಿವೃದ್ಧಿ ಕಾರ್ಯ ಅನುಷ್ಠಾನ ಮಾಡುವಲ್ಲಿ ವಿಫಲ

ಕೆ.ಆರ್.ಪೇಟೆ: ಪಂಚಾಯಿತಿ ವ್ಯಾಪ್ತಿಯ ಕಾರ್ಯಕ್ರಮಗಳನ್ನು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಅನುಷ್ಠಾನ ಮಾಡುವಲ್ಲಿ ವಿಫಲವಾಗಿರುವುದಕ್ಕೆ ಶಾಸಕ ಎಚ್.ಟಿ.ಮಂಜು ಕಿಡಿಕಾರಿದರು. ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಪಿಡಿಒಗಳ ಕೆಡಿಪಿ ಸಭೆಯಲ್ಲಿ ಅವರು ಮಾತನಾಡಿದರು.

ಪಂಚಾಯಿತಿ ವ್ಯಾಪ್ತಿಯ ಕಾರ್ಯಕ್ರಮ ಸಮರ್ಪಕವಾಗಿ ಅನುಷ್ಠಾನ ಮಾಡಿದರೆ ಗ್ರಾಮದ ಅಭಿವೃದ್ಧಿ ಆಗಲಿದೆ. ಹಳ್ಳಿ ಜನ ಬೀದಿ ದೀಪ ಬದಲಾವಣೆ, ಚರಂಡಿ ಸ್ವಚ್ಛತೆ ಸಮಸ್ಯೆ ಬಗ್ಗೆ ದೂರು ಹೇಳುತ್ತಿದ್ದಾರೆ. ಸರ್ಕಾರದಲ್ಲಿ ಅಭಿವೃದ್ಧಿ ಕಾರ್ಯಕ್ಕೆ ಅನುದಾನ ನೀಡುತ್ತಿಲ್ಲ. ತಳಮಟ್ಟದಲ್ಲಿ ಕಾರ್ಯಕ್ರಮ ಅನುಷ್ಠಾನ ಮಾಡುತ್ತಿಲ್ಲ. ತಮ್ಮ ನಡವಳಿಕೆ ಬದಲಾಯಿಸಿಕೊಂಡು ಅಭಿವೃದ್ಧಿ ಕಡೆ ಗಮನಹರಿಸುವಂತೆ ಪಿಡಿಒಗಳಿಗೆ ಎಚ್ಚರಿಕೆ ನೀಡಿದರು.

ಶಾಸಕನಾಗಿ ಎರಡು ವರ್ಷ ಕಳೆದಿದೆ. ಒಬ್ಬ ಪಿಡಿಒ ಆಶ್ರಯ ಮನೆ ನಿವೇಶನಗಳನ್ನು ಗುರುತಿಸಿಲ್ಲ. ಆಶ್ರಯ ನಿವೇಶನ ಹಂಚಿಕೆಗೆ ಕ್ರಮವಹಿಸದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಕೂಡಲೇ ಗ್ರಾ.ಪಂ. ಮಟ್ಟದಲ್ಲಿ ಸರ್ಕಾರಿ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡುವಂತೆ ಸೂಚಿಸಿದರು.

ಗ್ರಾ.ಪಂ., ತಾ.ಪಂ. ಕಚೇರಿಯಲ್ಲಿ ರೆಕಾರ್ಡ್ ರೂಮ್ ಸಮರ್ಪಕವಾಗಿ ನಿರ್ವಹಿಸದಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ತಾಲೂಕಿನ ಬಹುತೇಕ ಗ್ರಾ.ಪಂ.ಗಳಲ್ಲಿ ರೆಕಾರ್ಡ್ ರೂಮ್‌ಗಳಿಲ್ಲ. ಸಾರ್ವಜನಿಕ ದಾಖಲೆಗಳು ಕಾಣಸಿಗುತ್ತಿಲ್ಲ ಎಂಬ ದೂರುಗಳಿವೆ. ಈ ಬಗ್ಗೆ ಸೂಕ್ತ ರೆಕಾರ್ಡ್ ರೂಮ್ ಇರಿಸುವಂತೆ ನಿರ್ದೇಶಿಸಿದರು.

ಕೆಡಿಪಿ ಸಭೆಗೆ ತಪ್ಪು ಮಾಹಿತಿ ನೀಡಿದ ಅಗ್ರಹಾರಬಾಚಹಳ್ಳಿ ಪಿಡಿಒ ಶಿಲ್ಪ ವಿರುದ್ಧ ಕಿಡಿಕಾರಿದರು. ಈ ರೀತಿ ಮಾಹಿತಿ ನೀಡಿದರೆ ಸಭೆ ಏಕೆ ಮಾಡಬೇಕು? ಕೆಲಸ ಮಾಡದಿದ್ದರೆ ಅಧಿಕಾರಿಗಳ ಮೇಲೆ ಜನರಲ್ಲಿ ಯಾವ ಭಾವನೆ ಬರುತ್ತದೆ ಎಂದು ಪ್ರಶ್ನಿಸಿದರು.

ನಾಲೆ ಅಭಿವೃದ್ಧಿ, ಅರಣ್ಯೀಕರಣ, ಬದು ನಿರ್ಮಾಣ, ಕೊಟ್ಟಿಗೆ ನಿರ್ಮಾಣ, ಕೆರೆ, ಸ್ಮಶಾನ ಅಭಿವೃದ್ಧಿ ಕುಂಠಿತವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ಬದು ನಿರ್ಮಾಣ ಮಾಡಲು ಪಿಡಿಒಗಳು ಹಿಂದೇಟು ಹಾಕುತ್ತಿದ್ದಾರೆ. ಮಳೆಯಲ್ಲಿ ಬದು ಹಾಳಾಗುತ್ತವೆ. ಆಡಿಟ್‌ನಲ್ಲಿ ರಿಕವರಿ ಆಗಲಿದೆ ಎಂದು ಹಿಂದೇಟು ಹಾಕುತ್ತಿರುವುದಾಗಿ ಇಒ ಸುಷ್ಮಾ ತಿಳಿಸಿದರು.

ತಹಸೀಲ್ದಾರ್ ಅಶೋಕ್, ಇಒ ಸುಷ್ಮಾ, ಜಿಪಂ ಎಇಇ, ರಶ್ಮಿ, ಎಇ ಪ್ರವೀಣಕುಮಾರ್, ಕಂದಾಯ ನಿರೀಕ್ಷಕರಾದ ಚಂದ್ರಕಲಾ, ಜ್ಞಾನೇಶ್, ಪಿಡಿಒ ಶೈಲಜಾ, ನವೀನ್, ರವಿಕುಮಾರ್, ಶಿಲ್ಪ ಸೇರಿದಂತೆ ಹಲವರಿದ್ದರು.