ಜಿಲ್ಲೆ

ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ

ಸಂಶಿ: ಲಾಕ್​ಡೌನ್ ಸಡಿಲಿಕೆ ಬಳಿಕ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಗೊಳ್ಳಲಾಗಿದೆ ಎಂದು ಶಾಸಕಿ ಕುಸುಮಾವತಿ ಶಿವಳ್ಳಿ ಹೇಳಿದರು.

ಸಂಶಿ ಗ್ರಾಮದ ನೀಲಮ್ಮ ಅಕ್ಕಿ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ 15 ಲಕ್ಷ ರೂ. ಮೊತ್ತದ ಕೊಠಡಿ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. ಈ ಪ್ರೌಢಶಾಲೆ ಆರಂಭದಿಂದ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಜತೆಗೆ ಹಂತ ಹಂತವಾಗಿ ಶೈಕ್ಷಣಿಕ ಸಾಧನೆ ಮಾಡುತ್ತಿದೆ. ಬರುವ ದಿನಗಳಲ್ಲಿ ಶಾಲೆಯ ಅಭಿವೃದ್ಧಿಗೆ ಮತ್ತಷ್ಟು ಸಹಕಾರ ನೀಡಲಾಗುವುದು ಎಂದರು. ಮುಖಂಡ ಬಸಲಿಂಗಪ್ಪ ಕೋರಿ ಮಾತನಾಡಿ, ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ಈವರೆಗೆ ಶಾಲೆ- ಕಾಲೇಜ್​ಗಳು ಆರಂಭವಾಗಿಲ್ಲ. ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗಿಸುವ ನಿಟ್ಟಿನಲ್ಲಿ ಇತ್ತೀಚೆಗೆ ಸರ್ಕಾರ ಆನ್​ಲೈನ್ ತರಗತಿಗಳನ್ನು ಆರಂಭಿಸಿದೆ ಎಂದರು. ಎಪಿಎಂಸಿ ಸದಸ್ಯ ಎ.ಬಿ. ಉಪ್ಪಿನ, ಭೂದಾನಿ ವಿ.ಡಿ. ಅಕ್ಕಿ, ನಿಂಗಪ್ಪ ಹಳ್ಳಿಕೇರಿ, ಪ್ರಕಾಶಗೌಡ ಪಾಟೀಲ, ಬಸವರಾಜ ನಾಯ್ಕರ, ಮೋಹನ ಪಾಟೀಲ, ಮುಖ್ಯ ಶಿಕ್ಷಕ ಎನ್.ಎಸ್. ನಾಡಗೌಡರ, ಹರೀಶ ಲಕ್ಷ್ಮೇಶ್ವರ ಇದ್ದರು.