ಜಿಲ್ಲೆ

ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ

ಮಳವಳ್ಳಿ: ಪಟ್ಟಣ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳಲ್ಲಿ 151 ಲಕ್ಷ ರೂ. ವೆಚ್ಚದ ರಸ್ತೆ ಮತ್ತು ಚರಂಡಿ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಡಾ.ಕೆ.ಅನ್ನದಾನಿ ಮಂಗಳವಾರ ಭೂಮಿಪೂಜೆ ನೆರವೇರಿಸಿದರು.


ಪಟ್ಟಣದ ಡಿಪೋ ರಸ್ತೆಯಿಂದ ಎನ್.ಎಚ್.209 ಬಾಯ್ಸ್ ಹೋಂ ಸೇರುವ ರಸ್ತೆವರೆಗೆ ಮತ್ತು ಚರಂಡಿ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಸಿದ್ಧಾರ್ಥನಗರ ಹೊಸ ಬಡಾವಣೆ ಸೇರಿದಂತೆ ಸುತ್ತ ಮುತ್ತಲಿನ ಬಡಾವಣೆ ನಿವಾಸಿಗಳಿಗೆ ಅನುಕೂಲ ಕಲ್ಪಿಸಲು ರಸ್ತೆ ಅಭಿವೃದ್ಧಿಗೆ ಚಾಲನೆ ನೀಡಲಾಗಿದೆ ಎಂದರು. ಪುರಸಭೆ ಅಧ್ಯಕ್ಷೆ ರಾಧಾ ನಾಗರಾಜು, ಉಪಾಧ್ಯಕ್ಷ ಪ್ರಶಾಂತ್, ಸದಸ್ಯರಾದ ವಡ್ಡರಹಳ್ಳಿ ಸಿದ್ಧರಾಜು, ನಂದಕುಮಾರ್ ಇತರರಿದ್ದರು.

ವಿವಿಧೆಡೆ ಚಾಲನೆ: ಕುಂದೂರು, ಕಂಚುಗಹಳ್ಳಿ, ಕಗ್ಗಳ, ಕಣಿಕಹಳ್ಳಿ, ಕಲ್ಯಾಣಿ ಕೊಪ್ಪಲು, ಬಿ.ಜಿ.ಮೊಳೆ ಗ್ರಾಮಗಳಲ್ಲಿ ರಸ್ತೆ ಮತ್ತು ಚರಂಡಿ ಅಭಿವೃದ್ಧಿಗೆ ಶಾಸಕರು ಚಾಲನೆ ನೀಡಿದರು.